ಸಾರಾಂಶ
ಬೆಂಗಳೂರು : ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಇಲಾಖೆಗಳ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ್ದು, ಬರ ಪರಿಹಾರ, ಪೂರ್ವ ಮುಂಗಾರು ಮಳೆಯ ಬಿತ್ತನೆ ಚಟುವಟಿಕೆಗಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವ್ಯವಸ್ಥೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮುಗಿದ ಹತ್ತು ದಿನಗಳ ಬಳಿಕ ಚುನಾವಣಾ ಆಯೋಗವು ನೀತಿ ಸಂಹಿತೆಯ ಕೆಲ ನಿಯಮಗಳನ್ನು ಸಡಿಲಗೊಳಿಸಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಶುಕ್ರವಾರ ಎರಡೂವರೆ ತಾಸು ಸುದೀರ್ಘ ಸಭೆ ನಡೆಸಿದರು.
ಸಭೆಯಲ್ಲಿ ಬೆಳೆ ಹಾನಿ ಪರಿಹಾರ ಹಾಗೂ ಬಿತ್ತನೆ ಚಟುವಟಿಕೆ ಬಗ್ಗೆ ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಪ್ರಸ್ತುತ 53,500 ಕ್ವಿಂಟಲ್ ಬಿತ್ತನೆ ಬೀಜ ಹಾಗೂ 26 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಅಗತ್ಯವಿದೆ. ಬಿತ್ತನೆ ಬೀಜ ಲಭ್ಯವಿದ್ದು ರಸಗೊಬ್ಬರ 15 ಲಕ್ಷ ಟನ್‌ನಷ್ಟು ಮಾತ್ರ ಲಭ್ಯವಿದೆ ಎಂದು ಅಧಿಕಾರಿಗಳು ತಿಳಿಸಿದರು.
ಈ ವೇಳೆ ಸಿದ್ದರಾಮಯ್ಯ ಅವರು, ಯಾವುದೇ ಕಾರಣಕ್ಕೂ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕೊರತೆ ಉಂಟಾಗಬಾರದು. ಜತೆಗೆ ಕಳಪೆ ಬಿತ್ತನೆ ಬೀಜಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಈ ಬಗ್ಗೆ ಯಾವುದೇ ದೂರುಗಳು ಬಂದರೂ ಅಧಿಕಾರಿಗಳನ್ನೇ ಹೊಣೆ ಮಾಡುವುದಾಗಿ ಎಚ್ಚರಿಕೆ ನೀಡಿದರು ಎಂದು ತಿಳಿದುಬಂದಿದೆ.
ಇನ್ನು ಮಳೆ ಶುರುವಾಗಿದ್ದರೂ ಮೇವಿನ ಸಮಸ್ಯೆ ಸಂಪೂರ್ಣ ನೀಗಿಲ್ಲ. ಹೀಗಾಗಿ ಮೇವಿನ ಸಮಸ್ಯೆ ಹಾಗೂ ಮಳೆ ಹಾನಿ ಸಮಸ್ಯೆಗಳ ಬಗ್ಗೆ ಗಮನ ನೀಡಬೇಕು ಎಂದು ಸೂಚಿಸಿದರು.
ಬೆಳೆ ಹಾನಿಗೆ ಸಂಬಂಧಿಸಿದಂತೆ 33.50 ಲಕ್ಷ ರೈತರಿಗೆ ಪರಿಹಾರ ನೀಡಲಾಗಿದೆ. 20.13 ಲಕ್ಷ ರೈತ ಕುಟುಂಬಗಳಿಗೆ ತಲಾ 2400 ರು. ನಂತೆ 476.40 ಕೋಟಿ ರು. ಗಳನ್ನು ಜೀವನೋಪಾಯ ನಷ್ಟಕ್ಕೆ ಪರಿಹಾರ ನೀಡಲಾಗುತ್ತಿದೆ. ಇನ್ನು ಬೀಜ ಬಿತ್ತನೆ ಮಾಡಿ ಚಿಗುರದೆ ಒಣಗಿಹೋಗಿರುವ ಪ್ರಕರಣಗಳಲ್ಲಿ ಬೆಳೆ ಹಾನಿ ಪರಿಹಾರ ನೀಡುವ ಬಗ್ಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿ ಬದಲಾವಣೆ ಮಾಡುವ ಬಗ್ಗೆ ಸಚಿವ ಸಂಪುಟದ ಉಪಸಮಿತಿಯಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬಹುದು ಎಂದು ಅಧಿಕಾರಿಗಳು ಸಲಹೆ ನೀಡಿದರು.
