ಸಿಎಂ ಸಿದ್ದರಾಮಯ್ಯ ತಲೆದಂಡಕ್ಕೆ ಬಿಜೆಪಿ ಬಿಗಿ ಪಟ್ಟು

| Published : Jun 29 2024, 12:45 AM IST / Updated: Jun 29 2024, 05:52 AM IST

Siddaramaiah

ಸಾರಾಂಶ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಿಎಂ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡುವಂತೆ ಆಗ್ರಹಿಸಿ ಶುಕ್ರವಾರ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ನುಗ್ಗುವ ವಿಫಲ ಯತ್ನ ಮಾಡಿದರು.

 ಚಿತ್ರದುರ್ಗ : ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರುಪಾಯಿ ಹಣ ಅಕ್ರಮ ವರ್ಗಾವಣೆ ಹಗರಣಕ್ಕೆ ಸಿಎಂ ಸಿದ್ದರಾಮಯ್ಯ ಅವರ ತಲೆದಂಡಕ್ಕೆ ಬಿಗಿ ಪಟ್ಟುಹಿಡಿದಿರುವ ಭಾರತೀಯ ಜನತಾಪಕ್ಷ ಶುಕ್ರವಾರ ಚಿತ್ರದುರ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗುವ ವಿಫಲ ಯತ್ನ ನಡೆಸಿತು. ಬಿಗಿ ಪೊಲೀಸ್ ಬಂದೋಬಸ್ತ್ ಹಾಗೂ ಬ್ಯಾರಿಕೇಡ್ ಗಳ ದಾಟಿ ನುಗ್ಗಲು ಯತ್ನಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಎಂ.ಚಂದ್ರಪ್ಪ ಸೇರಿ ಹಲವರನ್ನು ಪೊಲೀಸರು ಬಂಧಿಸಿ ಕರೆದೊಯ್ದರು.

ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು ಎರಡು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆಗೆ ಸಾಥ್ ನೀಡಿದರು. ಮದಕರಿನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತೆರೆದ ವಾಹನದಲ್ಲಿ ಒನಕೆ ಓಬವ್ವ ಪ್ರತಿಮೆ ಸನಿಹಕ್ಕೆ ಮೆರವಣಿಗೆ ತೆರಳಿ ನಂತರ ಪ್ರತಿಭಟನಾಕಾರರನ್ನದ್ದೇಶಿಸಿ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇರ ಪಾತ್ರವಿದೆ. ಅವರು ಹಣಕಾಸು ಸಚಿವರಾಗಿರುವುದರಿಂದ ಅವರ ಗಮನಕ್ಕೆ ಬಾರದೆ ಹಣ ವರ್ಗಾವಣೆಯಾಗಿಲ್ಲ. ಹಾಗಾಗಿ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.

ಲೋಕಸಭೆ ಚುನಾವಣೆಗೆ ನೆರೆ ರಾಜ್ಯಗಳಿಗೆ ಹಣ ಪೂರೈಕೆ ಮಾಡುವ ಸಂಬಂಧ ವಾಲ್ಮೀಕಿ ನಿಗಮದ ಅನುದಾನ ಬಳಕೆ ಮಾಡಿಕೊಳ್ಳಲಾಗಿದೆ. ಬೇನಾಮಿ ಖಾತೆಗಳ ತೆರೆದು ಆಂಧ್ರಕ್ಕೆ ಹಣ ಹೋಗಿದೆ. ಪ್ರಕರಣದ ತನಿಖೆ ಎಸ್‌ಐಟಿಗೆ ವಹಿಸಿ ಸಚಿವ ನಾಗೇಂದ್ರರ ರಾಜಿನಾಮೆ ಪಡೆದು ಸಿದ್ದರಾಮಯ್ಯ ಸುಮ್ಮನಿದ್ದಾರೆ. ಆದರೆ ಎಸ್ಐಟಿ ತನಿಖೆ ಮಾಡಲು ಇದುವರೆಗೂ ಸಚಿವ ನಾಗೇಂದ್ರಗೆ ನೋಟಿಸ್‌ ನೀಡಿಲ್ಲವೆಂದು ವಿಜಯೇಂದ್ರ ದೂರಿದರು.

ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ವಾಲ್ಮೀಕಿ ನಿಗಮಕ್ಕೆ ನೂರಾರು ಕೋಟಿ ರು. ನೀಡಿದ್ದರು. ಆ ಹಣವನ್ನೆಲ್ಲಾ ಈಗಿನ ಕಾಂಗ್ರೆಸ್ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ. ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿರುವ ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ ಸೇರಿ ಹಲವರಿಗೆ ಚುನಾವಣಾ ಖರ್ಚುಗಳಿಗಾಗಿ ಹಣ ಪೂರೈಕೆ ಮಾಡಿದ್ದಾರೆ. ಹಗರಣದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಹೆಸರು ಕೂಡ ಕೇಳಿ ಬರುತ್ತಿದೆ. ಆತ್ಮಹತ್ಯೆ ಮಾಡಿಕೊಂಡಿರುವ ನಿಗಮದ ಅಧಿಕಾರಿ ಚಂದ್ರಶೇಖರ ಡೆತ್‍ನೋಟ್‍ನಲ್ಲಿ ಸಚಿವರ ಹೆಸರು ಬರೆದಿದ್ದಾರೆ. ವಾಲ್ಮೀಕಿ ಸಮುದಾಯಕ್ಕೆ ನ್ಯಾಯ ಕೊಡಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದರು.ನಾಯಕರ ದುಡ್ಡೇ ಬೇಕಾ:

ಮೊಳಕಾಲ್ಮೂರು ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ ಮಾತನಾಡಿ, ಆಂಧ್ರಕ್ಕೆ ಕಳಿಸಲು ಸಿಎಂ ಸಿದ್ದರಾಮಯ್ಯಗೆ ನಾಯಕ ಜನಾಂಗದ ದುಡ್ಡೇ ಬೇಕಿತ್ತಾ ಎಂದು ಪ್ರಶ್ನಿಸಿದರು. 187 ಕೋಟಿ ರುಪಾಯಿ ವರ್ಗಾವಣೆ ಮಾಡಿದ್ದಲ್ಲದೇ ಗ್ಯಾರಂಟಿಗಳಿಗೆ ಎಸ್ಪಿಪಿ, ಟಿಎಸ್ಪಿ ಅನುದಾನ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದ್ಯಾವ ನ್ಯಾಯ ಎಂದ ಅವರು ಸಿಎಂ ಸಿದ್ದರಾಮಯ್ಯ ರಾಜಿನಾಮೆ ನೀಡುವ ತನಕ ಹೋರಾಟ ಮುಂದುವರಿಯುತ್ತದೆ ಎಂದರು.

ಶಾಸಕ ಡಾ.ಎಂ.ಚಂದ್ರಪ್ಪ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕರುಗಳಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ವಿ.ರಾಮಚಂದ್ರಪ್ಪ, ಎಸ್.ಕೆ.ಬಸವರಾಜನ್, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ರಾಜ್ಯ ಕಾರ್ಯದರ್ಶಿ ಶರಣ್‍ತಾಳಿಕೆರೆ, ಎಸ್.ಲಿಂಗಮೂರ್ತಿ, ಉಮೇಶ್‍ಕಾರಜೋಳ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಹನುಮಂತೆಗೌಡ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್‍ಯಾದವ್, ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್, ಯುವ ಮುಖಂಡರುಗಳಾದ ಎಂ.ಸಿ.ರಘುಚಂದನ್, ಕುಮಾರಸ್ವಾಮಿ, ಜಿ.ಎಸ್.ಅನಿತ್‍ಕುಮಾರ್, ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ, ಡಾ.ಸಿದ್ದಾರ್ಥ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಮಾಧುರಿ ಗಿರೀಶ್, ಜಿ.ಟಿ.ಸುರೇಶ್ ಸಿದ್ದಾಪರ, ಪಿ.ಸಂಪತ್‍ಕುಮಾರ್, ಬಾಳೆಕಾಯಿ ರಾಂದಾಸ್, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‍ಬೇದ್ರೆ ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.