ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನ್ಯಾಯದ ಪರಿಕಲ್ಪನೆ ಇಲ್ಲ : ಚಿತ್ರನಟ ಚೇತನ್ ಅಹಿಂಸಾ

| Published : Aug 10 2024, 01:36 AM IST / Updated: Aug 10 2024, 11:44 AM IST

ಸಾರಾಂಶ

ಮೀಸಲಾತಿ ಸಂರಕ್ಷಣಾ ಸಮಿತಿ, ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನ ಸಂರಕ್ಷಣಾ ಸಮಿತಿಯ ಜಿಲ್ಲಾ ಘಟಕ ಹಾಗೂ ಸ್ವರಾಜ್ ಸಂಘಟನೆ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

 ಚಾಮರಾಜನಗರ :  ಎಸ್‌ಸಿಎಸ್‌ಪಿ, ಟಿಎಸ್‌ಪಿ ಮೀಸಲು ಅನುದಾನದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿರುವುದನ್ನು ಖಂಡಿಸಿ ಮೀಸಲಾತಿ ಸಂರಕ್ಷಣಾ ಸಮಿತಿ, ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನ ಸಂರಕ್ಷಣಾ ಸಮಿತಿಯ ಜಿಲ್ಲಾ ಘಟಕ ಹಾಗೂ ಸ್ವರಾಜ್ ಸಂಘಟನೆ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ ಚಿತ್ರನಟ ಚೇತನ್ ಅಹಿಂಸಾ ಮಾತನಾಡಿ, 2023-24 ಮತ್ತು 2024-25ನೇ ಸಾಲಿನ ಎಸ್ಸಿ, ಎಸ್ಪಿ ಸಮುದಾಯಗಳ ಅಭಿವೃದ್ಧಿಗೆ ಸಂಜೀವಿನಿಯಾಗಬೇಕಿದ್ದ ಎಸ್‌ಸಿಎಸ್‌ಪಿ, ಟಿ.ಎಸ್.ಪಿ. ಯೋಜನೆಯ ಮೀಸಲು ಹಣವನ್ನು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಸಾಮಾನ್ಯ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿರುವುದು ಎಸ್ಸಿ, ಎಸ್ಟಿ ಜನಾಂಗದ ಅಭಿವೃದ್ಧಿಗೆ ಕುಂಠಿತವಾಗಿದೆ ಎಂದು ದೂರಿದರು. 

ಮೀಸಲು ಕ್ಷೇತ್ರದಿಂದ ನಮಗೇನು ಉಪಯೋಗ ಇಲ್ಲ ಎಂದು ಡಾ.ಬಿ.ಆ‌ರ್.ಅಂಬೇಡ್ಕರ್ ಅವರೇ 70 ವರ್ಷಗಳ ಹಿಂದೆ ಹೇಳಿದ್ರೂ ಅಲ್ಲಿಂದಲೂ ಕೂಡ ನಮಗೆ ಯಾವ ನ್ಯಾಯ ಸಿಕ್ಕಿಲ್ಲ. ಈ ಅಸಮಾನತೆಯ ವ್ಯವಸ್ಥೆಯಲ್ಲಿ ಕಾಂಗ್ರೆಸ್ ಪಕ್ಷ ಮನುವಾದಿ, ಅಸಮಾನತೆವಾದಿ, ಶ್ರೀಮಂತರ ಪರವಾಗಿರುವ ಪಕ್ಷವಾಗಿದೆ. ಇಲ್ಲಿ ಬೆಳೆಯುವ ಸಚಿವ ಎಚ್‌.ಸಿ.ಮಹದೇವಪ್ಪ ಸೇರಿದಂತೆ ದಲಿತರು, ಆದಿವಾಸಿಗಳು, ಇಲ್ಲಿ ಬೆಳೆಯುವ ಪ್ರತಿಯೊಬ್ಬರೂ ಉದ್ದೇಶಪೂರ್ವಕವಾಗಿಯೇ ದ್ರೋಹ ಮಾಡಿದ್ದಾರೆ. 