ಈ ಹಿನ್ನೆಲೆಯಲ್ಲಿ ಈ ನಿಟ್ಟಿನಲ್ಲಿ ಕೂಡಲೇ ಕ್ರಮ ವಹಿಸುವಂತೆ ಸಿದ್ದರಾಮಯ್ಯ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.
ಟೆಂಡರ್ ಪ್ರಕ್ರಿಯೆಗೆ ವೇಗ ನೀಡಿ-ಸಿಎಂ:
ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಬಳಕೆ ಪ್ರಮಾಣ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ಸಕಾಲದಲ್ಲಿ ಕಳುಹಿಸದಿದ್ದರೆ ಮುಂದಿನ ಕಂತು ಬಿಡುಗಡೆಯಾಗುವುದಿಲ್ಲ. ಪ್ರಸ್ತುತ ಚುನಾವಣಾ ಆಯೋಗದಿಂದ ಟೆಂಡರ್ ಕರೆಯಲು ಅನುಮತಿ ನೀಡಲಾಗಿದ್ದು, ಟೆಂಡರ್ ಕರೆಯಲು ಯಾವುದೇ ತೊಂದರೆ ಇಲ್ಲ. ಹೀಗಾಗಿ ಮುಂದಿನ ಬಾರಿ ಸಭೆ ನಡೆಯುವುದರೊಳಗೆ ಪ್ರಕ್ರಿಯೆ ಆರಂಭವಾಗಿರಬೇಕು. ಜೂನ್ ಒಳಗೆ ಕಡ್ಡಾಯವಾಗಿ ಮೊದಲನೇ ಕಂತು ಅನುದಾನ ಪಡೆಯಬೇಕು ಎಂದು ಅಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚಿಸಿದರು.
ಖರ್ಚು ಮಾಡದಿದ್ದರೆ ಅನುದಾನ ವಾಪಸು:
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ನಿಧಿಯ ವೆಚ್ಚದಲ್ಲಿ ನಿರೀಕ್ಷಿತ ಪ್ರಗತಿಯಾಗಿಲ್ಲ. ಇವೆರಡರ ಅನುದಾನ ವೆಚ್ಚಕ್ಕೆ ಜೂನ್ ತಿಂಗಳ ಒಳಗಾಗಿ ಕ್ರಿಯಾ ಯೋಜನೆ ಸಲ್ಲಿಸಿ ಅನುಮೋದನೆ ಪಡೆಯಬೇಕು. ಶಾಸಕರ ಅನುದಾನ ಬಹಳ ವರ್ಷಗಳ ಕಾಲ ವೆಚ್ಚವಾಗದೆ ಉಳಿದಿದ್ದರೆ ವಾಪಸು ಪಡೆಯಲಾಗುವುದು. ಹಣ ಇದ್ದೂ ಖರ್ಚಾಗದಿದ್ದರೆ ಅಧಿಕಾರಿಗಳೇ ಹೊಣೆ ಎಂದು ಮುಖ್ಯಮಂತ್ರಿಗಳು ತರಾಟೆಗೆ ತೆಗೆದುಕೊಂಡರು.
