ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಈ ಹಿಂದೆ ಮೊಹಮ್ಮದ್ ತುಘಲಕ್‌ನನ್ನು ಹುಚ್ಚು ದೊರೆ ಅಂತಾ ಕರೆಲಾಗುತ್ತಿತ್ತು. ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಚ್ಚು ದೊರೆ ಆಗುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹರಿಹಾಯ್ದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಜಾಬ್ ವಿಚಾರ ಕೋರ್ಟ್‌ನಲ್ಲಿದೆ. ನಾವೇನು ಮಾಡುವುದಕ್ಕೆ ಆಗಲ್ಲ ಎಂದು ಶಿಕ್ಷಣ ಸಚಿವರು ಹೇಳಿಕೆ ನೀಡುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಮುಸ್ಲಿಂರ ಓಲೈಕೆ ಮಾಡಲು ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧವನ್ನು ವಾಪಸ್ ಪಡೆಯುವುದಾಗಿ ಹೇಳಿಕೆ ನೀಡುತ್ತಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಾವುದು ಬೇಡ್ವಾ? ಕರ್ನಾಟಕದಲ್ಲಿ ಹಿಂದೂ ಮುಸ್ಲಿಂ ಬಡಿದಾಡುತ್ತಲೇ ಇರಲಿ ಎಂಬುದು ಸಿದ್ದರಾಮಯ್ಯ ಅವರ ಆಸೆ. ಒಂದು ಕಡೆ ಮುಸ್ಲಿಂರನ್ನು ಎತ್ತಿಕಟ್ಟಿ, ಕುತಂತ್ರದ ರಾಜಕೀಯ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.ಕಾಂಗ್ರೆಸ್ ಒಂದೂ ಸೀಟ್ ಸಿಗಲ್ಲ:
ಊಟಕ್ಕೂ ಸಮವಸ್ತ್ರಕ್ಕೂ ಏನು ಸಂಬಂಧ? ಹಿಜಾಬ್ ನಿಷೇಧ ಮಾಡಿ, ಹೈ ಕೋರ್ಟ್ ಆದೇಶ ನೀಡಿದೆ. ಇದನ್ನು ಹೊರತುಪಡಿಸಿ ಹಿಜಾಬ್ ನಿಷೇಧವನ್ನು ವಾಪಸ್ ಪಡೆಯುವ ಹುಂಬತನವನ್ನು ಸರ್ಕಾರ ಮಾಡುತ್ತಿದೆ. ಈ ರೀತಿಯ ಹೇಳಿಕೆಗಳಿಂದ ರಾಜ್ಯದಲ್ಲಿ ದಂಗೆಯಾಗಿ ಯಾರದ್ರೂ ಸತ್ತರೆ ಅದಕ್ಕೆ ಸಿಎಂ ಸಿದ್ದರಾಮಯ್ಯನವರೇ ನೇರಕಾರಣ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಒಂದು ಸೀಟನ್ನು ಕಾಂಗ್ರೆಸ್ ಪಡೆದುಕೊಂಡಿತು. ಈ ಬಾರಿ ಅದೂ ಸಿಗಲ್ಲ. 28 ಸೀಟುಗಳನ್ನು ಬಿಜೆಪಿ ಗೆಲ್ಲುತ್ತದೆ ಎಂಬ ಭಯಹುಟ್ಟಿದೆ. ಹಾಗಾಗಿ. ಈ ರೀತಿಯ ಹೇಳಿಕೆಗಳನ್ನು ಸಿದ್ದರಾಮಯ್ಯನವರು ಕೊಡುತ್ತಿದ್ದಾರೆ ಎಂದು ಟೀಕಿಸಿದರು.ಬಿಜೆಪಿ ಕಾನೂನು ಹೋರಾಟ:
