2.45 ಲಕ್ಷ ಜನಕ್ಕೆ ಸರ್ಕಾರದ ಉಚಿತ ಕನ್ನಡಕ

| Published : Feb 19 2024, 01:33 AM IST / Updated: Feb 19 2024, 02:44 PM IST

Ashakiran

ಸಾರಾಂಶ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ''ಆಶಾಕಿರಣ-ನಿಮ್ಮ ಮನೆ ಬಾಗಿಲಿಗೆ ಕಣ್ಣಿನ ಆರೈಕೆ'' ಯೋಜನೆಗೆ ಹಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಹಾವೇರಿ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ''''ಆಶಾಕಿರಣ-ನಿಮ್ಮ ಮನೆ ಬಾಗಿಲಿಗೆ ಕಣ್ಣಿನ ಆರೈಕೆ'''' ಯೋಜನೆಗೆ ಹಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ವಿಧ್ಯುಕ್ತವಾಗಿ ಚಾಲನೆ ನೀಡಿದರು. 

10 ಮಕ್ಕಳಿಗೆ ಸಾಂಕೇತಿಕವಾಗಿ ಕನ್ನಡಕ ವಿತರಿಸುವ ಮೂಲಕ ಯೋಜನೆಯಡಿ ಮೊದಲ ಹಂತದಲ್ಲಿ ನಾಲ್ಕು ಜಿಲ್ಲೆಗಳ 2.45 ಲಕ್ಷ ಮಂದಿಗೆ ಕನ್ನಡಕ ವಿತರಿಸುವ ಕಾರ್ಯಕ್ಕೆ ಹಸಿರುನಿಶಾನೆ ತೋರಿದರು.

ಈ ಯೋಜನೆಯಲ್ಲಿ ಮೊದಲ ಹಂತದಲ್ಲಿ ಹಾವೇರಿ, ಕಲಬುರಗಿ, ಚಿಕ್ಕಬಳ್ಳಾಪುರ ಹಾಗೂ ಚಾಮರಾಜನಗರ ಜಿಲ್ಲೆಗಳ ಜನರಿಗೆ ಕನ್ನಡಕ ವಿತರಣೆಗೆ ಚಾಲನೆ ಸಿಕ್ಕಿದೆ. ಎರಡನೇ ಹಂತದಲ್ಲಿ ಚಿತ್ರದುರ್ಗ, ಮಂಡ್ಯ, ರಾಯಚೂರು, ಉತ್ತರಕನ್ನಡ ಜಿಲ್ಲೆಗಳಲ್ಲಿ ಮನೆ ಮನೆಗೆ ತೆರಳಿ ಜನರ ಕಣ್ಣಿನ ತಪಾಸಣೆ ನಡೆಸಿ ಕಣ್ಣಿನ ಪೊರೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಶಸ್ತ್ರಚಿಕಿತ್ಸೆ ಹಾಗೂ ಉಚಿತ ಕನ್ನಡಕ ವಿತರಣೆ ಮಾಡುವ ಉದ್ದೇಶ ಹೊಂದಲಾಗಿದೆ.

ಮೊದಲ ಹಂತದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ಹಾವೇರಿ, ಕಲಬುರಗಿ, ಚಾಮರಾಜನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಒಟ್ಟು 56,59,036 ಜನರನ್ನು ಪ್ರಾಥಮಿಕ ತಪಾಸಣೆಗೆ ಒಳಪಡಿಸಿದ್ದಾರೆ. 

ಇವರಲ್ಲಿ 8,28,884 ಜನರಿಗೆ ನೇತ್ರ ಸಂಬಂಧಿ ತೊಂದರೆಗಳು ಕಂಡು ಬಂದಿದ್ದು, ದ್ವಿತೀಯ ಹಂತದ ಚಿಕಿತ್ಸೆಗೆ ಒಳಪಡಿಸಿದಾಗ 2,45,588 ಜನರಿಗೆ ದೃಷ್ಟಿದೋಷ ಇರುವುದು ಪತ್ತೆಯಾಗಿದೆ. ಸುಮಾರು 2.45 ಲಕ್ಷ ದೃಷ್ಟಿದೋಷ ಹೊಂದಿರುವ ಜನರಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಗುತ್ತದೆ.

ಆಶಾಕಿರಣ ಯೋಜನೆ ದೃಷ್ಟಿದೋಷ ಹೊಂದಿದ ಜನಸಮಾನ್ಯರ ಪಾಲಿಕೆ ಬೆಳಕಾಗಲಿದ್ದು, ಯೋಜನೆಯನ್ನು ಹಂತ ಹಂತವಾಗಿ ರಾಜ್ಯಾದ್ಯಂತ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ.

ಈ ಕುರಿತು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಮಾತನಾಡಿ, ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚು ಜನರ ಕಣ್ಣಿನ ತಪಾಸಣೆ ಮಾಡಿದ್ದೇವೆ. ಇದೀಗ 4 ಜಿಲ್ಲೆಗಳ 2.45 ಲಕ್ಷ ಜನರಿಗೆ ಉಚಿತವಾಗಿ ಕನ್ನಡಕ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಚಾಲನೆ ನೀಡಿದ್ದಾರೆ. 39 ಸಾವಿರ ಜನರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಿದ್ದೇವೆ ಎಂದರು.

ಈ ವರ್ಷ ಗದಗ ಸೇರಿ ಇನ್ನೂ ನಾಲ್ಕು ಜಿಲ್ಲೆಗಳನ್ನು ಯೋಜನೆಯಡಿ ಸೇರ್ಪಡೆ ಮಾಡಿದ್ದೇವೆ. ನಾಲ್ಕು ವರ್ಷಗಳ ಅವಧಿಯಲ್ಲಿ ಪ್ರತಿಯೊಬ್ಬರಿಗೂ ನೇತ್ರ ತಪಾಸಣೆ, ಉಚಿತ ಕನ್ನಡಕ, ಶಸ್ತ್ರಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗುವುದು. 15 ಜಿಲ್ಲೆಯಲ್ಲಿ ಎಂಆರ್‌ಐ ಸ್ಕ್ಯಾನ್ ಸೆಂಟರ್ ಇಲ್ಲ. 

ಅದನ್ನು ಕೊಡಿಸುವ ವ್ಯವಸ್ಥೆ ಮಾಡುತ್ತೇವೆ. 42 ಹೊಸ ತಾಲೂಕಿನಲ್ಲಿ ಡಯಾಲಿಸಿಸ್ ಸೆಂಟರ್ ತೆರೆಯುವ ಕಾರ್ಯ ಮಾಡುತ್ತಿದ್ದೇವೆ ಎಂದರು.

ಈ ವೇಳೆ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಸಚಿವರಾದ ಡಾ.ಜಿ.ಪರಮೇಶ್ವರ, ಎಚ್.ಕೆ. ಪಾಟೀಲ, ಶಿವಾನಂದ ಪಾಟೀಲ, ಬಿ.ಎಸ್. ಸುರೇಶ್ ಇತರರಿದ್ದರು.