ಲವಲವಿಕೆಯಿಂದ ಯೋಗಾಸನ ಮಾಡಿದ ಸಿಎಂ ಸಿದ್ದರಾಮಯ್ಯ

| Published : Jun 22 2024, 12:45 AM IST

ಸಾರಾಂಶ

ಮುಖ್ಯಮಂತ್ರಿ, ಸಚಿವರು, ಶಾಸಕರು ಸೇರಿದಂತೆ ವಿವಿಧ ಶಾಲೆಗಳ ಮಕ್ಕಳು ಸಾರ್ವಜನಿಕರು ಹಾಗೂ ಪಾಲ್ಗೊಂಡಿದ್ದ ಜನಸ್ತೋಮಕ್ಕೆ ಯೋಗದ ವಿವಿಧ ಆಸನಗಳ ಅಭ್ಯಾಸ ಮಾಡಿಸಿದರು.

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜೆಎಸ್‍ಡಬ್ಲ್ಯೂ ಟೌನ್‍ಶಿಪ್ ವಿದ್ಯಾನಗರದಲ್ಲಿ ಶುಕ್ರವಾರ ಜರುಗಿದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಳಿಕ ಲವಲವಿಕೆಯಿಂದ ಕೆಲವು ಯೋಗಾಸನಗಳ ಅಭ್ಯಾಸ ಮಾಡಿ ಗಮನ ಸೆಳೆದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆಯುಷ್ ಇಲಾಖೆ ಸಹಯೋಗದಲ್ಲಿ ಸಂಘಟಿಸಲಾಗಿದ್ದ ಯೋಗ ದಿನಾಚರಣೆಯಲ್ಲಿ ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿಗಳು, ಮುಖ್ಯಮಂತ್ರಿ, ಸಚಿವರು, ಶಾಸಕರು ಸೇರಿದಂತೆ ವಿವಿಧ ಶಾಲೆಗಳ ಮಕ್ಕಳು ಸಾರ್ವಜನಿಕರು ಹಾಗೂ ಪಾಲ್ಗೊಂಡಿದ್ದ ಜನಸ್ತೋಮಕ್ಕೆ ಯೋಗದ ವಿವಿಧ ಆಸನಗಳ ಅಭ್ಯಾಸ ಮಾಡಿಸಿದರು. ಯೋಗ ಅಭ್ಯಾಸದಿಂದಾಗುವ ಪ್ರಯೋಜನಗಳು ಕುರಿತು ವಿವರಿಸಿದರು.

ಯೋಗದಿಂದ ನೆಮ್ಮದಿ: ಚಲನಚಿತ್ರ ನಟಿ ಶ್ರೀಲೀಲಾ ಮಾತನಾಡಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ನನಗೆ ತುಂಬ ಸಂತಸ ತಂದಿದೆ. ಜನರು ನನ್ನ ಮೇಲೆ ತೋರಿಸುತ್ತಿರುವ ಪ್ರೀತಿಗೆ ನಾನು ಚಿರಋಣಿಯಾಗಿದ್ದೇನೆ. ನಿತ್ಯ ಯೋಗಾಭ್ಯಾಸದಿಂದ ಆರೋಗ್ಯ ವೃದ್ಧಿಸಿಕೊಳ್ಳಬೇಕು. ಯೋಗ-ಧ್ಯಾನಗಳ ಸತತ ಅಭ್ಯಾಸದಿಂದ ದೈಹಿಕ ಹಾಗೂ ಮಾನಸಿಕ ನೆಮ್ಮದಿ ಕಂಡುಕೊಳ್ಳಬಹುದು. ನಿತ್ಯವೂ ಎಲ್ಲರೂ ಯೋಗಾಭ್ಯಾಸ ಮಾಡಿ ಎಂದು ಸಲಹೆ ನೀಡಿದರು.

ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಗಣ್ಯರಾದ ವಿನಯ್ ಗುರೂಜಿ, ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್, ಸಂಸದ ಈ.ತುಕಾರಾಂ, ಕೆಎಂಎಫ್ ಅಧ್ಯಕ್ಷ ಭೀಮನಾಯಕ್, ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್, ವಡ್ಡು ಗ್ರಾಪಂ ಅಧ್ಯಕ್ಷೆ ಕೆ.ಎಂ. ನಿಂಗಮ್ಮ ನಾಗರಾಜ್, ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಎಸ್‍ಪಿ ರಂಜಿತಕುಮಾರ್ ಬಂಡಾರು, ಉಪವಿಭಾಗಾಧಿಕಾರಿ ಎನ್.ಹೇಮಂತ್, ಸೇರಿದಂತೆ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಬಳ್ಳಾರಿ ಜಿಲ್ಲೆಯ ಕಲಾವಿದ ಮಂಜುನಾಥ ಗೋವಿಂದವಾಡ ರಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಲಾಕೃತಿಯನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗೆ ಕಲಾವಿದರ ಕೈನಿಂದಲೇ ಹಸ್ತಾಂತರಿಸಲಾಯಿತು. 12ನೇ ಶತಮಾನದ ಕವಿಯತ್ರಿ ಅಕ್ಕಮಹಾದೇವಿ ಅವರ ಬೃಹತ್ ಚಿತ್ರ ಕಲಾಕೃತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ವೇಳೆ ಅನಾವರಣಗೊಳಿಸಿದರು.

ಮಾತನಾಡದ ಸಿಎಂ: ಅಂತರಾಷ್ಟ್ರೀಯ ದಿನಾಚರಣೆಗೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಚನಾನಂದ ಶ್ರೀಗಳ ಸಲಹೆಯಂತೆ ಕೆಲ ಹೊತ್ತು ಯೋಗಾಭ್ಯಾಸ ಮಾಡಿದರು. ಕಾರ್ಯಕ್ರಮ ಕುರಿತು ಮಾತನಾಡುವಂತೆ ಅಧಿಕಾರಿಗಳು ಕೋರಿದಾಗ, ಇಲ್ಲ ನಾನು ಮಾತನಾಡುವುದಿಲ್ಲ ಎಂದರು. ಬಳಿಕ ವಚನಾನಂದ ಶ್ರೀಗಳು ಸಿಎಂ ಅವರನ್ನು ಮಾತನಾಡುವಂತೆ ಕೋರಿದರೂ ಒಪ್ಪದ ಸಿಎಂ ವೇದಿಕೆ ಕಾರ್ಯಕ್ರಮದಿಂದ ಹೊರಟು ಹೊಸಪೇಟೆ ಕಡೆಗೆ ತೆರಳಿದರು.

ನಟಿ ಶ್ರೀಲೀಲಾ ಪ್ರಮುಖ ಆಕರ್ಷಣೆ: ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದ ನಟಿ ಶ್ರೀಲೀಲಾ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು. ಶ್ರೀಲೀಲಾ ಆಗಮಿಸುತ್ತಿದ್ದಂತೆ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದ ವಿವಿಧ ಶಾಲೆಗಳ ಮಕ್ಕಳು ಹಾಗೂ ಜಿಂದಾಲ್ ನೌಕರರು ಜೋರಾಗಿ ಚಪ್ಪಾಳೆಯ ಸುರಿಮಳೆಗೈದರು. ಇದರಿಂದ ಖುಷಿಯಾದ ನಟಿ ಶ್ರೀಲೀಲಾ ವೇದಿಕೆಯಿಂದಲೇ ಸಂತಸದ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಜಿಂದಾಲ್ ನೌಕರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ನಟಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು.