ಅಲೆಮಾರಿಗಳ ಒಳ ಮೀಸಲು ಸಮಸ್ಯೆ ನಿವಾರಣೆಗೆ ಸಿಎಂ ಯತ್ನ

| Published : Aug 24 2025, 02:00 AM IST

ಅಲೆಮಾರಿಗಳ ಒಳ ಮೀಸಲು ಸಮಸ್ಯೆ ನಿವಾರಣೆಗೆ ಸಿಎಂ ಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕೊರಮ ಜನಾಂಗದ ಕ್ಷೇಮಾಭಿವೃದ್ಧಿ ಸಂಘದಿಂದ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ಕುಳುವ ಜನಾಂಗದ ಸಮಾವೇಶವನ್ನು ಸಚಿವ ಶಿವರಾಜ ತಂಗಡಗಿ ಉದ್ಘಾಟಿಸಿದರು. ಸಚಿವ ಡಿ.ಸುಧಾಕರ್ ಇದ್ದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಪರಿಶಿಷ್ಟರಿಗೆ ಒಳ ಮೀಸಲು ಕಲ್ಪಿಸುವಾಗ ಅಲೆಮಾರಿಗಳಿಗೆ ಅನ್ಯಾಯವಾಗಿದೆ ಎಂಬ ಕೂಗು ಎದ್ದಿದ್ದು ಸಮಸ್ಯೆ ನಿವಾರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಚಿತ್ರದುರ್ಗ ಜಿಲ್ಲಾ ಕೊರಮ ಜನಾಂಗದ ಕ್ಷೇಮಾಭಿವೃದ್ಧಿ ಸಂಘದಿಂದ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ಕುಳುವ ಜನಾಂಗದ ಸಮಾವೇಶ ಹಾಗೂ ಕಾಯಕಯೋಗಿ ಶಿವಶರಣ ಶ್ರೀ ನುಲಿಯ ಚಂದಯ್ಯನವರ 918ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಒಳ ಮೀಸಲಾತಿ ವಿಚಾರದಲ್ಲಿ ಪರಿಶಿಷ್ಟ ಜಾತಿಯ ಎಲ್ಲಾ 101 ಸಮುದಾಯಗಳಿಗೆ ನ್ಯಾಯಯುತ ಹಂಚಿಕೆ ಮಾಡಲಾಗಿದೆ ಎಂದರು.ಅಪಸ್ವರಗಳು ಏಳುವುದು ಸಹಜ, ಇದುವರೆಗೂ ಪರಿಶಿಷ್ಟ ಪಟ್ಟಿಯಲ್ಲಿ 101 ಜಾತಿಗಳು ಒಂದೇ ಕಡೆ ಇದ್ದವು.ಈಗ ಪ್ರತ್ಯೇಕಿಸಿ ಮೂರು ಭಾಗಗಳಲ್ಲಿ ಹಂಚಿಕೆ ಮಾಡಲಾಗಿದೆ. ಅಲೆಮಾರಿಗಳನ್ನು ಶೇ.5ರ ಮೀಸಲಾತಿ ವ್ಯಾಪ್ತಿಗೆ ಹಾಕಿದ್ದಾರೆ. ಕೆಲವರು ಇದನ್ನು ಒಪ್ಪಿಕೊಂಡಿದ್ದರೆ, ಮತ್ತೊಂದಿಷ್ಟು ಮಂದಿ ತಿರಸ್ಕರಿಸಿದ್ದಾರೆ. ಕೊರಮ, ಕೊರಚ, ಭೋವಿ, ಬಂಜಾರ ಸಮುದಾಯದವರು ಒಂದೇ ತಕ್ಕಡಿಯಲ್ಲಿದ್ದೇವೆ, ಕೊರಚ, ಕೊರಮ, ಭಜಂತ್ರಿ ಸಮುದಾಯಗಳು ಬಹಳಷ್ಟು ಕಷ್ಟದಲ್ಲಿವೆ. ಒಳ ಮೀಸಲಾತಿ ವಿಚಾರದಲ್ಲಿ ಕುಳುವ ಸಮಾಜಕ್ಕೆ ಯಾವುದೇ ಕಾರಣಕ್ಕೂ ಅನ್ಯಾಯ ಆಗಲು ಮುಖ್ಯಮಂತ್ರಿಗಳು ಅವಕಾಶ ಮಾಡಿಕೊಡುವುದಿಲ್ಲವೆಂದು ಶಿವರಾಜ ತಂಗಡಗಿ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ರಾಜ್ಯದಲ್ಲಿ ಒಳ ಮೀಸಲು ಜಾರಿಗೆ ತೀರ್ಮಾನಿಸಿ ಹಂಚಿಕೆ ಮಾಡಲಾಗಿದೆ. ನಮ್ಮದು ಜಾತ್ಯತೀತ ಸರಕಾರ. ಎಲ್ಲ ವರ್ಗಕ್ಕೂ ನ್ಯಾಯ ಸಿಗಬೇಕು, ಕಟ್ಟಕಡೆಯ ಸಮಾಜಕ್ಕೂ ನ್ಯಾಯ ದೊರಕಬೇಕು ಎಂಬ ಆಶಯ ಹೊಂದಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಿದೆ. ಸಣ್ಣ ಪುಟ್ಟ ವ್ಯತ್ಯಾಸಗಳಾಗಿದ್ದು ಮುಂದಿನ ದಿನಗಳಲ್ಲಿ ಅದನ್ನು ಕೂಡ ಸರಿಪಡಿಸುವ ಕೆಲಸ ಮಾಡಲಿದೆ ಎಂದರು.

ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಮಸ್ಕಿ ಇರಕಲ್ ಮಠದ ಶ್ರೀ ಬಸವ ಪ್ರಸಾದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷೆ ಜಿ.ಪಲ್ಲವಿ, ಅಖಿಲ ಕರ್ನಾಟಕ ಕುಳುವ ಮಹಾಸಂಘ ರಾಜ್ಯಾಧ್ಯಕ್ಷ ಶಿವಾನಂದ ಎಂ.ಭಜಂತ್ರಿ, ಮಾಜಿ ಶಾಸಕ ಎಂ.ಚಂದ್ರಣ್ಣ, ಜಿಲ್ಲಾ ಕೊರಮ ಜನಾಂಗದ ಕ್ಷೇಮಾಭಿವೃದ್ಧಿ ಅಧ್ಯಕ್ಷ ಕೆ.ಕೃಷ್ಣಪ್ಪ, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಎಚ್.ಅಂಜನಮೂರ್ತಿ ಉಪಸ್ಥಿತರಿದ್ದರು.