ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಂದಿನ ದಿನಗಳಲ್ಲಿ ವಿಜಯಪುರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಮಾಡುತ್ತೇವೆ ಎಂದು ಹೇಳಿರುವುದು ಸುಳ್ಳು ಭರವಸೆಯಾಗಿದೆ. ಇನ್ನು ಕೆಲವು ದಿನಗಳಲ್ಲಿ ಅವರು ಮನೆಗೆ ಹೋಗಲಿದ್ದು, ಸಿಎಂ ಮೋಸದ ಮಾತುಗಳನ್ನಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜ.9ರಂದು ವಿಜಯಪುರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಂದಿನ ದಿನಗಳಲ್ಲಿ ವಿಜಯಪುರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಮಾಡುತ್ತೇವೆ ಎಂದು ಹೇಳಿರುವುದು ಸುಳ್ಳು ಭರವಸೆಯಾಗಿದೆ. ಇನ್ನು ಕೆಲವು ದಿನಗಳಲ್ಲಿ ಅವರು ಮನೆಗೆ ಹೋಗಲಿದ್ದು, ಸಿಎಂ ಮೋಸದ ಮಾತುಗಳನ್ನಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇವಲ ಸರ್ಕಾರಿ ಮೆಡಿಕಲ್ ಕಾಲೇಜು ಮಾಡುತ್ತೇವೆ ಎಂದು ಹೇಳಿ ಜಾರಿಕೊಂಡರೆ ಹೇಗೆ?. ಮುಂದಿನ ಬಜೆಟ್‌ನಲ್ಲಿ ಅನುದಾನ ಇಡುತ್ತಾರೋ? ಯಾವಾಗ ಮೆಡಿಕಲ್ ಕಾಲೇಜು ಮಾಡುತ್ತಾರೆ ಎಂದು ಸಿಎಂ ಘೋಷಿಸಿಲ್ಲ. ಇನ್ನು ಕೆಲವು ದಿನಗಳಲ್ಲಿ ಅವರು ಸಿಎಂ ಸ್ಥಾನದಿಂದ ಇಳಿದು ಮನೆಗೆ ಹೋದರೆ, ಈ ಮಾತಿಗೆ ಬೆಲೆ ಇರೋದಿಲ್ಲ. ಆದ್ದರಿಂದ ಖಚಿತವಾಗಿ ತಿಳಿಸಬೇಕು. ಸಿಎಂ ಸಿದ್ದರಾಮಯ್ಯನವರು ಸರ್ಕಾರಿ ವೈದ್ಯಕೀಯ ಕಾಲೇಜಿನ ಬಗ್ಗೆ ಹಾವೇರಿಯಲ್ಲಿ ಹೇಳಿದ್ದು ಹಾಗೂ ವಿಜಯಪುರದಲ್ಲಿ ಹೇಳಿದ್ದರಲ್ಲಿ ವ್ಯತ್ಯಾಸವಿದ್ದು, ಇದರಲ್ಲಿ ಸ್ಪಷ್ಟತೆಯಿಲ್ಲ ಎಂದರು.

ಸರ್ಕಾರಿ ಮೆಡಿಕಲ್ ಕಾಲೇಜಿಗಾಗಿ ಆಗ್ರಹಿಸಿ ಹೋರಾಟ ಹಮ್ಮಿಕೊಂಡಿದ್ದ ಹೋರಾಟಗಾರರು ಯಾರೂ ಗೂಂಡಾಗಳಲ್ಲ, ಅವರ ಬಗ್ಗೆ ಸಿಎಂ ಮಾತನಾಡಿಲ್ಲ. ಹೋರಾಟಗಾರರ ಬಗ್ಗೆ ಅವರಿಗೆ ಗೌರವವಿಲ್ಲ, ಅವರ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಹೋರಾಟಗಾರರ ಟೆಂಟ್‌ಗೆ ಬಂದು ಭರವಸೆ ಕೊಡಿ ಎಂದರೆ ಉಸ್ತುವಾರಿ ಸಚಿವರು ರಾತ್ರೋರಾತ್ರಿ ಟೆಂಟ್ ಕಿತ್ತೊಗೆದಿದ್ದಾರೆ. ಹೋರಾಟಗಾರರಿಗೆ ನ್ಯಾಯ ಕೊಡದಿದ್ದರೆ ಬಿಜೆಪಿಯಿಂದ ಬೂತ್ ಮಟ್ಟದಿಂದಲೇ ಮೆಡಿಕಲ್ ಕಾಲೇಜು 2ನೇ ಭಾಗದ ಹೋರಾಟ ಶುರು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಗರ ಶಾಸಕರಿಗೆ ಈ ಹಿಂದೆ ಬಿ.ಎಸ್.ಯಡಿಯೂರಪ್ಪನವರು ಸಿಎಂ ಇದ್ದಾಗ ಸಾಕಷ್ಟು ಅನುದಾನ ಕೊಟ್ಟಿದ್ದಾರೆ. ಯತ್ನಾಳರು ಸಲ್ಲಿಸಿದ ಬೇಡಿಕೆಯಾದ ನಗರದಲ್ಲಿ ಮೇಲ್ಸೇತುವೆಗೆ ಹಣ ಕೊಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆ. ಆದರೆ ಅದನ್ನು ಬಜೆಟ್‌ನಲ್ಲಿ ಘೋಷಿಸುತ್ತೇನೆ ಎಂದು ಹೇಳಿಲ್ಲ ಇದು ಖೇದಕರ ಎಂದರು. ಇನ್ನೂ ಕನ್ಹೇರಿ ಗುರುಗಳ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಕೆಲವರು ಹಲವು ಸ್ವಾಮೀಜಿಗಳಿಗೆ ಎತ್ತಿಕಟ್ಟಿ ಅನ್ಯಾಯ ಮಾಡುತ್ತಿದ್ದಾರೆ. ಇನ್ನೂ ಹಲವು‌ ಕಡೆಗಳಲ್ಲಿ ತೊಗರಿ, ಮೆಕ್ಕೆಜೋಳ ಖರೀದಿ ಕೇಂದ್ರಗಳು ಆರಂಭವಾಗಿಲ್ಲ. ಈ ಮೂಲಕ ರೈತರಿಗೂ ಕಾಂಗ್ರೆಸ್ ಅನ್ಯಾಯ ಎಸಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಈರಣ್ಣ ರಾವೂರ, ಮಾಧ್ಯಮ‌ ಪ್ರಮುಖ ವಿಜಯ ಜೋಶಿ ಇದ್ದರು.