ಮುಡಾ ಸೈಟ್‌ ಹಂಚಿಕೆ ವಿಚಾರ : ಲೋಕಾಯುಕ್ತಕ್ಕೆ ಪತ್ರ ರವಾನಿಸಿರುವ ಇ.ಡಿ ವಿರುದ್ಧ ಸಿಎಂ, ಟೀಂ ದಾಳಿ

| Published : Dec 05 2024, 12:30 AM IST / Updated: Dec 05 2024, 05:31 AM IST

Siddaramaiah
ಮುಡಾ ಸೈಟ್‌ ಹಂಚಿಕೆ ವಿಚಾರ : ಲೋಕಾಯುಕ್ತಕ್ಕೆ ಪತ್ರ ರವಾನಿಸಿರುವ ಇ.ಡಿ ವಿರುದ್ಧ ಸಿಎಂ, ಟೀಂ ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಡಾ ಸೈಟ್‌ ಹಂಚಿಕೆಯಲ್ಲಿ ತಮ್ಮ ಪತ್ನಿ ಅಕ್ರಮ ನಡೆಸಿದ್ದಾರೆ ಎಂದು ಲೋಕಾಯುಕ್ತಕ್ಕೆ ಮಾಹಿತಿ ನೀಡಿ ಪತ್ರ ರವಾನಿಸಿರುವ ಜಾರಿ ನಿರ್ದೇಶನಾಲಯದ (ಇ.ಡಿ.) ಬಗ್ಗೆ ಮುಖ್ಯಮಂತ್ರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಕೃಷ್ಣರಾಜಪೇಟೆ : ಮುಡಾ ಸೈಟ್‌ ಹಂಚಿಕೆಯಲ್ಲಿ ತಮ್ಮ ಪತ್ನಿ ಅಕ್ರಮ ನಡೆಸಿದ್ದಾರೆ ಎಂದು ಲೋಕಾಯುಕ್ತಕ್ಕೆ ಮಾಹಿತಿ ನೀಡಿ ಪತ್ರ ರವಾನಿಸಿರುವ ಜಾರಿ ನಿರ್ದೇಶನಾಲಯದ (ಇ.ಡಿ.) ಬಗ್ಗೆ ಮುಖ್ಯಮಂತ್ರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಬಗ್ಗೆ ಇ.ಡಿ ತನಿಖೆ ಪ್ರಶ್ನಿಸಿರುವ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರುವ ಮುನ್ನಾ ದಿನ ಇಂಥದ್ದೊಂದು ಪತ್ರ ರವಾನೆ ಹಿಂದೆ, ನ್ಯಾಯಾಲಯದ ಮೇಲೆ ಪ್ರಭಾವ ಬೀರುವ ಉದ್ದೇಶವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆಯ ಹೆಲಿಪ್ಯಾಡ್‌ನಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿ, ಮುಡಾ ಪ್ರಕರಣಕ್ಕೆ ಸಂಬಂಧಿಸಿ ಇ.ಡಿ.ಯವರು ತನಿಖೆ ನಡೆಸುತ್ತಿದ್ದಾರೆ. ಇವರು ತನಿಖೆ ನಡೆಸುತ್ತಿರುವುದೇ ಸರಿಯಲ್ಲ. ತನಿಖೆ ನಡೆಸಿದ ಮೇಲೆ ತನಿಖಾ ವರದಿಯನ್ನು ಲೋಕಾಯುಕ್ತಕ್ಕೆ ನೀಡಬಹುದಿತ್ತು. ಅದನ್ನು ಬಿಟ್ಟು ಲೋಕಾಯುಕ್ತಕ್ಕೆ ಪತ್ರ ಬರೆಯುವುದು ಮತ್ತು ಅದನ್ನು ಮಾಧ್ಯಮಗಳಿಗೆ ಸೋರಿಕೆ ಮಾಡುವುದರ ಹಿಂದೆ ರಾಜಕೀಯ ದುರುದ್ದೇಶ ಇದೆ ಎಂದು ಕಿಡಿಕಾರಿದರು.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಗುರುವಾರ ನಮ್ಮ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರುತ್ತಿದೆ. ಇದಕ್ಕೆ ಒಂದು ದಿನ ಮೊದಲು ಮಾಧ್ಯಮಗಳಲ್ಲಿ ಪ್ರಚಾರ ಮಾಡಿರುವುದರ ಹಿಂದೆ ನ್ಯಾಯಾಲಯದ ಮೇಲೆ ಪ್ರಭಾವ ಬೀರುವ ಮತ್ತು ನ್ಯಾಯಾಲಯವನ್ನು ಪೂರ್ವಾಗ್ರಹದ ನಿಲುವಿಗೆ ತರುವ ದುರುದ್ದೇಶದ ರಾಜಕೀಯ ನಡೆ ಅಡಗಿದೆ ಎಂದು ಆರೋಪಿಸಿದರು.

ಡಿ.24ರ ಒಳಗೆ ತನಿಖೆಯ ವರದಿ ನೀಡುವಂತೆ ನ್ಯಾಯಾಲಯ ಲೋಕಾಯುಕ್ತಕ್ಕೆ ಸೂಚನೆ ನೀಡಿದೆ. ಬೇಕಿದ್ದರೆ ಇ.ಡಿ.ಯವರು ಲೋಕಾಯುಕ್ತದ ವರದಿ ನೋಡಲು ಅವಕಾಶವಿತ್ತು. ಅದನ್ನು ಬಿಟ್ಟು ಈ ರೀತಿ ಮಾಡಿರುವುದರ ಹಿಂದಿನ ಉದ್ದೇಶ ಏನೆಂಬುದು ರಾಜ್ಯದ ಜನರಿಗೆ ಅರ್ಥವಾಗುತ್ತದೆ ಎಂದು ಟೀಕಿಸಿದರು.