ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ, ನಗರದ ಮೊಟ್ಟ ಮೊದಲ ಸುರಂಗ ರಸ್ತೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಭಾನುವಾರ ಬೆಳಗ್ಗೆ ಹೆಬ್ಬಾಳ ಜಂಕ್ಷನ್‌ ಬಳಿ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಖ್ರಿ ವೃತ್ತದಿಂದ ಹೆಬ್ಬಾಳ ಜಂಕ್ಷನ್‌ವರೆಗೆ ಭಾರಿ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಇದರಿಂದ ವಿಮಾನ ನಿಲ್ದಾಣ ಸೇರಿದಂತೆ ಇತರೆಡೆಗೆ ಹೋಗುವುದು ಕಷ್ಟವಾಗುತ್ತಿತ್ತು. ಈ ಸಮಸ್ಯೆ ನಿವಾರಣೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಸುರಂಗ ರಸ್ತೆ ನಿರ್ಮಾಣಕ್ಕೆ ನಿರ್ಧರಿಸಿದೆ. ಹೆಬ್ಬಾಳ ಜಂಕ್ಷನ್‌ನಿಂದ ಕೃಷಿ ವಿಶ್ವವಿದ್ಯಾಲಯ ವಸತಿಗೃಹವರೆಗೆ ನಿರ್ಮಾಣವಾಗುವ ಮೂರು ಪಥಗಳ ಸುರಂಗ ರಸ್ತೆಯು 2.28 ಕಿ.ಮೀ ಉದ್ದವಿದೆ ಎಂದು ತಿಳಿಸಿದರು.

ಸುಮಾರು 60 ಅಡಿ ಆಳದಲ್ಲಿ ನಿರ್ಮಾಣವಾಗುವ ಸುರಂಗ ರಸ್ತೆಯ ತಲಾ ಒಂದು ಮಾರ್ಗ 3.5 ಮೀಟರ್ ಅಗಲವಿರಲಿದೆ. ಒಟ್ಟು 1,139 ಕೋಟಿ ರು. ವೆಚ್ಚದ ಈ ಯೋಜನೆಯನ್ನು 18 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಯೋಜನೆಗೆ ಯಾವುದೇ ಖಾಸಗಿ ಜಾಗ ಬಳಕೆಯಾಗುವುದಿಲ್ಲ ಎಂದು ಸಚಿವರು ವಿವರಿಸಿದರು.

ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ವಿರೋಧ ಮಾಡಲೆಂದೇ ವಿರೋಧ ಪಕ್ಷದವರು ವಿರೋಧಿಸುತ್ತಾರೆ. ಆದರೆ, ಲಕ್ಷಾಂತರ ಜನರ ಉಪಯೋಗಕ್ಕಾಗಿ ಈ ಯೋಜನೆ ಜಾರಿಗೆ ತರುತ್ತಿದ್ದೇವೆ ಎಂದು ಸಚಿವ ಸುರೇಶ್ ತಿಳಿಸಿದರು.


ಹೊರೆಯಾಗದಂತೆ ದರ ಏರಿಕೆ: ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ದರಗಳು ಹೆಚ್ಚಾಗುತ್ತಿವೆ. ಎಲ್ಲ ಸಾರಿಗೆ ನಿಗಮಗಳಿಗೆ ಸುಮಾರು 5 ಸಾವಿರ ಕೋಟಿ ರು. ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನ ಸಾಮಾನ್ಯರಿಗೆ ಹೊರೆಯಾಗದಂತೆ ಬಸ್ ಪ್ರಯಾಣ ದರ ಏರಿಕೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಆದರೆ, ಸರ್ಕಾರಕ್ಕೆ ಇಲಾಖೆಯಿಂದ ಇದುವರೆಗೆ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ. ಮುಂದಿನ ಸಂಪುಟ ಸಭೆಗಳಲ್ಲಿ ಈ ಬಗ್ಗೆ ಪ್ರಸ್ತಾವನೆ ಮಂಡಿಸಲಾಗುತ್ತದೆ. ಮುಖ್ಯಮಂತ್ರಿಗಳು ಮತ್ತು ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದರು.