ಸಿಎಂ ಸಿದ್ದರಾಮಯ್ಯ ದಲಿತರಿಗೆ ನಂಬಿಕೆ ದ್ರೋಹ - ನರಗುಂದ ಶಾಸಕ, ಮಾಜಿ ಸಚಿವ ಸಿ.ಸಿ.ಪಾಟೀಲ

| N/A | Published : Feb 28 2025, 12:49 AM IST / Updated: Feb 28 2025, 11:48 AM IST

ಸಿಎಂ ಸಿದ್ದರಾಮಯ್ಯ ದಲಿತರಿಗೆ ನಂಬಿಕೆ ದ್ರೋಹ - ನರಗುಂದ ಶಾಸಕ, ಮಾಜಿ ಸಚಿವ ಸಿ.ಸಿ.ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತೆತ್ತಿದರೆ ಸಾಕು, ನಾನು ಅಹಿಂದ ವರ್ಗದ ನಾಯಕ ಎಂದು ಹೇಳಿಕೊಳ್ಳುತ್ತಾರೆ. ಆದರೆ ದಲಿತರಿಗಾಗಿ ಮೀಸಲಾಗಿರಿಸಿದ್ದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುವ ಮೂಲಕ ದಲಿತರಿಗೆ ನಂಬಿಕೆಗೆ ದ್ರೋಹ ಮಾಡಿದ್ದಾರೆ  - ಸಿ.ಸಿ.ಪಾಟೀಲ ಆಕ್ರೋಶ 

ಗದಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತೆತ್ತಿದರೆ ಸಾಕು, ನಾನು ಅಹಿಂದ ವರ್ಗದ ನಾಯಕ ಎಂದು ಹೇಳಿಕೊಳ್ಳುತ್ತಾರೆ. ಆದರೆ ದಲಿತರಿಗಾಗಿ ಮೀಸಲಾಗಿರಿಸಿದ್ದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುವ ಮೂಲಕ ದಲಿತರಿಗೆ ನಂಬಿಕೆಗೆ ದ್ರೋಹ ಮಾಡಿದ್ದಾರೆ ಎಂದು ನರಗುಂದ ಶಾಸಕ, ಮಾಜಿ ಸಚಿವ ಸಿ.ಸಿ.ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಈ ವಿಶ್ವಾಸ ಪ್ರಸ್ತಾಪಿಸಿದ ಅವರು, ನಂಬಿಕೆ ದ್ರೋಹ ಮಾಡಿದ ಸಿದ್ದರಾಮಯ್ಯ ಅವರಿಗೆ ದಲಿತ, ಹಿಂದುಳಿದ ವರ್ಗದವರ ಶಾಪ ತಟ್ಟುತ್ತದೆ ಎಂದರು.

ಗ್ಯಾರಂಟಿ ಯೋಜನೆಗಳ ಬಗ್ಗೆ ನಮ್ಮ ವಿರೋಧವಿಲ್ಲ, ಯಾವುದೇ ಪೂರ್ವಾಪರ ವಿಚಾರವಿಲ್ಲದೇ, ಸಂಪನ್ಮೂಲ ಕ್ರೋಢೀಕರಣ ಬಗ್ಗೆ ಯೋಚಿಸದೇ ಜಾರಿ ಮಾಡಿದ ಈ ಗ್ಯಾರಂಟಿಗಳನ್ನು ನಿಭಾಯಿಸಲು ಹಿಂದುಳಿದ ವರ್ಗಕ್ಕೆ ಮೀಸಲಿಟ್ಟಿರುವ ₹25 ಸಾವಿರ ಕೋಟಿ ಬಳಕೆ ಮಾಡಿಕೊಳ್ಳುತ್ತಿರುವುದು ಯಾವ ನ್ಯಾಯ ? ಎಂದು ಪ್ರಶ್ನಿಸಿದರು. ಪ್ರಿಯಾಂಕ ಖರ್ಗೆ, ಸತೀಶ ಜಾರಕಿಹೊಳಿ, ಎಚ್.ಸಿ.ಮಹದೇವಪ್ಪ ಅದ್ಯಾವ ಕಾರಣಕ್ಕಾಗಿ ತುಟಿ ಬಿಚ್ಚುತ್ತಿಲ್ಲ? ದಲಿತರಿಗೆ ನಿಮ್ಮ ಸರ್ಕಾರದಿಂದಲೇ ಅನ್ಯಾಯವಾದರೂ ಅದನ್ನು ನೋಡಿಕೊಂಡು ಅದೇಗೆ ಸುಮ್ಮನ್ನೇ ಕುಳಿತಿದ್ದೀರಿ? ಇದೊಂದು ಹಿಂದುಳಿದವರ, ದಲಿತರ ವಿರೋಧಿ ಸರ್ಕಾರ. ಸರ್ಕಾರದ ಈ ನೀತಿಯನ್ನು ರಾಜ್ಯದಲ್ಲಿರುವ ದಲಿತ ಸಂಘಟನೆಗಳು ವಿರೋಧಿಸಬೇಕು. ತಮ್ಮ ವರ್ಗಗಳ ಹಕ್ಕನ್ನು ಪಡೆಯಲು ಹೋರಾಟಕ್ಕೆ ಮುಂದಾಗಬೇಕು ಎಂದು ಶಾಸಕ ಸಿ.ಸಿ.ಪಾಟೀಲ್ ಕರೆನೀಡಿದರು.