ಜನಸ್ಪಂದನ ಪ್ರಗತಿ ಪರಿಶೀಲನೆ: ಜನಸ್ಪಂದನ ಕಾರ್ಯಕ್ರಮದ ಅರ್ಜಿಗಳ ವಿಲೇವಾರಿ ಬಗ್ಗೆಯೂ ಮಾಹಿತಿ ಪಡೆದರು. ಈ ವೇಳೆ ನಗರಾಭಿವೃದ್ಧಿ ಇಲಾಖೆಯಲ್ಲಿ 828 ಅಹವಾಲುಗಳಲ್ಲಿ 554 ಬಾಕಿ ಇರುವ ಬಗ್ಗೆ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಒಂದು ತಿಂಗಳ ಬಳಿಕ ಯಾವುದೇ ಇಲಾಖೆ ಅರ್ಜಿ ಬಾಕಿ ಇರಬಾರದು. ಒಂದು ವೇಳೆ ವಿಲೇವಾರಿ ಮಾಡಲು ಸಾಧ್ಯವಾಗದಿದ್ದರೆ ಸಕಾರಣ ವಿವರಿಸಿ ಹಿಂಬರಹ ನೀಡಬೇಕು ಎಂದು ಸೂಚಿಸಿದರು.ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಡಾ.ಜಿ. ಪರಮೇಶ್ವರ್, ಚೆಲುವರಾಯಸ್ವಾಮಿ, ಎಚ್.ಕೆ. ಪಾಟೀಲ್, ಕೃಷ್ಣಬೈರೇಗೌಡ, ಶಿವಾನಂದ ಪಾಟೀಲ್ ಸೇರಿದಂತೆ ಹಲವರು ಹಾಜರಿದ್ದರು.ವಿದ್ಯಾರ್ಥಿನಿಯರ ಹತ್ಯೆ ಬಗ್ಗೆ ಚರ್ಚೆ
ರಾಜ್ಯದಲ್ಲಿ ಸಾಲು-ಸಾಲು ವಿದ್ಯಾರ್ಥಿನಿಯರ ಕೊಲೆ ಆಗುತ್ತಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆದಿದ್ದು, ಸಮಗ್ರ ವರದಿ ನೀಡುವಂತೆ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕಾನೂನು ಸುವ್ಯವಸ್ಥೆಯನ್ನು ಕೂಡಲೇ ಬಿಗಿಗೊಳಿಸಬೇಕು. ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಈ ಬಗ್ಗೆ ಗೃಹ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಕೆರೆಗಳಿಗೆ ಮರುಜೀವ ಆದ್ಯತೆಯಾಗಲಿ: ಡಿಸಿಎಂ
ಬೆಂಗಳೂರು ನಗರದಲ್ಲಿ 7 ಸಾವಿರ ಬೋರ್‌ವೆಲ್ ಬತ್ತಿ ಹೋಗಿವೆ. ಹೀಗಾಗಿ ಕೆರೆಗಳಿಗೆ ಮರುಜೀವ ನೀಡುವುದು ಆದ್ಯತೆಯಾಗಬೇಕು. ಕನಿಷ್ಠ ಸಂಸ್ಕರಿಸಿದ ನೀರಿನಿಂದ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಬೆಂಗಳೂರಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ಸಿಎಂ ನೀಡಿದ ಸೂಚನೆಗಳು- ಮಳೆ ಬರುತ್ತಿದೆ, ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊರತೆ ಉಂಟಾಗದಂತೆ ನೋಡಿಕೊಳ್ಳಿ- ಮೇವಿನ ಸಮಸ್ಯೆ ಸಂಪೂರ್ಣ ನೀಗಿಲ್ಲ. ಹೀಗಾಗಿ ಮೇವು, ಮಳೆಹಾನಿ ಸಮಸ್ಯೆಗಳ ಬಗ್ಗೆಯೂ ಗಮನಹರಿಸಿ- ಎನ್‌ಡಿಆರ್‌ಎಫ್ ಮಾರ್ಗಸೂಚಿ ಬದಲಿಸಿ ರೈತರಿಗೆ ನೆರವಾಗುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ- ಟೆಂಡರ್ ಕರೆಯಲು ಚುನಾವಣಾ ಆಯೋಗ ಅನುಮತಿ ನೀಡಿದೆ, ಕೂಡಲೇ ಅವುಗಳಿಗೆ ಪ್ರಸ್ತಾವನೆ ಸಿದ್ಧಪಡಿಸಿ- ಶಾಸಕರ ನಿಧಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ನಿಧಿಗೆ ಮೀಸಲಿರುವ ಹಣದ ಬಳಕೆಗೆ ಕ್ರಮ ಕೈಗೊಳ್ಳಿ- ಜನಸ್ಪಂದನದಲ್ಲಿ ಪಡೆದ ಮನವಿ ವಿಲೇವಾರಿಯಾಗಿಲ್ಲ. ಇನ್ನೊಂದು ತಿಂಗಳೊಳಗೆ ಎಲ್ಲಾ ಅರ್ಜಿ ಇತ್ಯರ್ಥಪಡಿಸಿ- ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇನ್ನಷ್ಟು ಬಿಗಿಗೊಳಿಸಬೇಕು, ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಿ- ವಿದ್ಯಾರ್ಥಿನಿಯರ ಕೊಲೆಗಳು ಹೆಚ್ಚುತ್ತಿರುವ ಬಗ್ಗೆ ಆರೋಪಗಳು ಬರುತ್ತಿವೆ, ಅದರ ಬಗ್ಗೆ ಸಮಗ್ರ ವರದಿ ನೀಡಿ