ಪ್ರಧಾನಿ ಮೋದಿ ರಾಜ್ಯಗಳಿಗೆ ಏನು ಕೊಟ್ಟಿದ್ದಾರೆ ಎಂದು ವಿರೋಧ ಪಕ್ಷದವರು ಹೇಳಲಿ. ಅದರ ಬಗ್ಗೆ ಚರ್ಚೆಯಾಗಲಿ
ಕುಕನೂರು: ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿ ಮಾಡಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ಆರು ತಿಂಗಳಲ್ಲಿ ಬಂದ್ ಆಗಿ ರಾಜ್ಯ ದಿವಾಳಿ ಆಗುತ್ತದೆ ಎಂದಿದ್ದರು. ಆದರೆ ಸಿಎಂ ಸಿದ್ದರಾಮಯ್ಯರಿಂದ ರಾಜ್ಯದಲ್ಲಿ ಆರ್ಥಿಕ ಶಿಸ್ತು ಪಾಲನೆ ಆಗಿದೆ. ಈ ವರ್ಷ ಬರೋಬ್ಬರಿ 4 ಲಕ್ಷದ 35 ಸಾವಿರ ಕೋಟಿಯಷ್ಟು ಬಜೆಟ್ ಮಂಡಿಸಲಿದ್ದೇವೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ಮಂಗಳೂರು ಗ್ರಾಮದಲ್ಲಿ ಸೋಮವಾರ ರಾತ್ರಿ ಗ್ಯಾರಂಟಿ ಯೋಜನೆಗಳ ಸಭೆ ಹಾಗೂ ಗ್ರಾಮದಲ್ಲಿ ನೂತನ ಬಸ್ ನಿಲ್ದಾಣ ಕಾಮಗಾರಿ, ರಸ್ತೆ ಹಾಗೂ ಬುದ್ಧ, ಬಸವ, ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಪ್ರಧಾನಿ ಮೋದಿ ರಾಜ್ಯಗಳಿಗೆ ಏನು ಕೊಟ್ಟಿದ್ದಾರೆ ಎಂದು ವಿರೋಧ ಪಕ್ಷದವರು ಹೇಳಲಿ. ಅದರ ಬಗ್ಗೆ ಚರ್ಚೆಯಾಗಲಿ. 2025-26ನೇ ಸಾಲಿಗೆ ₹4 ಲಕ್ಷ 9 ಸಾವಿರ ಕೋಟಿ ಹಣ ರಾಜ್ಯ ಸರ್ಕಾರದಿಂದ ಜನರಿಗೆ ತಲುಪಿದೆ. ಅದರಲ್ಲಿ ಕೇಂದ್ರ ಸರ್ಕಾರ ನೀಡಿದ್ದು ಬರೀ ₹63 ಸಾವಿರ ಕೋಟಿ ಮಾತ್ರ. ₹1 ಲಕ್ಷದ 12 ಸಾವಿರ ಕೋಟಿ ಹಣ ನೇರವಾಗಿ ಜನರಿಗೆ ತಲುಪಿದೆ. ಹಾಗೇ ಸಂಬಳ, ಮಾಶಾಸನ ಇತರೆಗಳಿಗಾಗಿ ₹1 ಲಕ್ಷದ 12 ಸಾವಿರ ಕೋಟಿ ನೀಡಿದೆ. ಹಲವಾರು ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಎಂದಿಗೂ ಆರ್ಥಿಕ ಶಿಸ್ತು ಮೀರಿಲ್ಲ. ವಿತ್ತಿಯ ಶಿಸ್ತನ್ನು ಹಿಂದಿನ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಮೀರಿದ್ದಾರೆ ಎಂದು ರಾಯರಡ್ಡಿ ಆರೋಪಿಸಿದರು.
ಪ್ರಧಾನಿ ಮೋದಿ ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ದಿವಾಳಿ ಆಗುತ್ತದೆ ಎಂದು ಹೇಳಿದ್ದರು. ಈಗಾಗಲೇ 2.5 ವರ್ಷ ಗ್ಯಾರಂಟಿ ಯೋಜನೆ ಜನರಿಗೆ ತಲುಪಿಸಿದ್ದೇವೆ. ಕಾಂಗ್ರೆಸ್ ಸರ್ಕಾರ ಎಂದಿಗೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ. ಜ.12ಕ್ಕೆ ಬರೋಬ್ಬರಿ 680 ಕೋಟಿ ರಾಜ್ಯದ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿದ ಹಿನ್ನೆಲೆ ಗಿನ್ನಿಸ್ ದಾಖಲೆ ಆಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.ಸಿಎಂಗೆ ಬಿದ್ದ ಭಾರ:ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಹಿಂದಿನ ಬಿಜೆಪಿ ಸರ್ಕಾರ ₹47 ಸಾವಿರ ಕೋಟಿ ವೆಚ್ಚದ ಕಾಮಗಾರಿಗಳಿಗೆ ಹಣವಿಲ್ಲದೆ ಅಪ್ರೂವಲ್ ಕೊಟ್ಟಿದ್ದು ಹಾಗೂ 7ನೇ ವೇತನಾ ಆಯೋಗದ ಹಣ ₹27 ಸಾವಿರ ಕೋಟಿ ಹೊಂದಾಣಿಕೆ ಮಾಡುವುದು ಭಾರವಾಯಿತು. ಸದ್ಯ ಅದನ್ನು ಸರಿಪಡಿಸಿ ಮುನ್ನಡೆದಿದ್ದೇವೆ. ಎರಡು ತಿಂಗಳ ಗೃಹಲಕ್ಷ್ಮೀ ಹಣ ಹಾಕಿಲ್ಲ ಎಂದು ವಿರೋಧ ಪಕ್ಷದವರು ಟೀಕಿಸುತ್ತಿದ್ದಾರೆ, ಅವರಿಗೆ ಕಾಮನ್ ಸೆನ್ಸ್ ಸಹ ಇಲ್ಲ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಟ್ಯಾಕ್ಸ್ ಹಣ ನೀಡದ ಕಾರಣ ಹಣ ನೀಡುವುದು ತಡವಾಯಿತು ಎಂದರು.
