ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಡಳಿತ ಭವನದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಜಗಜ್ಯೋತಿ ಬಸವೇಶ್ವರರ ಪ್ರತಿಮೆಯನ್ನು ಶುಕ್ರವಾರ ಅನಾವರಣಗೊಳಿಸಿದರು. ಮತ್ತು ಮಹರ್ಷಿ ಭಗೀರಥ, ಮಹರ್ಷಿ ವಾಲ್ಮೀಕಿ ಹಾಗೂ ಸಂತ ಕನಕದಾಸರ ಪುತ್ಥಳಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಜಿಲ್ಲಾಡಳಿತ, ಜಿಪಂ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮೊದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿ, ದಾವಣಗೆರೆಯ ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮಿ, ಕೆ.ಆರ್.ನಗರ ಕನಕಗುರು ಪೀಠದ ಡಾ.ಶ್ರೀ ಶಿವಾನಂದಪುರಿ ಸ್ವಾಮಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಸಿದ್ದರಾಮಯ್ಯನವರು ಬಸವಣ್ಣನವರ ಕಂಚಿನ ಪ್ರತಿಮೆ ಅನಾವರಣಗೊಳಿಸಿ, ಪುಷ್ಪಾರ್ಚನೆಗೈದ ಬಳಿಕ ಜಿಲ್ಲಾಡಳಿತ ಭವನದ ಆವರಣದಲ್ಲಿಯೇ ಮಹರ್ಷಿ ಭಗೀರಥ, ಮಹರ್ಷಿ ವಾಲ್ಮೀಕಿ ಹಾಗೂ ಸಂತ ಕನಕದಾಸರ ಪುತ್ಥಳಿಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ನಾಮಫಲಕಗಳನ್ನು ಅನಾವರಣ ಮಾಡಿದರು. ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.ಮಹದೇವಪ್ಪ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಂಸದ ಸುನಿಲ್ ಬೋಸ್, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎ.ಆರ್. ಕೃಷ್ಣಮೂರ್ತಿ, ಎಂ.ಆರ್. ಮಂಜುನಾಥ್, ಎಚ್.ಎಂ. ಗಣೇಶ್ ಪ್ರಸಾದ್, ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ನಗರಸಭೆ ಅಧ್ಯಕ್ಷ ಎಸ್. ಸುರೇಶ್, ಉಪಾಧ್ಯಕ್ಷ ಮಮತಾ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಸಿಎಂ, ಶ್ರೀಗಳ ಎದುರೇ ಅಶಿಸ್ತಿನ ಅನಾವರಣ!ಚಾಮರಾಜನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಜಗಜ್ಯೋತಿ ಬಸವೇಶ್ವರರ ಪ್ರತಿಮೆ ಅನಾವರಣ ಮತ್ತು ಮಹರ್ಷಿ ಭಗೀರಥ, ಮಹರ್ಷಿ ವಾಲ್ಮೀಕಿ ಹಾಗೂ ಸಂತ ಕನಕದಾಸರ ಪುತ್ಥಳಿ ನಿರ್ಮಾಣ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಎದುರೇ ಅಶಿಸ್ತಿನ ಅನಾವರಣವಾಯಿತು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆದ ನಾಲ್ಕು ಕಾರ್ಯಕ್ರಮಕ್ಕೂ ಪ್ರತಿಯೊಂದು ಕಾರ್ಯಕ್ರಮಕ್ಕೂ ಆಯಾಯ ಸಮುದಾಯದವರಿಗೆ ತಲಾ 50 ಪಾಸ್ ಮುಂಚಿತವಾಗಿ ನೀಡಿದ್ದರು. ಭಾಗವಹಿಸಿದ್ದವರು ಸುಮಾರು 20 ನಿಮಿಷಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ತಳ್ಳಾಟ ಮತ್ತು ನೂಕಾಟ ಉಂಟಾಗಿದ್ದರಿಂದ ಪೊಲೀಸರು ಸಾರ್ವಜನಿಕರನ್ನು ನಿಯಂತ್ರಿಸುವಲ್ಲಿ ಹೈರಾಣಾದರು. ಸುತ್ತೂರು ಶ್ರಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಭಾಗವಹಿಸುವ ಪ್ರತಿ ಕಾರ್ಯಕ್ರಮವೂ ಶಿಸ್ತಿನಿಂದ ಕೂಡಿರುತ್ತದೆ. ಅದರಲ್ಲೂ ಜೆಎಸ್ಎಸ್ ಸಂಸ್ಧೆಯವರು ಆಯೋಜಿಸುವ ಕಾರ್ಯಕ್ರಮಗಳು ಮಾದರಿಯಾಗಿರುತ್ತವೆ. ಆದರೆ, ಶುಕ್ರವಾರ ನಡೆದ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ನಡೆದುಕೊಂಡಿದ್ದು, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸರಿಯಾದ ರೀತಿಯಲ್ಲಿ ಆಯೋಜನೆ ಮಾಡದಿರುವುದು ಭಾಗವಹಿಸಿದ್ದವರಿಗೆ ಕಿರಿ ಕಿರಿ ಉಂಟು ಮಾಡಿದ್ದು, ಬೇಸಿಗೆ ಬೀಸಿಲಿನಿಂದ ಭಾಗವಹಿಸಿದ್ದರು ತತ್ತರಿಸಿ ಹೋಗುವಂತೆ ಮಾಡಿತು.