ರಾಜ್ಯದಲ್ಲಿ ಶಾಲೆಯಲ್ಲಿ ಸಮವಸ್ತ್ರ ಇದೆ. ಕಾನೂನು ಸಚಿವರು ಈಗಲಾದರೂ ನಾನು ಇದ್ದೀನಿ ಅಂತಾ ತೋರಿಸಬೇಕು. ಕಾನೂನು ಸಚಿವ ಕಾನೂನು ಓದಿದ್ದರೆ ಇದನ್ನು ಸಿದ್ದರಾಮಯ್ಯ ಅವರಿಗೆ ತಿಳಿಸಬೇಕು. ಹಿಜಾಬ್ ಆದೇಶ ಜಾರಿಗೆ ತರಲು ಅವಕಾಶ ಕೊಡಬಾರದು. ಇದು ಒಂದು ವೇಳೆ ಜಾರಿಯಾದರೆ ಕಾನೂನು ಸಚಿವರು ಕೂಡಲೇ ರಾಜಿನಾಮೆ ಕೊಡಬೇಕು. ಹಿಜಾಬ್ ವಿಚಾರವಾಗಿ ಬಿಜೆಪಿ ವತಿಯಿಂದ ಕಾನೂನು ಹೋರಾಟ ಮಾಡ್ತೀವಿ. ಯಾವುದೇ ಕಾರಣಕ್ಕೂ ಕಾನೂನು ಹೋರಾಟ ಬಿಡುವುದಿಲ್ಲ ಎಂದು ಹರಿಹಾಯ್ದರು.ಮುಸ್ಲಿಮರೂ ಕಾಂಗ್ರೆಸ್‌ಗೆ ಕೈ ಬಿಡುತ್ತಾರೆ!:
ರಾಜ್ಯದಲ್ಲಿ ಬರಗಾಲವಿದೆ. ಒಬ್ಬ ರೈತರಿಗೂ ಬೆಳೆ ಪರಿಹಾರ ಬಂದಿಲ್ಲ. ಬರ ಪರಿಹಾರ ಕೊಡಲು ಸರ್ಕಾರ ಬಳಿ ಹಣವಿಲ್ಲ. ಆದರೆ, ₹10 ಸಾವಿರ ಕೋಟಿ ಮುಸ್ಲಿಂರಿಗೆ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವುದು ಎಷ್ಟರಮಟ್ಟಿಗೆ ಸರಿ ಎಂದು ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.ಕಾಂಗ್ರೆಸ್‌ನವರು ದಲಿತರು, ಹಿಂದುಳಿದವರು, ಮುಸ್ಲಿಂ ಸಮುದಾಯದವರನ್ನು ರಾಜಕೀಯ ದಾಳವಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಆದರೆ, ದಲಿತರು, ಹಿಂದುಳಿದವರಿಗೆ ಕಾಂಗ್ರೆಸ್ ಮೇಲೆ ನಂಬಿಕೆ ಹೋಗಿದೆ. ಈಗ ಮುಸ್ಲಿಂ ಅವರನ್ನು ಓಲೈಸುವ ಉದ್ದೇಶದಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಇದು ಮುಸ್ಲಿಂ ಸಮುದಾಯದ ಮುಗಿಗೆ ತುಪ್ಪ ಸುರಿಯುವ ಹೇಳಿಕೆಯಷ್ಟೆ. ಜಾತಿ ಜನಗಣತಿ ವರದಿಯನ್ನು ಬಿಡುಗಡೆ ಮಾಡುವುದಾಗಿ ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಈ ಹಿಂದೆ ನೀವೇ ಅಧಿಕಾರದಲ್ಲಿ ಇದ್ದಾಗ ಏಕೆ ವರದಿ ಜಾರಿಗೆ ತರಲಿಲ್ಲ? ಈಗ ಮತ್ತೆ ಅದೇ ವಿಷಯ ಪ್ರಸ್ತಾಪ ಮಾಡುತ್ತಿದ್ದಾರೆ. ಈ ಮೂಲಕ ಹಿಂದುಳಿದ ವರ್ಗಗಳಿಗೂ ಅನ್ಯಾಯ ಮಾಡುತ್ತಿದ್ದಾರೆ. ದಲಿತರು, ಹಿಂದುಳಿದ ವರ್ಗದವರು ಕಾಂಗ್ರೆಸ್ ಕೈ ಬಿಟ್ಟಿದ್ದಾರೆ. ಇದೀಗ ಉಳಿದಿರುವುದು ಅಲ್ಪಸಂಖ್ಯಾತರು ಮಾತ್ರ. ಮುಂದೆ ಅವರೂ ಕೈ ಬಿಡಲಿದ್ದಾರೆ ಎಂದು ಭವಿಷ್ಯ ನುಡಿದರು.