ರೀಲ್ ಅಂದವ್ರೀಗೆ ರೈಲ್: ಗದಗ ವಾಡಿ ರೈಲ್ವೆ ಯೋಜನೆಯನ್ನು ತಳಕಲ್, ಕುಕನೂರು, ಯಲಬುರ್ಗಾ ಮೂಲಕ ವಾಡಿಗೆ ರೈಲ್ವೇ ಯೋಜನೆ ಮಾಡುತ್ತೇವೆ ಎಂದಾಗ ಸ್ಥಳೀಯ ವಿರೋಧ ಪಕ್ಷದವರು ರಾಯರಡ್ಡಿ ರೀಲ್ ಬಿಡ್ತಾನೆ ಅಂದ್ರು, ಸದ್ಯ ಕುಷ್ಟಗಿವರೆಗೆ ರೈಲು ಓಡಾಡುತ್ತಿದ್ದು ಎಲ್ಲರೂ ರೈಲ್ ಹತ್ತಿದ್ದಾರೆ ಎಂದರು. ಕ್ಷೇತ್ರದಲ್ಲಿ ಮ್ಯಾದನೇರಿ ಟು ಕಾತ್ರಾಳ್ ಕ್ರಾಸವರೆಗೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಸಹ ಆಗಲಿದೆ ಎಂದರು.ಈ ವೇಳೆ ತಮ್ಮ ಮಕ್ಕಳಿಗೆ ಗೃಹಲಕ್ಷ್ಮೀ ಹಣದಲ್ಲಿ ಎಲ್.ಐ.ಸಿ ಮಾಡಿಸಿದ ಮಹಿಳೆ ಜ್ಯೋತಿ ಕನಕಪ್ಪ ಕಲ್ಲೂರು ಅವರಿಗೆ ರಾಯರಡ್ಡಿ ಅವರು ಸನ್ಮಾನಿಸಿದರು.
ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಾಣಾಧಿಕಾರಿ ಶ್ರೀನಿವಾಸ, ಪಿಡ್ಯ್ಲೂಡಿ ಅಭಿಯಂತರ ಮಲ್ಲಿಕಾರ್ಜುನ, ಪಂಚಾಯತ್ ರಾಜ್ಯ ಇಂಜಿನಿಯರ್ ವಿಭಾಗದ ಇಂಜಿನಿಯರ್ ರಾಜಶೇಖರ ಮಳಿಮಠ ಮಾತನಾಡಿದರು.ತಹಸೀಲ್ದಾರ್ ಬಸವರಾಜ ಬೆಣ್ಣೆ ಶಿರೂರು, ಇಒ ಸಂತೋಷ ಬಿರಾದಾರ, ಪ್ರಭಾರಿ ಬಿಇಒ ಅಶೋಕಗೌಡ, ಗ್ರಾಪಂ ಉಪಾಧ್ಯಕ್ಷೆ ಅನ್ನಪೂರ್ಣ ಸುರೇಶ ಮ್ಯಾಗಳೇಷಿ, ಹನುಮಂತಗೌಡ ಚಂಡೂರು, ದಾನರಡ್ಡಿ, ಯಂಕಣ್ಣ ಯರಾಶಿ, ಅಶೋಕ ತೋಟದ, ವೀರಣ್ಣ ಹಳ್ಳಿಕೇರಿ, ಎಂ.ಎ.ದೇಸಾಯಿ, ಸುಧೀರ ಕೊರ್ಲಹಳ್ಳಿ, ಸಂಗಮೇಶ ಗುತ್ತಿ, ಪುನೀತ, ದೇವಪ್ಪ ಅರಕೇರಿ, ಸಿಡಿಪಿಒ ಬೆಟದಪ್ಪ ಮಾಳೆಕೊಪ್ಪ, ಪಿಡಿಒ ನೀಲಂ ಚಳಗೇರಿ ಇತರರಿದ್ದರು.