ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಜಗ್ಗಲ್ಲ, ಬಗ್ಗಲ್ಲ ಎನ್ನುತ್ತಿದ್ದವರು ಆತ್ಮಸಾಕ್ಷಿ ಬಗ್ಗೆ ಮಾತನಾಡುತ್ತಿದ್ದು, ಅವರ ಕುರ್ಚಿ ಅಲುಗಾಡುತ್ತಿರುವುದನ್ನು ಅದು ತೋರಿಸುತ್ತದೆ ಎಂದು ಬಿಜೆಪಿಯ ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಕುಟುಕಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಅವರು, ರಾಜ್ಯದ ಅಭಿವೃದ್ಧಿ ಬಗ್ಗೆ ಒತ್ತು ಕೊಡಬೇಕಾದ ಸಚಿವರು ತಮ್ಮ ನಾಯಕರ ಭೇಟಿ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಸತೀಶ್ ಜಾರಕಿಹೊಳಿ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದ್ದಾರೆ. ಎಂ.ಬಿ.ಪಾಟೀಲ್, ಡಾ.ಪರಮೇಶ್ವರ್, ಎಚ್.ಸಿ.ಮಹದೇವಪ್ಪ ಕುರ್ಚಿ ಮೇಲೆ ಟವೆಲ್ ಹಾಕಲು ಪ್ರಯತ್ನ ಮಾಡುತ್ತಿರುವುದು, ಇವೆಲ್ಲವೂ ಕಾಂಗ್ರೆಸ್ಸಿನಲ್ಲಿ ಯಾವ ಕ್ಷಣದಲ್ಲಿ ಬೇಕಾದರೂ ಯಾವ ಬದಲಾವಣೆ ಬೇಕಿದ್ದರೂ ಆಗಬಹುದು ಎಂಬುದರ ಸೂಚನೆ ಎಂದು ಹೇಳಿದ್ದಾರೆ.
ಅಭಿವೃದ್ಧಿ ಸಂಪೂರ್ಣ ನೆಲಕಚ್ಚಿ ಹೋಗಿರುವುದು ಈ ರಾಜ್ಯದ ಜನರ ದುರಾದೃಷ್ಟ. ಸಚಿವರು ತಮ್ಮ ಆಕಾಂಕ್ಷೆ ವ್ಯಕ್ತಪಡಿಸುವುದರಲ್ಲಿ, ಅದಕ್ಕೆ ಒಳಸಂಚು ರೂಪಿಸುವುದರಲ್ಲಿ ಬ್ಯುಸಿ ಆಗಿದ್ದಾರೆ. ಆದರೆ, ರಾಜ್ಯದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ತೇಲ್ಕೂರ್ ಬೇಸರ ವ್ಯಕ್ತಪಡಿಸಿದ್ದಾರೆ.ಕರ್ನಾಟಕದಲ್ಲಿ ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯಿತಿ ಮುಚ್ಚಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆಗೆ ಕುಳಿತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ತಮ್ಮ ಇಲಾಖೆಯನ್ನು ನಿರ್ವಹಿಸುವಲ್ಲಿ ಸಂಪೂರ್ಣವಾಗಿ ಸೋತು ಹೋಗಿದ್ದಾರೆ ಎಂದರು.
ಗ್ರಾಮ ಪಂಚಾಯಿತಿ ಬಂದ್ ಮಾಡಿ ಫ್ರೀಡಂ ಪಾರ್ಕ್‌ನಲ್ಲಿ ಅಧಿಕಾರಿಗಳು ಧರಣಿ ಮಾಡುವ ಮಟ್ಟಕ್ಕೆ ಪರಿಸ್ಥಿತಿ ಹೋಗಿದೆ ಎಂದರೆ ಅರಾಜಕತೆ ಎಷ್ಟು ಎಂಬುದು ತಿಳಿಯಬಹುದು ಎಂದು ತೇಲ್ಕೂರ್ ದೂರಿದ್ದಾರೆ.ಈ ಅಧಿಕಾರಿಗಳ ಬೇಡಿಕೆ ಸಮರ್ಪಕ ಮತ್ತು ವೈಜ್ಞಾನಿಕವಾಗಿದೆ. ಅವರ ಜೊತೆ ತಾವು ತಕ್ಷಣ ಸ್ಪಂದಿಸಬೇಕು. ಅವರ ಬೇಡಿಕೆ ಈಡೇರಿಸಲು ಬಿಜೆಪಿ ಒತ್ತಾಯಿಸುತ್ತದೆ. ಪ್ರಿಯಾಂಕ್ ಖರ್ಗೆಗೆ ದೊಡ್ಡ ದೊಡ್ಡ ನಾಯಕರ ಕುರಿತು ಕಾಮೆಂಟ್ ಮಾಡುವುದು ಬಿಟ್ಟರೆ ತಮ್ಮ ಇಲಾಖೆ ನಿರ್ವಹಿಸುವುದು ಗೊತ್ತಾಗುತ್ತಿಲ್ಲ. 3 ತಿಂಗಳಿಂದ ಶಿಕ್ಷಕರ ವೇತನ ಕೊಟ್ಟಿಲ್ಲ. ಅಂಗನವಾಡಿ ಅಧಿಕಾರಿಗಳಿಗೆ ವೇತನ ಬಂದಿಲ್ಲ ಎಂದು ತೇಲ್ಕೂರ್ ದೂರಿದ್ದಾರೆ.