ಸಾರಾಂಶ
7ನೇ ವೇತನ ಆಯೋಗ ಜಾರಿ ಮತ್ತು ಒಪಿಎಸ್ ಜಾರಿ ಮಾಡುವುದಾಗಿ ಅಶ್ವಾಸನೆ ನೀಡಿ 136 ಸ್ಥಾನ ಗೆದ್ದು ಮಾತಿಗೆ ತಪ್ಪಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಕೆ.ಸಿ. ಪುಟ್ಟಸಿದ್ದಶೆಟ್ಟಿ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
7ನೇ ವೇತನ ಆಯೋಗ ಜಾರಿ ಮತ್ತು ಒಪಿಎಸ್ ಜಾರಿ ಮಾಡುವುದಾಗಿ ಅಶ್ವಾಸನೆ ನೀಡಿ 136 ಸ್ಥಾನ ಗೆದ್ದು ಮಾತಿಗೆ ತಪ್ಪಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಕೆ.ಸಿ. ಪುಟ್ಟಸಿದ್ದಶೆಟ್ಟಿ ಆರೋಪಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ 8 ಲಕ್ಷ ಶಿಕ್ಷಕರ ಮತ ಪಡೆದು ಮುಖ್ಯಮಂತ್ರಿಯಾಗಿದ್ದಾರೆ. ನಿರುದ್ಯೋಗದ ಸಮಸ್ಯೆ ತಾಂಡವವಾಡುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ನೇಮಕ ಮಾಡಲು ಮುಂದಾಗಿಲ್ಲ. ಅಲ್ಲದೇ 45 ಸಾವಿರ ಅತಿಥಿ ಉಪನ್ಯಾಸಕರಿಗೆ ಕೂಲಿ ಕೊಟ್ಟಂತೆ ಸಂಬಳ ನೀಡುತ್ತಿದ್ದಾರೆ. 7 ತಿಂಗಳಿಂದ ಸಂಬಳ ನೀಡಿಲ್ಲ ಎಂದು ಆರೋಪಿಸಿದರು.ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಶಿಕ್ಷಣ ಸಚಿವರು ಆಗಮಿಸುವ ಮೂಲಕ ಕೆಟ್ಟ ಸಂಪ್ರದಾಯ ಬರೆದಿದ್ದಾರೆ. ಅನುಭವಿ ರಾಜಕಾರಣಿಯಾಗಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ ನೋಟಿಸ್ ನೀಡಬೇಕು ಇಲ್ಲದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿಧಾನ ಪರಿಷತ್ತಿಗೆ ಮೇಲ್ಜಾತಿ ಅವರನ್ನೇ ಕಳುಹಿಸಲಾಗುತ್ತಿದ್ದು, ಹಿಂದುಳಿದ ವರ್ಗದವರನ್ನು ಎಲ್ಲಾ ರಾಜಕೀಯ ಪಕ್ಷಗಳು ಕಡೆಗಣಿಸಿವೆ. ಆದ್ದರಿಂದ ಈ ಬಾರಿ ನಾನು ಪಕ್ಷೇತರವಾಗಿ ಸ್ಪರ್ಧಿಸಿದ್ದೇನೆ ಎಂದರು. ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸುವುದು, 7ನೇ ವೇತನ ಆಯೋಗ ಜಾರಿಗೆ ಹೋರಾಟ ನಡೆಸುವುದು, ಹಳೆಯ ಪಿಂಚಣಿ ಪದ್ದತಿ ಜಾರಿಗೆ ಬರುವಂತೆ ಮಾಡುತ್ತೇನೆ. ಅಲ್ಲದೆ ಖಾಸಗಿ ಅನುದಾನಿತ ಶಿಕ್ಷಕರಿಗೆ ಸರ್ಕಾರಿ ಶಿಕ್ಷಕರು ಗಳಿಸಿರುವ ಎಲ್ಲಾ ಸೌಕರ್ಯಗಳನ್ನು ಒದಗಿಸುವುದು, ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಕಡಿಮೆ ಮಾಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ವರದರಾಜು, ಕೆಂಪಶೆಟ್ಟಿ, ಶಿವರಾಜಪ್ಪ, ಶಿವಪ್ಪ ಶೆಟ್ಟರು, ಕುಮಾರ್ ಇದ್ದರು.