ಚಾಮರಾಜನಗರದಲ್ಲಿ ಶಾಸಕ ಎ.ಆರ್‌. ಕೃಷ್ಣಮೂರ್ತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮುಖ್ಯಮಂತ್ರಿಗಳ ವಿವೇಚನ ಅನುದಾನ 800 ಸಾವಿರ ಕೋಟಿ ಇದ್ದು, ಈ ಅನುದಾನದಲ್ಲಿ ಚಾಮರಾಜನಗರ ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ನೀಡುವ ಭರವಸೆಯಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2024-25ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ಸ್ವಿಮ್ಮಿಂಗ್‌ ಪೂಲ್‌ ಘೋಷಣೆ ಹಾಗೂ ಯಳಂದೂರಿನಲ್ಲಿ 100 ಹಾಸಿಗೆ ಆಸ್ಪತ್ರೆ ಮಾತ್ರ ಘೋಷಣೆ ಮಾಡಲಾಗಿತ್ತು. ಯಾವುದೇ ವಿಶೇಷ ಅನುದಾನವನ್ನು ನೀಡಿಲ್ಲ. 24ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟದಲ್ಲಿ ವಿಶೇಷ ಪ್ಯಾಕೇಜ್ ಅನ್ನು ಮುಖ್ಯಮಂತ್ರಿಗಳ ವಿವೇಚನ ಅನುದಾನದಲ್ಲಿ ಘೋಷಣೆ ಮಾಡಲಿದ್ದಾರೆ ಎಂಬ ಭರವಸೆ ಇದೆ ಎಂದರು.

ಮಲೆಮಹದೇಶ್ವರ ಬೆಟ್ಟದಲ್ಲಿ ವಿಶೇಷ ಸಚಿವ ಸಂಪುಟ ಸಭೆಯನ್ನು ನಡೆಸಿ ಮಲೆಮಹದೇಶ್ವರ ಬೆಟ್ಟದಲ್ಲಿರುವ ಸಮಸ್ಯೆಗಳ ಬಗೆಹರಿಸುವ ನಿಟ್ಟಿನಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಮೆಡಿಕಲ್‌ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು, ಕೃಷಿ ವಿಜ್ಞಾನ ಕಾಲೇಜು, ಕಾನೂನು ಕಾಲೇಜು, ಮಲೆಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ, ಕೆಲ್ಲಂಬಳ್ಳಿ-ಬದನಗುಪ್ಪೆ ಕೈಗಾರಿಕಾ ಪ್ರದೇಶಗಳನ್ನು ಸ್ಥಾಪನೆ ಮಾಡಲಾಗಿದ್ದು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತುಂಬ ಕಾಳಜಿ ಇದೆ ಜಿಲ್ಲೆಯ ಅಭಿವೃದ್ಧಿಗೆ ನೂರಾರು ಕೋಟಿ ರು.ಗಳ ಅನುದಾನ ನೀಡಲಿದ್ದಾರೆ ಎಂದರು.

ಬಿಳಿಗಿರಿ ರಂಗನ ಬೆಟ್ಟದಲ್ಲೂ ಸಿಎಂ ಸಭೆ ನಡೆಸಲಿ;

1952ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದು ಸರ್ಕಾರ ರಚನೆಯಾಗಿದೆ. 1952ರಲ್ಲಿ ಸರ್ಕಾರ ಮತ್ತು ರಾಜಮನೆತನದ ನಡುವೆ ನಡೆದ ಒಪ್ಪಂದದ ಪತ್ರವನ್ನು ಮಹಾರಾಣಿ ಜಿಲ್ಲಾಧಿಕಾರಿ ಅವರಿಗೆ ಕಳುಹಿಸಿ ಮನವಿ ಮಾಡಿದ್ದಾರೆ. ಸಾಗುವಳಿ ಮಾಡುತ್ತಿದ್ದ ರೈತರಿಗೆ ರಾಜಮನೆತನದಿಂದ ಅನ್ಯಾಯವಾಗಲ್ಲ ಎಂದು ಹೇಳಿಕೆ ನೀಡಿದೆ. ಸರ್ಕಾರ ಮಧ್ಯ ಪ್ರವೇಶಿಸಿ ಈ ಬಗ್ಗೆ ಪರಿಶೀಲಿಸಿ ನ್ಯಾಯ ಸಮ್ಮತ ತೀರ್ಮಾನ ತೆಗೆದುಕೊಳ್ಳಬೇಕು ಎಂದರು. ಈ ನಿಟ್ಟಿನಲ್ಲಿ ಬಿಳಿಗಿರಿರಂಗನ ಬೆಟ್ಟದಲ್ಲೂ ತುಂಬ ಸಮಸ್ಯೆಗಳಿದ್ದು, ಬಗೆಹರಿಸುವ ನಿಟ್ಟಿನಲ್ಲಿ ಬಿಳಿಗಿರಿರಂಗನ ಬೆಟ್ಟದಲ್ಲಿ ಸಂಪುಟ ಸಭೆ ನಡೆಸಬೇಕು ಎಂದು ಮನವಿ ಮಾಡುತ್ತೇವೆ ಎಂದರು.

ಕೋವಿಡ್‌ ಸಂತ್ರಸ್ತರ ದಾರಿತಪ್ಪಿಸುತ್ತಿದ್ದಾರೆ:

ಕೋವಿಡ್‌ ಸಂದರ್ಭದಲ್ಲಿ ಬಿಜೆಪಿ ಸರ್ಕಾರವಿತ್ತು. ತಪ್ಪು ಮಾಡಿದವರು ಬಿಜೆಪಿಯವರು ಅಧಿಕಾರದಲ್ಲಿಲ್ಲದಿದ್ದರೂ ಕೂಡ ಸಂತ್ರಸ್ತರ ಮನೆಗೆ ಹೋಗಿ ಕಾಂಗ್ರೆಸ್‌ ಸರ್ಕಾರ ಪ್ರತಿ ಕುಟುಂಬಕ್ಕೂ ಒಂದೊಂದು ಲಕ್ಷದಂತೆ 36 ಜನರಿಗೆ ಪರಿಹಾರ ನೀಡಿದ್ದೇವೆ. ತಾತ್ಕಾಲಿಕ ಉದ್ಯೋಗವನ್ನು ನೀಡಿ ಆದೇಶ ನೀಡಿದ್ದೇವೆ ಅವರು ಕೆಲಸಕ್ಕೆ ಹಾಜರಾಗಿಲ್ಲ. ಸಂತ್ರಸ್ತರನ್ನು ಪಟ್ಟಭದ್ರ ಹಿತಾಸಕ್ತಿಗಳು ದಾರಿತಪ್ಪಿಸಿವೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಚಂದ್ರು, ಮುಖಂಡರಾದ ಸೋಮಣ್ಣ, ಆರ್‌. ಮಹದೇವ, ನಂಜುಂಡಸ್ವಾಮಿ, ಪ್ರಸಾದ್‌, ರಾಜೇಶ್‌ ಇದ್ದರು.