ಸಾರಾಂಶ
ಕನ್ನಡಪ್ರಭ ವಾರ್ತೆ ಬಾದಾಮಿ
2018ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆಲ್ಲದೆ ಹೋಗಿದ್ದರೆ ರಾಜಕೀಯ ಜೀವನ ಅಂತ್ಯವಾಗುತ್ತಿತ್ತು. ಅಲ್ಪಮತಗಳ ಅಂತರದಿಂದ ಗೆದ್ದು, ಪುನರ್ಜನ್ಮ ನೀಡಿದ ಕ್ಷೇತ್ರಕ್ಕೆ ಏನೂ ಮಾಡಲಿಲ್ಲ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.ನಗರದ ಶ್ರೀ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ಆವರಣದಲ್ಲಿ ಗುರುವಾರ ಬಾದಾಮಿ ಮತಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಮತ್ತು ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಮತಕ್ಷೇತ್ರ ಸಿದ್ದರಾಮಯ್ಯ ಸ್ಪರ್ಧೆಯ ಕಾರಣ ಇಡೀ ರಾಜ್ಯದ ಗಮನ ಸೆಳೆದಿತ್ತು. ಚಾಮುಂಡಿಯಲ್ಲಿ ಜನ ಅವರ ಪರ ಇಲ್ಲ ಎಂಬುದು ಗೊತ್ತಾಗಿ ಬಾದಾಮಿ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದರು. ಇಲ್ಲಿಯೂ ಅವರು ಗೆದ್ದಿದ್ದು ದೊಡ್ಡ ಅಂತರದಿಂದಲ್ಲ. ಇಬ್ಬರು ಬಲಿಷ್ಠರ ಪೈಪೋಟಿಯ ಮಧ್ಯೆ ಶ್ರೀರಾಮುಲು ಅಲ್ಪಮತಗಳ ಅಂತರದಲ್ಲಿ ಸೋಲನುಭವಿಸಿದರು ಎಂದರು. ಸಿದ್ದರಾಮಯ್ಯ ನಿಮ್ಮೆಲ್ಲರ ಆಶೀರ್ವಾದದಿಂದ ಗೆದ್ದರು. ಆದರೆ ಜನರ ನಿರೀಕ್ಷೆಯಂತೆ ಕೆಲಸ ಮಾಡಲಿಲ್ಲ. 2018ರಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕೆರೂರ ಏತ ನೀರಾವರಿಗೆ ಅನುದಾನ ಕೊಟ್ಟಿದ್ದಾರೆ. ಕುಮಾರಸ್ವಾಮಿ ಸರ್ಕಾರ ಪತನವಾದ ನಂತರ ಆ ಯೋಜನೆಯ ಹಣ ಬೇರೆ ಬೇರೆ ಕಡೆ ಖರ್ಚು ಮಾಡಿದ್ದಾರೆ. ಸಿದ್ದರಾಮಯ್ಯನವರು ಬಂದರೆ ಬಾದಾಮಿ ಅಭಿವೃದ್ಧಿ ಆಗುತ್ತದೆ ಎಂದುಕೊಂಡಿದ್ರಿ. ಆದರೆ ಕಾಂಗ್ರೆಸ್ ನಿಮ್ಮನ್ನು ಚುನಾವಣೆಗೆ ಮಾತ್ರ ಬಳಸಿಕೊಂಡಿದೆ. ಜನತೆಯ ಋಣ ತೀರಿಸಲು ಸಿದ್ದರಾಮಯ್ಯನವರು ಬಾದಾಮಿ ಅಭಿವೃದ್ಧಿ ಮಾಡಬೇಕು ಎಂದು ಸಲಹೆ ನೀಡಿದರು.
ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ:ಮುಂಬರುವ ಜಿಪಂ, ತಾಪಂ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ 2028ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲು ಶ್ರಮಿಸಬೇಕು ಎಂದು ಮನವಿ ಮಾಡಿದ ಅವರು, ಅಧಿಕಾರ ಇರಲಿ, ಬಿಡಲು ಹಿಂದುಳಿದ ವರ್ಗದವರ ಪರವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.ಆಡಳಿತ ಪಕ್ಷದ ಶಾಸಕರು ಕ್ಷೇತ್ರದ ಜನತೆಗೆ ಮನೆಗಳು ಬೇಕು ಎಂದು ಕೇಳಿದರೂ ಕೊಟ್ಟಿಲ್ಲ, ಅದರೆ ಗ್ರಾಮ ಪಂಚಾಯತಿ ಸದಸ್ಯನ ಪತ್ರಕ್ಕೆ ಲಂಚ ಪಡೆದು ಮನೆ ನೀಡಿದ್ದಾರೆ ಎಂದು ಅವರ ಶಾಸಕರೇ ಹೇಳಿದ್ದಾರೆ. ಸರ್ಕಾರದ ಪ್ರತಿ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದರು.
ನೌಕರರಿಗೆ ವೇತನ ಕೊಡಲು ಹಣ ಇಲ್ಲ. ಗ್ಯಾರಂಟಿ ಹಣವನ್ನೂ ಸರಿಯಾಗಿ ಕೊಡುತ್ತಿಲ್ಲ. ಚುನಾವಣೆ ಸಮಯದಲ್ಲಿ ಗೃಹಲಕ್ಷ್ಮಿ ₹2000 ಹಣ ಹಾಕಿ ಚುನಾವಣೆ ಮಾಡ್ತಿದ್ದೀರಿ. ಮುಂಬರುವ ಚುನಾವಣೆಯಲ್ಲಿ ಬಾದಾಮಿಯಿಂದ ನಮ್ಮ ಶಾಸಕರು ಆಯ್ಕೆ ಆಗುತ್ತಾರೆ ಎಂದು ಭವಿಷ್ಯ ನುಡಿದರು.ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಮಾಜಿ ಸಚಿವ ವೆಂಕಟರಾವ ನಾಡಗೌಡ ಸಿಂದನೂರ ಮಾತನಾಡಿದರು. ವೇದಿಕೆಯಲ್ಲಿ ಮುಖಂಡರಾದ ಎಂ.ಎಸ್. ಹಿರೇಹಾಳ, ಚಂದ್ರಶೇಖರ ಶೇಖಾ, ರಾಘು ಗೋವನಕೊಪ್ಪ, ಸೇರಿದಂತೆ ಮುಖಂಡರು ಇದ್ದರು.