ಸಿದ್ದರಾಮಯ್ಯಗೆ ನ್ಯಾಯದ ಪರಿಕಲ್ಲನೆ ಇಲ್ಲ:

ಯಾರು ಸಂಕಷ್ಟದಲ್ಲಿದ್ದಾರೆ ಅವರನ್ನು ಬೆಳೆಸಬೇಕು. ನಾನು ಸಾವಿರ ಗುಡಿಸಲಿಗೆ ಭೇಟಿ ನೀಡಿದ್ದೇನೆ. ಗುಡಿಸಲಿನಲ್ಲಿ ಮೇಲ್ವರ್ಗದವರು ಬದುಕುತ್ತಿಲ್ಲ. ದಲಿತರು, ಆದಿವಾಸಿಗಳು, ಅಲೆಮಾರಿ, ಶೋಷಿತರು ಜನರು ಗುಡಿಸಲಿನಲ್ಲಿ ಬದುಕುತ್ತಿದ್ದಾರೆ. ಕ್ರಿಕೆಟ್ ಟೀಂ, ಸಿನಿಮಾ ಸ್ಟಾರ್‌ಗಳಲ್ಲಿ ಇವರ ಜನಸಂಖ್ಯೆ ವಿರಳ. ನೋಡಿ ಎಷ್ಟು ಭೇದಭಾವನೆ ಇದೆ. ಈ ರೀತಿಯ ಅನ್ಯಾಯ ವ್ಯವಸ್ಥೆ ವಿರುದ್ಧ ಪ್ರತಿರೋಧ ಒಡ್ಡಬೇಕು. ಎಸ್‌ಸಿಎಸ್‌ಸಿ, ಟಿಎಸ್‌ಪಿ ಅನುದಾನ ಇರುವುದು ಗುಡಿಸಿನಲ್ಲಿರುವವರಿಗೆ ಮನೆ, ಶಿಕ್ಷಣ ರಸ್ತೆ, ಮೂಲಭೂತ ಸೌಕರ್ಯ ಕಲ್ಪಿಸುವುದಕ್ಕೆ ಆದರೆ ಅದನ್ನೆಲ್ಲ ಕಿತ್ತುಕೊಂಡು ಕಳೆದ ವರ್ಷ 12.500 ಸಾವಿರ ಕೋಟಿ, ಈ ವರ್ಷ 14.500 ಸಾವಿರ ಕೋಟಿ ದಲಿತರು, ಆದಿವಾಸಿಗಳ ಹಣ ಕಿತ್ತುಕೊಂಡು ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿದ್ದಾರೆ ಮುಖ್ಯಮಂತ್ರಿಗಳಿಗೆ ನ್ಯಾಯದ ಪರಿಕಲ್ಪನೆ ಗೊತ್ತೇ ಇಲ್ಲ. ಪರಿವರ್ತನೆ ಮನಸ್ಥಿತಿ ಇಲ್ಲ ಎಂದು ಕಿಡಿಕಾರಿದರು.

 ಹೈ ಕೋರ್ಟ್ ವಕೀಲರಾದ ಪ್ರೊ.ಹರಿರಾಮ್, ಭಾಸ್ಕರ್ ಪ್ರಸಾದ್, ಚೊರನಹಳ್ಳಿ ಶಿವಣ್ಣ, ಶೇಖರ್ ಬುದ್ಧ, ಸಿ.ಕೆ.ಮಂಜುನಾಥ್ ಮಾತನಾಡಿದರು. ಪ್ರತಿಭಟನೆಯಲ್ಲಿ ಸೋಮುಸುಂದರ, ಎಸ್.ಪಿ.ಮಹೇಶ್, ರಂಗಸ್ವಾಮಿ ಆಲ್ಕೆರೆ ಅಗ್ರಹಾರ, ದೊಡ್ಡರಾಯಪೇಟೆ ಸಿದ್ದರಾಜು, ವಾಸು ಹೊಂಡರಬಾಳು, ಬಾಬು ರಾಮಸಮುದ್ರ, ಚೇತನ್, ಪ್ರಸಾದ್ ಇತರರು ಭಾಗವಹಿಸಿದ್ದರು.