ದಲಿತರಿಗೆ, ಹಿಂದುಳಿದ ವರ್ಗದವರಿಗೆ ರಾಜ್ಯ ಸರ್ಕಾರದಿಂದ ಆಗುತ್ತಿರುವ ಅನ್ಯಾಯವನ್ನು ರಾಜ್ಯ ಬಿಜೆಪಿ ಖಂಡಿಸಿ, ರಾಜ್ಯವ್ಯಾಪಿ ಈ ಹೋರಾಟ ಮಾಡಲಾಗುತ್ತಿದೆ. ಮುಂಬರುವ ಬಜೆಟ್‌ನಲ್ಲಿ ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಸಿಗಬೇಕಾದ 15 ಸಾವಿರ ಕೋಟಿ ರುಪಾಯಿಗಳನ್ನು ಸಿದ್ದರಾಮಯ್ಯ ಬೇರೆಡೆ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಅದನ್ನು ತಪ್ಪಿಸಿ ತಳಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡುವುದು ನಮ್ಮ ಹೋರಾಟದ ಉದ್ದೇಶವಾಗಿದೆ. ಈ ಕುರಿತು ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಚಿಂತನೆ ನಡೆಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದ ಮಂಜುನಾಥ ಹುಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜಗೌಡ ಪಾಟೀಲ, ಎಂ.ಎಸ್. ಕರಿಗೌಡ್ರ, ಎಂ.ಎಂ. ಹಿರೇಮಠ, ಜಿಲ್ಲಾ ಅಧ್ಯಕ್ಷ ಮಂಜುನಾಥ ಮುಳಗುಂದ, ರಂಗಪ್ಪನವರ, ಎಂ.ಎಂ. ಹಿರೇಮಠ, ಶಿವು ಹಿರೇಮನಿಪಾಟೀಲ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಹಾಜರಿದ್ದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ 2023-24ರಲ್ಲಿ ಎಸ್ಸಿಪಿಯಿಂದ ₹7713.15 ಕೋಟಿ, ಟಿಎಸ್ಪಿಯಿಂದ ₹3430.85 ಕೋಟಿ ಸೇರಿ ಒಟ್ಟು ₹11144 ಕೋಟಿ ಮೊತ್ತವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗಿದೆ. 2024-25ರಲ್ಲಿ ಸರ್ಕಾರ ಇದೇ ಚಾಳಿಯನ್ನು ಮುಂದುವರಿಸಿತು. ಎಸ್ಸಿಪಿ ನಿಧಿಯಿಂದ ₹9980.66 ಕೋಟಿ ಮತ್ತು ಟಿಎಸ್ಪಿಯಿಂದ ₹4302.02 ಕೋಟಿ ಸೇರಿದಂತೆ ಒಟ್ಟು ₹14282.68 ಕೋಟಿ ಸೇರಿದಂತೆ ಒಟ್ಟು ₹25 ಸಾವಿರ ಕೋಟಿಗೂ ಅಧಿಕ ಅನುದಾನವನ್ನು ಗ್ಯಾರಂಟಿ ಅನುಷ್ಠಾನಕ್ಕಾಗಿ ದುರ್ಬಳಕೆ ಮಾಡಿಕೊಂಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸಿ.ಸಿ. ಪಾಟೀಲ ಅಂಕಿಅಂಶಗಳನ್ನು ನೀಡಿದರು.

ಎಸ್ಸಿಪಿ, ಟಿಎಸ್ಪಿ ಅನುದಾನ ಬೇರೆದಕ್ಕೆ ಬಳಕೆ ಮಾಡಿದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ. ಆದರೆ ಸಿಎಂ ಅವರೇ ಈ ಕಾನೂನು ಉಲ್ಲಂಘಿಸಿದ್ದರೂ ಅವರ ಮೇಲೆ ಏಕೆ ಕಾನೂನು ಕ್ರಮವಿಲ್ಲ? ಕಾನೂನು ಕ್ರಮವಾಗಬೇಕು. ಇದೊಂದು ಜನಾಂದೋಲನವಾಗಿ ರೂಪುಗೊಳ್ಳಬೇಕಿದೆ ಎಂದು ವಿಪ ಸದಸ್ಯ ಎಸ್‌.ವಿ. ಸಂಕನೂರ ಹೇಳಿದರು.