ಸಿಎಂ ಒಳ ಮೀಸಲಾತಿ ಜಾರಿ ದಿನ ಪ್ರಕಟಿಸಲಿ: ಉಮೇಶ ಕಾರಜೋಳ

| Published : May 06 2025, 12:18 AM IST

ಸಿಎಂ ಒಳ ಮೀಸಲಾತಿ ಜಾರಿ ದಿನ ಪ್ರಕಟಿಸಲಿ: ಉಮೇಶ ಕಾರಜೋಳ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಸಿಎಂ ಸಿದ್ಧರಾಮಯ್ಯನವರು ಕೂಡಲೇ ಒಳ ಮೀಸಲಾತಿ ಜಾರಿ ದಿನಾಂಕ ಘೋಷಿಸುವ ಮೂಲಕ ತಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಸಿಎಂ ಸಿದ್ಧರಾಮಯ್ಯನವರು ಕೂಡಲೇ ಒಳ ಮೀಸಲಾತಿ ಜಾರಿ ದಿನಾಂಕ ಘೋಷಿಸುವ ಮೂಲಕ ತಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿದ ಅವರು, ಒಳಮೀಸಲಾತಿ ವಿಷಯವಾಗಿ ಸಿಎಂ ಸಿದ್ಧರಾಮಯ್ಯ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿ ಕೂಡಲೇ ಒಳ ಮೀಸಲಾತಿ ಜಾರಿಗೊಳಿಸುವ ದಿನವನ್ನು ಘೋಷಣೆ ಮಾಡುವುದು ಅಗತ್ಯವಾಗಿದೆ. ಕಾಂತರಾಜ ವರದಿ ಬಗ್ಗೆ ಡಾ.ಮಹಾದೇವಪ್ಪ, ಡಾ.ಜಿ.ಪರಮೇಶ್ವರ, ಪ್ರಿಯಾಂಕ್ ಖರ್ಗೆ ದ್ವಂದ್ವ ನಿಲುವು ತಾಳಿದ್ದಾರೆ. ನಂತರದಲ್ಲಿ ನ್ಯಾ.ನಾಗಮೋಹನದಾಸ್ ನೇತೃತ್ವದ ಸರ್ವೇಕ್ಷಣೆಯ ದತ್ತಾಶಂಗಳ ಸರ್ವೇಕ್ಷಣೆ ಬಗ್ಗೆಯೂ ಈ ನಾಯಕರು ದ್ವಂದ್ವ ನಿಲುವು ತಾಳುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಕಳೆದ ಆ.1ರಂದೇ ಸುಪ್ರೀಂಕೋರ್ಟ್ ಒಳ ಮೀಸಲಾತಿ ಜಾರಿ ಮಾಡಲು ಆಯಾ ರಾಜ್ಯಗಳಿಗೆ ಅಧಿಕಾರ ನೀಡಿದೆ.

ತೆಲಂಗಾಣ, ಹರ್ಯಾಣಾ, ಆಂಧ್ರಪ್ರದೇಶ ಸರ್ಕಾರಗಳು ಈಗಾಗಲೇ ಒಳಮೀಸಲಾತಿ ಜಾರಿಗೊಳಿಸಿವೆ. ಆದರೆ, ಸಾಮಾಜಿಕ ನ್ಯಾಯದ ಹರಿಕಾರ ಎಂದು ಬಿಂಬಿಸಿಕೊಳ್ಳುವ ಸಿಎಂ ಸಿದ್ಧರಾಮಯ್ಯ ಅವರು ಒಳಮೀಸಲಾತಿ ಜಾರಿಗೊಳಿಸಿಲ್ಲ. ಈ ನಡೆ ಉಳಿದ ರಾಜ್ಯಗಳ ಎದುರು ತಲೆ ತಗ್ಗಿಸುವಂತೆ ಮಾಡಿದೆ. ಇನ್ನೊಂದೆಡೆ ರಾಜ್ಯ ಸರ್ಕಾರ ಒಳಮೀಸಲಾತಿ ಹೋರಾಟವನ್ನು ದಮನಗೊಳಿಸುವ ವ್ಯವಸ್ಥಿತ ಪ್ರಯತ್ನ ಮಾಡುತ್ತಿದೆ ಎಂದು ಕಾರಜೋಳ ದೂರಿದ್ದಾರೆ.

ಒಳ ಮೀಸಲಾತಿಗಾಗಿ ಪರಿಶಿಷ್ಟ ಜಾತಿಗಳ ಸರ್ವೇಕ್ಷಣ ಕಾರ್ಯ ಆರಂಭಗೊಂಡಿದ್ದು, ಪರಿಶಿಷ್ಟ ಜಾತಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯವನ್ನು ಸರ್ಕಾರ ಮಾಡಬೇಕಿದೆ. ಸರ್ವೇಕ್ಷಣಾ ಕಾರ್ಯಕ್ಕೆ ಆಧುನಿಕ ತಂತ್ರಜ್ಞಾನ ಬಳಕೆ ಮಾಡುತ್ತಿರುವುದರಿಂದ ಕೆಲವೇ ದಿನಗಳಲ್ಲಿ ವರದಿ ಸಿದ್ಧವಾಗುತ್ತದೆ. ಒಳಮೀಸಲಾತಿ ಜಾರಿಗೊಳಿಸುವ ದಿನಾಂಕವನ್ನು ತ್ವರಿತಗತಿಯಲ್ಲಿ ಘೋಷಣೆ ಮಾಡುವಂತೆ ಉಮೇಶ ಕಾರಜೋಳ ಒತ್ತಾಯಿಸಿದ್ದಾರೆ.