ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ನಿರುದ್ಯೋಗದ ಸಮಸ್ಯೆಯಿಂದ ಬಳಲಿ, ಹೊಟ್ಟೆ ಹಿಟ್ಟಿಗಾಗಿ ಉದ್ಯೋಗ ಅರಸಿ ವಿದೇಶಕ್ಕೆ ಹೋಗಿ ಊಟ ನೀರಿಗೂ ಪರದಾಡುತ್ತಿದ್ದ ಕನ್ನಡಿಗರ ರಕ್ಷಣೆಗೆ ಕರ್ನಾಟಕ ಸರ್ಕಾರ ಮುಂದಾಗಿದೆ. ಬೀದರ್ ಜಿಲ್ಲಾಡಳಿತ ಉಜ್ಬೇಕಿಸ್ತಾನದಲ್ಲಿರುವ ಕನ್ನಡಿಗರಿಗೆ ಮಾತನಾಡಿ ಅಭಯ ನೀಡಿದೆ. ಶೀಘ್ರದಲ್ಲಿ ಸ್ವದೇಶಕ್ಕೆ ಸುರಕ್ಷಿತವಾಗಿ ವಾಪಸ್ ಕರೆತರುವ ಭರವಸೆ ನೀಡಿದೆ.ಬೀದರ್, ಕಲಬುರಗಿ ಮತ್ತಿತರ ಜಿಲ್ಲೆಗಳಿಂದ ಉಜ್ಬೇಕಿಸ್ತಾನದಲ್ಲಿ ಉತ್ತಮ ಉದ್ಯೋಗ ವ್ಯವಸ್ಥೆ ಮಾಡುವದಾಗಿ ಮೋಸದಿಂದ 34 ಯುವಕರನ್ನು ಕರೆದೊಯ್ದಿದ್ದ ಮಧ್ಯವರ್ತಿಗಳು, ಅಲ್ಲಿ ಕನ್ನಡಿಗ ಯುವಕರು ಪಡುತ್ತಿರುವ ಸಂಕಷ್ಟವನ್ನು ಮತ್ತು ಸ್ವದೇಶಕ್ಕೆ ವಾಪಸ್ ಕರೆಯಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಅಂಗಲಾಚಿದ್ದ ಯುವಕರ ಮನವಿಯನ್ನು ಕನ್ನಡಪ್ರಭ ನೌಕರಿ ಹೆಸರಲ್ಲಿ ಮೋಸ: ಉಜ್ಬೇಕಿಸ್ತಾನದಲ್ಲಿ ಕನ್ನಡಿಗರ ನರಕಯಾತನೆ ವಿಶೇಷ ವರದಿ ಮಾಡಿ ಸರ್ಕಾರದ ಗಮನ ಸೆಳೆದಿತ್ತು.
ಉಜ್ಬೇಕಿಸ್ತಾನದಲ್ಲಿನ ನರಕಯಾತನೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದ ಕನ್ನಡಪ್ರಭ ವರದಿಯನ್ನಾಧರಿಸಿ ಅಲ್ಲಿ ಸಿಲುಕಿರುವ ಯುವಕರುಗಳನ್ನು ವಾಪಸ್ ಕರೆಯಿಸಿಕೊಳ್ಳಲು ಮುಖ್ಯಮಂತ್ರಿಗಳ ಕಾರ್ಯಾಲಯ ಬೀದರ್ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದಂತೆ ಜಿಲ್ಲಾಧಿಕಾರಿಗಳು ಶುಕ್ರವಾರ ಉಜ್ಬೇಕಿಸ್ತಾನದಲ್ಲಿರುವ ಯುವಕರೊಂದಿಗೆ ಸಂಪರ್ಕ ಸಾಧಿಸಿ ಅಭಯ ನೀಡಿದ್ದಾಗಿ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ತಿಳಿಸಿದ್ದಾರೆ.ಬೀದರ್ ಜಿಲ್ಲಾಡಳಿತ ತಮ್ಮನ್ನು ಸಂಪರ್ಕಿಸಿ ಸ್ವದೇಶಕ್ಕೆ ವಾಪಸ್ ಕರೆಯಿಸಿಕೊಳ್ಳುವ ಎಲ್ಲ ವ್ಯವಸ್ಥೆಗಳನ್ನು ಮಾಡುವದಾಗಿ ಹೇಳಿದ್ದು ನಮ್ಮಲ್ಲಿ ಮತ್ತಷ್ಟು ಧೈರ್ಯ ತುಂಬಿದೆ. ಕನ್ನಡಪ್ರಭ ವಿಶೇಷ ವರದಿ ಮೂಲಕ ನಮ್ಮ ಸಮಸ್ಯೆಯನ್ನು ಸರ್ಕಾರಕ್ಕೆ ತಲುಪಿಸಿದ್ದು ಅಭಿನಂದನಾರ್ಹವಾಗಿದೆ, ನಾವುಗಳು ಆ. 5ರಂದು ಸ್ವದೇಶಕ್ಕೆ ವಾಪಸ್ ಆಗುವ ಸಂಭವವಿದೆ ಎಂದು ಉಜ್ಬೇಕಿಸ್ತಾನದಲ್ಲಿ ಸಿಲುಕಿರುವ ಯುವಕ ಚಂದ್ರಕಾಂತ ಸಂತಸ ವ್ಯಕ್ತಪಡಿಸಿದ್ದಾರೆ.
ಉಜ್ಬೇಕಿಸ್ತಾನದಲ್ಲಿ ಸಿಲುಕಿರುವ ನಮ್ಮ ಕನ್ನಡಿಗರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸ್ ಕರೆಯಿಸಿಕೊಳ್ಳಲು ಎಲ್ಲ ವ್ಯವಸ್ಥೆಗಳನ್ನು ನಮ್ಮ ಸರ್ಕಾರ ಮಾಡುತ್ತದೆ. ಇನ್ನು ಮೋಸದಿಂದ ಉದ್ಯೋಗ ಆಸೆ ತೋರಿಸಿ ಯುವಕರನ್ನು ಸಂಕಷ್ಟಕ್ಕೆ ನೂಕಿರುವ ಮಧ್ಯವರ್ತಿಗಳ ವಿರುದ್ಧ ಕಾನೂನಿನ ಕಠಿಣ ಕ್ರಮ ಕೈಗೊಳ್ಳಲಾಗುವದು.- ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವರು, ಬೀದರ್