ಸಾರಾಂಶ
ಶಾಸಕರಾದ ನಾರಾ ಭರತ್ ರೆಡ್ಡಿ, ಜೆ.ಎನ್. ಗಣೇಶ್ ಈಚೆಗಷ್ಟೇ ಸರ್ಕಾರಕ್ಕೆ ಪತ್ರ ಬರೆದು ಬುಡಾದಲ್ಲಿ ನಡೆದ ಅವ್ಯವಹಾರ ಕುರಿತು ವಿವರಿಸಿದ್ದರು.
ಬಳ್ಳಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಸಂಡೂರಿಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದು, ಇದೇ ವೇಳೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ಅಧ್ಯಕ್ಷ ಜೆ.ಎಸ್. ಆಂಜಿನೇಯಲು ನಡೆಸಿದ್ದಾರೆ ಎನ್ನಲಾದ ಅವ್ಯವಹಾರ ಕುರಿತು ಪಕ್ಷದ ಮುಖಂಡರು ಹಾಗೂ ಶಾಸಕರ ಜತೆ ಸಿಎಂ ಚರ್ಚಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಶಾಸಕರಾದ ನಾರಾ ಭರತ್ ರೆಡ್ಡಿ, ಜೆ.ಎನ್. ಗಣೇಶ್ ಈಚೆಗಷ್ಟೇ ಸರ್ಕಾರಕ್ಕೆ ಪತ್ರ ಬರೆದು ಬುಡಾದಲ್ಲಿ ನಡೆದ ಅವ್ಯವಹಾರ ಕುರಿತು ವಿವರಿಸಿದ್ದರು. 2024ರ ಮಾರ್ಚ್ 7, ಜುಲೈ 8ರಂದು ನಡೆದ ಪ್ರಾಧಿಕಾರದ ಸಭೆಯ ನಡಾವಳಿಗಳನ್ನು ರದ್ದು ಮಾಡಿ, ಅಧ್ಯಕ್ಷರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರಿದ್ದರು.ಬುಡಾ ಸದಸ್ಯರಾದ ಕೆ.ಎಸ್. ಭರತಕುಮಾರ್, ಕೆ. ಶಿವಕುಮಾರ್ ಎಂಬವರು ಪ್ರಾಧಿಕಾರದ ಆಯುಕ್ತ, ಲೋಕಾಯುಕ್ತರಿಗೆ ದೂರು ನೀಡಿ, ಬುಡಾ ಅಧ್ಯಕ್ಷರ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದರು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಅಧಿಕಾರಿಗಳನ್ನು ತನಿಖಾ ತಂಡವನ್ನಾಗಿಸಿ ಸರ್ಕಾರ ಬಳ್ಳಾರಿಗೆ ಕಳುಹಿಸಿತ್ತು. ಅಕ್ಟೋಬರ್ 3ರಿಂದ ಮೂರು ದಿನ ಬುಡಾದಲ್ಲಿನ ದಾಖಲೆಗಳನ್ನು ಪರಿಶೀಲಿಸಿದ ತನಿಖಾ ತಂಡ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
ಬುಡಾದಲ್ಲಾದ ಅವ್ಯವಹಾರ ಕುರಿತು ಸರ್ಕಾರದ ಹಂತದಲ್ಲಿ ಚರ್ಚೆಯಾಗಿತ್ತು. ಬುಡಾ ಅಧ್ಯಕ್ಷ ಗಾದಿಗೆ ಕುತ್ತು ತರಲಿದೆ ಎಂದೇ ಹೇಳಲಾಗಿತ್ತು. ಇದೀಗ ಜಿಲ್ಲೆಗೆ ಮುಖ್ಯಮಂತ್ರಿ ಪ್ರವಾಸ ಕೈಗೊಂಡಿದ್ದು, ಸೋಮವಾರ ಸಂಡೂರಿನಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ, ನಾನಾ ಯೋಜನೆಗಳ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸುವುದರಿಂದ ಸಿಎಂ ಜಿಲ್ಲೆಯ ಪ್ರಗತಿ ಕುರಿತು ಮುಖಂಡರು, ಶಾಸಕರ ಜತೆ ಮಾತನಾಡಲಿದ್ದಾರೆ. ಇದೇ ವೇಳೆ ಬುಡಾ ಅವ್ಯವಹಾರದ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆಯಿದೆ. ಈ ಕುರಿತು ಸಿಎಂ ಯಾವ ನಿಲುವು ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲವಿದೆ.ಬುಡಾ ಅಧ್ಯಕ್ಷರ ವಿರುದ್ಧದ ಆರೋಪವೇನು?:
2004ರ ಮಾರ್ಚ್ 7, ಜುಲೈ 8ರಂದು ಜರುಗಿದ ಸಭೆಯಲ್ಲಿ, ನಗರದಲ್ಲಿ 350 ಎಕರೆ ಜಮೀನನ್ನು ನಮ್ಮ ಒಪ್ಪಿಗೆಯಿಲ್ಲದೆ ಅನುಮೋದಿಸಲಾಗಿದೆ. ಪ್ರತಿ ಎಕರೆಗೆ ₹1.50 ಲಕ್ಷದಿಂದ ₹2 ಲಕ್ಷವರೆಗೆ ಅಕ್ರಮವಾಗಿ ಹಣ ಪಡೆಯಲಾಗಿದೆ. ಇದು ₹7 ಕೋಟಿಯಾಗಿದೆ. ಸಭೆಯ ನಡಾವಳಿಗಳಿಗೆ ಬುಡಾ ಅಧ್ಯಕ್ಷರು ಒಬ್ಬರೇ ಸಹಿ ಮಾಡಿದ್ದಾರೆ. ಡೆವಲಪರ್‌ಗಳ ಜತೆ ಮುಂಚೆಯೇ ಹಣ ಪಡೆದುಕೊಂಡಿರುವುದರಿಂದ ವಿಸ್ತ್ರೃತ ಚರ್ಚೆಯಾಗದೇ ಅನುಮೋದಿಸಲಾಗಿದೆ. ಅಧ್ಯಕ್ಷರ ಪತ್ನಿ ಹೆಸರಲ್ಲೂ ತಾಲೂಕಿನ ಗೋನಾಳ್ ಗ್ರಾಮದ ಸರ್ವೆ ನಂ.36 ಪೈಕಿ 36/1 ವಿಸ್ತ್ರೀರ್ಣ 5397.75 ಚದರ ಅಡಿ ಏಕನಿವೇಶನ ವಾಣಿಜ್ಯ ವಿನ್ಯಾಸ ನಕ್ಷೆಗೆ ಮಂಜೂರಾತಿ ನೀಡಿದ್ದಾರೆ. ಈ ಯಾವುದೇ ವಿಷಯಗಳನ್ನು ಬುಡಾ ಅಧ್ಯಕ್ಷರು ಸದಸ್ಯರಾದ ನಮ್ಮ ಜತೆ ಚರ್ಚಿಸಿಲ್ಲ. ಬುಡಾದಲ್ಲಿ ನಡೆದ ಅವ್ಯವಹಾರ ಕುರಿತು ತನಿಖೆ ನಡೆಸಬೇಕು. ಅಧ್ಯಕ್ಷರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಆಗ್ರಹಿಸಲಾಗಿತ್ತು. ಸಂಡೂರಿನಲ್ಲಿ ಸಿಎಂ ಸಮಕ್ಷಮದಲ್ಲಿ ಇದು ಚರ್ಚೆಗೆ ಬರುವ ಸಾಧ್ಯತೆ ಇದೆ.