ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಕೋಟೆ
ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ಖಾಜಿ ಹೊಸಹಳ್ಳಿ ಗ್ರಾಮದ ದಲಿತ ಪರ ಹೋರಾಟಗಾರರು ಹಾಗೂ ದಲಿತ ಸಂಘರ್ಷ ಸಮಿತಿ ಕರ್ನಾಟಕ ಸಂಘಟನೆಯ ಬೆಂಗಳೂರು ವಿಭಾಗೀಯ ಸಂಚಾಲಕ ಮಂಜುನಾಥ್ ಅಣ್ಣಯ್ಯ ಅವರ ಸಂಗ್ರಹಿತ ಅಭಿನಂದನೆ ಪುಸ್ತಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದರು.ಪುಸ್ತಕ ಬಿಡುಗಡೆ ಬಳಿಕ ದಲಿತ ಸಂಘರ್ಷ ಸಮಿತಿ ಕರ್ನಾಟಕ ಸಂಘಟನೆಯ ಬೆಂಗಳೂರು ವಿಭಾಗೀಯ ಸಂಚಾಲಕ ಮಂಜುನಾಥ್ ಅಣ್ಣಯ್ಯ ಮಾತನಾಡಿ, ಸಿದ್ದರಾಮಯ್ಯ ಅವರ ರಾಜಕೀಯ ಹಾದಿ ದಲಿತ ಸಮುದಾಯದ ಬೆಳವಣಿಗೆಗೆ ಮಹತ್ವದ ಪ್ರಭಾವ ಬೀರಿದೆ. ದಲಿತ ಸಮುದಾಯದ ಹಕ್ಕು, ಸಾಮಾಜಿಕ ನ್ಯಾಯದ ಪರ ಶಾಸನ ಸಭೆ ಒಳಗೆ ಮತ್ತು ಹೊರಗೆ ಎದೆಗಾರಿಕೆಯಿಂದ ಹೋರಾಡಿದ್ದಾರೆ. ಅವರ ಆಡಳಿತ ಮತ್ತು ರೂಪಿಸಿರುವ ನೀತಿಗಳು ದಲಿತ ಸಮುದಾಯದ ಅಭಿವೃದ್ಧಿಗೆ ಪೂರಕವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿ ಐತಿಹಾಸಿಕ ನಿರ್ಣಯಗಳನ್ನ ಕೈಗೊಂಡಿದ್ದು ಪ್ರಮುಖವಾಗಿ ದಲಿತರ ಸಾಲ ಮನ್ನಾ, ಎಸ್‌ಸಿಪಿ ಟಿಎಸ್‌ಪಿ ಕಾಯ್ದೆ ಜಾರಿ, ಪಿಟಿಸಿಎಲ್ ಕಾಯ್ದೆ ಜಾರಿ, ಪ್ರಮುಖವಾಗಿ ೨೦೨೫ - ೨೬ನೇ ಸಾಲಿನ ಬಜೆಟ್‌ನಲ್ಲಿ ಸರಕು ಮತ್ತು ಸಾಗಾಣಿಕೆಯಲ್ಲಿ ಎಸ್ಸಿ/ಎಸ್ಟಿ ಸರಬರಾಜುದಾರರಿಗೆ ೧ ಕೋಟಿ, ಹಿಂದುಳಿದವರಿಗೆ ೨ ಕೋಟಿ ರು.ವರೆಗೆ ಮೀಸಲಾತಿಯನ್ನು ಅನುಷ್ಠಾನಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಅಭಿನಂದನೆ ಪುಸ್ತಕದ ಮೂಲಕ ಸಿಎಂ ಸಿದ್ದರಾಮಯ್ಯ, ಸಚಿವ ಡಾ.ಎಚ್.ಸಿ ಮಹದೇವಪ್ಪ ಸೇರಿದಂತೆ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಪುಸ್ತಕದ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು.
ಡಿಎಸ್‌ಎಸ್‌ಕೆ ರಾಜ್ಯ ಸಂಚಾಲಕ ಅಣ್ಣಯ್ಯ ಮಾತನಾಡಿ, ಅಹಿಂದ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ, ೫ ದಶಕಗಳಿಂದ ದಸಸಂಕ ಚಳುವಳಿ ಜೊತೆ ನಿರಂತರವಾಗಿ ವಿಚಾರ ಸಂಕಿರಣಗಳಲ್ಲಿ, ಸಮಾವೇಶಗಳಲ್ಲಿ, ಸಂವಾದ ಕಾರ್ಯಕ್ರಮಗಳಲ್ಲಿ, ಅಧ್ಯಯನ ಶಿಬಿರಗಳಲ್ಲಿ ಭಾಗವಹಿಸಿ ದಲಿತ ನಾಯಕರುಗಳ ಒಡನಾಟ ಹೊಂದಿರುವ ಏಕೈಕ ಮುಖ್ಯಮಂತ್ರಿ ಆಗಿದ್ದಾರೆ. ಆದ್ದರಿಂದ ಅವರಿಂದ ದಲಿತರ ಶ್ರೇಯೋಭಿವೃದ್ದಿ ಜೊತೆಗೆ ಶಕ್ತಿ ಸಿಕ್ಕಂತಾಗಿದೆ ಎಂದರು.ದಲಿತ ಸಂಘರ್ಷ ಸಮಿತಿ ಕರ್ನಾಟಕ ರಾಜ್ಯ ಸಂಚಾಲಕ ಅಣ್ಣಯ್ಯ, ಡಾ.ಡಿ.ಜಿ ಸಾಗರ್, ರಾಜ್ಯ ಸಂಘಟನೆಯ ಸಂಚಾಲಕರಾದ ಬೆನ್ನಿಗಾನಹಳ್ಳಿ ರಾಮಚಂದ್ರ, ರಾಜ್ಯ ಸಲಹಾ ಸಮಿತಿ ಸದಸ್ಯ ಡಾ.ಕೆ.ರವಿಕುಮಾರ್, ಬೆಂಗಳೂರು ನಗರ ಸಂಘಟನಾ ಸಂಚಾಲಕ ಸುರೇಶ್ ಕುಮಾರ್, ಬಾಬು ಉಪಸ್ಥಿತರಿದ್ದರು.