ಸಿಎಂ ಸಿದ್ದರಾಮಯ್ಯ ಮೈಯೆಲ್ಲ ಕಪ್ಪಾಗಿದೆ: ಎಂ.ಪಿ. ರೇಣುಕಾಚಾರ್ಯ

| Published : Nov 06 2024, 12:34 AM IST

ಸಾರಾಂಶ

ತಮ್ಮ ಅಧಿಕಾರಾವಧಿಯಲ್ಲಿ ಒಂದು ಕಪ್ಪುಚುಕ್ಕೆಯೂ ಇಲ್ಲವೆನ್ನುತ್ತಿದ್ದ ಮೂಡಾ ಹಗರಣದಿಂದಾಗಿ ಸಿದ್ದರಾಮಯ್ಯ ಅವರ ಮೈಯಲ್ಲಾ ಕಪ್ಪಾಗಿದೆ.

ಸಂಡೂರು: ಒಂದೂವರೆ ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಭ್ರಷ್ಟಾಚಾರ, ಮುಡಾ, ವಾಲ್ಮೀಕಿ ನಿಗಮದ ಹಗರಣ ಕಾಂಗ್ರೆಸ್‌ನ ಆರನೇ ಗ್ಯಾರಂಟಿಯಾಗಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಟೀಕಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ಗಾವಣೆ ಪ್ರಕ್ರಿಯೆಯಲ್ಲಿ ಹಗಲು ದರೋಡೆ ನಡೆಯುತ್ತಿದೆ. ಯಾದಗಿರಿಯಲ್ಲಿ ಅಪ್ಪ-ಮಗನ ಕಿರುಕುಳದಿಂದ ಬೇಸತ್ತ ಸಬ್ ಇನ್‌ಸ್ಪೆಕ್ಟರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡರು. ವಾಲ್ಮೀಕಿ ನಿಗಮದ ಹಣವನ್ನು ಲೂಟಿ ಮಾಡಿ, ಅದನ್ನು ಚುನಾವಣೆ, ಬಂಗಾರ, ಕಾರು, ಹೆಂಡದ ಅಂಗಡಿಗಳಲ್ಲಿ ತೊಡಗಿಸಲಾಯಿತು. ಸ್ವತಃ ಮುಖ್ಯಮಂತ್ರಿಗಳೇ ವಾಲ್ಮೀಕಿ ನಿಗಮದಲ್ಲಿ ₹೮೭ ಕೋಟಿ ಹಗರಣ ನಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಬಿಜೆಪಿ ಹೋರಾಟದ ಫಲವಾಗಿ ಸಚಿವ ನಾಗೇಂದ್ರ ಅವರು ಜೈಲು ಸೇರಿದರು. ತಮ್ಮ ಅಧಿಕಾರಾವಧಿಯಲ್ಲಿ ಒಂದು ಕಪ್ಪುಚುಕ್ಕೆಯೂ ಇಲ್ಲವೆನ್ನುತ್ತಿದ್ದ ಮೂಡಾ ಹಗರಣದಿಂದಾಗಿ ಸಿದ್ದರಾಮಯ್ಯ ಅವರ ಮೈಯಲ್ಲಾ ಕಪ್ಪಾಗಿದೆ. ಎಸ್‌ಐಟಿ ರಚನೆ ಮಾಡಿ, ಆ ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯಿತು ಎಂದು ದೂರಿದರು.

ಮಿಲಿಟರಿ, ರೈಲ್ವೆ ನಂತರ ಹೆಚ್ಚು ಆಸ್ತಿಯನ್ನು ಹೊಂದಿರುವುದು ವಕ್ಫ್. ಅದರ ಆಸ್ತಿಯನ್ನು ಕಾಂಗ್ರೆಸ್‌ನ ಮಹಾನ್ ನಾಯಕರು ದುರ್ಬಳಕೆ ಮಾಡಿಕೊಂಡಿದ್ದಾರೆ. ಜಮೀರ್ ಅಹಮದ್ ಖಾನ್ ಒಬ್ಬ ಮತಾಂಧ. ತಲೆ ಹರಟೆ ಮಾಡಿದರೆ, ತಕ್ಕ ಪಾಠ ಕಲಿಸಬೇಕಾಗುತ್ತದೆ. ವಕ್ಫ್ ಹೆಸರಲ್ಲಿ ರಾಜ್ಯದಲ್ಲಿನ ಮಠ-ಮಾನ್ಯಗಳು, ದೇವಸ್ಥಾನಗಳು, ರೈತರ ಜಮೀನುಗಳು, ಪರಿಶಿಷ್ಟ ಜಾತಿ, ಪಂಗಡದ ಜನರ ಜಮೀನುಗಳನ್ನು ವಶಕ್ಕೆ ಪಡೆಯುವ ಹುನ್ನಾರ ನಡೆದಿದೆ. ಸರ್ಕಾರದ ಜಮೀನನ್ನು ಶಾಲೆ, ಕಾಲೇಜು, ಆಸ್ಪತ್ರೆ ಮುಂತಾದ ಸಾರ್ವಜನಿಕರ ಉಪಯೋಗಕ್ಕೆ, ಯೋಧರಿಗೆ ಕೊಡಲು ಉಪಯೋಗಿಸಬೇಕು. ವಕ್ಫ್ ಕುರಿತು ೧೯೭೪-೭೫ರ ಗೆಜೆಟ್ ನೊಟಿಫಿಕೇಷನ್ ವಾಪಸ್ ಪಡೆಯುವ ವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದರು.

ಸಂಡೂರು ಕ್ಷೇತ್ರ ಸಂಪದ್ಭರಿತವಾಗಿದ್ದರೂ, ಅಭಿವೃದ್ಧಿ ಇಲ್ಲವಾಗಿದೆ. ಆದ್ದರಿಂದ ಜನತೆ ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರನ್ನು ಅತಿ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಅಭ್ಯರ್ಥಿ ಬಂಗಾರು ಹನುಮಂತು, ಬಿಜೆಪಿ ಸಂಡೂರು ಮಂಡಲ ಅಧ್ಯಕ್ಷ ನಾನಾ ಸಾಹೇಬ್ ನಿಕ್ಕಂ, ಮುಖಂಡರಾದ ಮಾಡಾಳು ಮಲ್ಲಿಕಾರ್ಜುನ, ಎಚ್. ಹನುಮಂತಪ್ಪ ಮುಂತಾದವರು ಉಪಸ್ಥಿತರಿದ್ದರು.