ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡದಿದ್ದಲ್ಲಿ ಅಲ್ಪಸಂಖ್ಯಾತರ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ಘಟಕ ಉಪಾಧ್ಯಕ್ಷ, ರೋಣ ಅಂಜುಮನ್ ಇಸ್ಲಾಂ‌ ಕಮಿಟಿ ಅಧ್ಯಕ್ಷ ಬಾವಾಸಾಬ ಬೆಟಗೇರಿ ಎಚ್ಚರಿಸಿದರು.

ರೋಣ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಿ.ಎಸ್. ಪಾಟೀಲ ಅವರನ್ನು ಸಚಿವರನ್ನಾಗಿ ಮಾಡುತ್ತೇವೆಂದು ವಿಧಾನಸಭೆ ಚುನಾವಣೆ ಪ್ರಚಾರ ವೇಳೆ ಸಿಎಂ‌ ಸಿದ್ದರಾಮಯ್ಯ ಹೇಳಿದ್ದರು. ಅವರು ಮಾತು ಕೊಟ್ಟಂತೆ ನಡೆದುಕೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಲ್ಪಅಂಖ್ಯಾತರ ಘಟಕ ಉಪಾಧ್ಯಕ್ಷ, ರೋಣ ಅಂಜುಮನ್ ಇಸ್ಲಾಂ‌ ಕಮಿಟಿ ಅಧ್ಯಕ್ಷ ಬಾವಾಸಾಬ ಬೆಟಗೇರಿ ಆಗ್ರಹಿಸಿದರು.

ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಆಡಿದ ಮಾತಿನಂತೆ ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ರೋಣ ಕ್ಷೇತ್ರಕ್ಕೆ ಪ್ರಾಧ್ಯಾನ್ಯ ನೀಡಿ ಶಾಸಕ ಜಿ.ಎಸ್. ಪಾಟೀಲ ಅವರನ್ನು ಸಚಿವರನ್ನಾಗಿಸಬೇಕು. ಅವರು 5 ಬಾರಿ ಶಾಸಕರಾಗಿ, 3 ಬಾರಿ ನಿಗಮದ ಅಧ್ಯಕ್ಷರಾಗಿ, ಲೆಕ್ಕಪತ್ರ ಸಮಿತಿ ಸದಸ್ಯರು ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆ ಎಂದರು.

ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡದಿದ್ದಲ್ಲಿ ಅಲ್ಪಸಂಖ್ಯಾತರ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಜತೆಗೆ ಕ್ಷೇತ್ರದಲ್ಲಿರುವ ಅಲ್ಪಸಂಖ್ಯಾತರು ಸಾಮೂಹಿಕವಾಗಿ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತೇವೆ ಎಂದು ಎಚ್ಚರಿಸಿದರು.

ಅಂಜುಮನ್ ಇಸ್ಲಾಂ‌ ಕಮಿಟಿ ಉಪಾಧ್ಯಕ್ಷ ಇನಾಯತ್ ತರಪದಾರ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ವಕ್ಫ್‌ ಬೋರ್ಡ್‌ ಜಿಲ್ಲಾ ಪ್ರಭಾರಿ ಅಧ್ಯಕ್ಷ ಯೂಸೂಫ ಇಟಗಿ, ಅಬ್ದುಲರಹಿಮಾನ ಗದಗ, ಕಲೀಲ ರಾಮದುರ್ಗ, ಎ.ಎಸ್. ಖತೀಬ,‌ ಫಯಾಜ ಅಹ್ಮದ ಕಲಾದಗಿ, ಮಲಿಕ‌ ಯಲಿಗಾರ, ಭಾಷಾಸಾಬ ಚಿನ್ನೂರ, ನಭಿಸಾಬ ಕೋಲ್ಕಾರ, ಮಹಬೂಬ ಮುಜಾವರ, ಅಬ್ದುಲ ಲತೀಫ ತಹಶೀಲ್ದಾರ ಮುಂತಾದವರು ಉಪಸ್ಥಿತರಿದ್ದರು.ಎಚ್.ಕೆ. ಪಾಟೀಲರನ್ನು ಮುಖ್ಯಮಂತ್ರಿ ಮಾಡಿ: ತಿಮ್ಮಾರಡ್ಡಿ

ನರಗುಂದ: ರಾಜ್ಯದಲ್ಲಿ ಸಿಎಂ ಬದಲಾಯಿಸಿದರೆ ಸಚಿವ ಎಚ್.ಕೆ. ಪಾಟೀಲ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ತಾಪಂ ಮಾಜಿ ಅಧ್ಯಕ್ಷ ವಿಠ್ಠಲ ತಿಮ್ಮಾರಡ್ಡಿ ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸಂಘಟನೆ ಮತ್ತು ಚುನಾವಣೆಯಲ್ಲಿ ಪಕ್ಷದ ಹೆಚ್ಚು ಶಾಸಕರನ್ನು ಆಯ್ಕೆ ಮಾಡುವಲ್ಲಿ ಸಚಿವ ಎಚ್.ಕೆ. ಪಾಟೀಲರ ಪರಿಶ್ರಮ ಬಹಳ ಇದೆ. ಮೇಲಾಗಿ ಪಾಟೀಲರು ಕಳೆದ ನಾಲ್ಕು ದಶಕದ ತಮ್ಮ ರಾಜಕೀಯ ಜೀವನದಲ್ಲಿ ಸಚಿವರಾಗಿ ಜಿಲ್ಲೆಗೆ ಮತ್ತು ರಾಜ್ಯ ಅಭಿವೃದ್ಧಿಯಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮೇಲಾಗಿ ಸರಳ ಸಜ್ಜನ ರಾಜಕಾರಣಿಯಾದ ಪಾಟೀಲರಿಗೆ ಈ ಹಿಂದೆ ಮುಖ್ಯಮಂತ್ರಿ ಆಗುವ ಹಂತದಲ್ಲಿ ಕಾಣದ ಕೈಗಳ ಕುತಂತ್ರದಿಂದ ಅವರಿಗೆ ಅವಕಾಶ ತಪ್ಪಿದೆ ಎಂದಿದ್ದಾರೆ.