ದಲಿತ ವ್ಯಕ್ತಿಯನ್ನು ಪ್ರಧಾನಿಯನ್ನಾಗಿ ಮಾಡುವುದಾಗಿ ಇಂಡಿಯಾ ಮೈತ್ರಿ ಕೂಟದ ಪ್ರಮುಖರು ಹೇಳಿದ್ದಾರೆ. ಅದರೆ, ಕರ್ನಾಟಕದಲ್ಲಿ 135 ಸ್ಥಾನ ಗಳಿಸಿದ್ದರೂ ದಲಿತ ವ್ಯಕ್ತಿಯನ್ನು ಸಿಎಂ ಮಾಡಲಿಲ್ಲ. ಈಗ ದಲಿತರನ್ನು ಪ್ರಧಾನಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದು ಕಾಂಗ್ರೆಸ್ ನವರು ಹೇಳುತ್ತಿಲ್ಲ, ಮಮತಾ ಬ್ಯಾನರ್ಜಿ ಮತ್ತು ಅರವಿಂದ ಕ್ರೇಜಿವಾಲ್ ಈ ಬಗ್ಗೆ ಮಾತನಾಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ನ ಪ್ರಮುಖರೇ ಈ ಬಗ್ಗೆ ಮಾತನಾಡದೆ ಮೌನವಾಗಿದ್ದಾರೆ. ಇದನ್ನು ಮಲ್ಲಿಕಾರ್ಜುನ ಖರ್ಗೆ ಗಮನಿಸಿದ್ದಾರೆ. ಮೊದಲು ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳು ಗೆಲ್ಲಬೇಕು. ನಂತರ ನೋಡೋಣ ಎಂದು ಹೇಳಿದ್ದಾರೆ. ಇಂಡಿಯಾ ಮೈತ್ರಿಕೂಟ ಹೆಚ್ಚಿನ ಸ್ಥಾನ ಗೆಲ್ಲುವುದಿಲ್ಲ ಎಂದು ಅವರಿಗೂ ಗೊತ್ತಿದೆ ಎಂದು ಟೀಕಿಸಿದರು.ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರುತ್ತಿದೆ. ಸಿಬಿಐ ಇರುವುದರಿಂದ ಕಳ್ಳರ ಗ್ಯಾಂಗ್‌ಗೆ ಹೆದರಿಕೆ ಶುರುವಾಗಿದೆ. ಹಾಗಾಗಿ, ಬಹುತೇಕ ಸಿಬಿಐ ತನಿಖೆ ಅಧಿಕಾರವನ್ನು ಹಿಂತೆಗೆದುಕೊಳ್ಳುತ್ತಿವೆ ಎಂದು ಕಾಂಗ್ರೆಸ್‌ನವರು ಹೇಳಿದ್ದಾರೆ ಎಂದು ಕುಟುಕಿದರು.
- - - ಬಾಕ್ಸ್ಬಿಜೆಪಿ-ಜೆಡಿಎಸ್ ಮೈತ್ರಿ ಚುನಾವಣೆಗೆ ಮಹ್ವತ್ವದ ತಿರುವು ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ರಾಜ್ಯದಲ್ಲಿ ಆಗುತ್ತಿರುವ ರಾಜಕೀಯ ಬೆಳೆವಣಿಗೆಯನ್ನು ಗಮನಿಸಿ, ಈ ದೇಶದ ಹಿತದೃಷ್ಠಿಯಿಂದ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಗೆ ಒಪ್ಪಿಗೆ ನೀಡಿರುವುದು ಲೋಕಸಭಾ ಚುನಾವಣೆಯಲ್ಲಿ ಮಹತ್ವದ ತಿರುವು ಪಡೆದುಕೊಳ್ಳಲಿದೆ ಎಂದು ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು. ಕುಮಾರಸ್ವಾಮಿ ಮತ್ತು ವಿಜಯೇಂದ್ರ ಅವರು ಒಂದೇ ದಿನ ಪ್ರಧಾನಿ ಅವರನ್ನು ಭೇಟಿಯಾಗಿ, ಒಂದೇ ರೀತಿಯ ಹೇಳಿಕೆ ನೀಡಿದ್ದಾರೆ. ಮೈತ್ರಿ ಮೂಲಕ ರಾಜ್ಯದ ಎಲ್ಲ 28 ಸ್ಥಾನ ಗೆಲ್ಲುವುದಾಗಿ ತಿಳಿಸಿದ್ದಾರೆ. ಪಕ್ಷದ ಎಲ್ಲ ಹಿರಿಯರನ್ನು ಒಟ್ಟಾಗಿ ತೆಗೆದುಕೊಂಡು ಚುನಾವಣೆ ಎದುರಿಸುವುದಾಗಿ ಹೇಳಿದ್ದಾರೆ. ನಿಖಿಲ್ ಕುಮಾರಸ್ವಾಮಿ ನಾನು ಚುನಾವಣೆಗೆ ನಿಲ್ಲದೇ ಮೈತ್ರಿ ಕೂಟದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಹೇಳಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದರು.
- - - ಬಾಕ್ಸ್-2ಧರ್ಮ ಧರ್ಮಗಳ ನಡುವೆ ಸಂಘರ್ಷ ತರುವ ಸಿಎಂ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ. ಹಿಜಾಬ್ ನಿಷೇಧ ಆದೇಶ ವಾಪಸ್ ತೆಗೆದುಕೊಳ್ಳುತ್ತೇನೆಂದು ಹೇಳಿದ ಸಿಎಂ ಈಗ ಉಲ್ಟಾ ಹೊಡೆದಿದ್ದಾರೆ. ನಾನು ಹಾಗೇ ಹೇಳಿಲ್ಲ, ಪರಿಶೀಲನೆ ಮಾಡ್ತೀನಿ ಅಂದಿದ್ದಾರೆ. ಇದು ರಾಜ್ಯದಲ್ಲಿ ಹಿಂದುತ್ವದ ಶಕ್ತಿಗೆ ಸಿಕ್ಕ ಜಯ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕುಟುಕಿದರು. - - - (-ಫೋಟೋ: ಕೆ.ಎಸ್.ಈಶ್ವರಪ್ಪ)