ಬೆಂಗಳೂರಲ್ಲಿ ಸ್ಥಾಪಿಸಲಾದ ರಾಷ್ಟ್ರೀಯ ಸೈನಿಕ ವೀರಗಲ್ಲು ಸಿಎಂ ಸಿದ್ದರಾಮಯ್ಯರಿಂದ ಅನಾವರಣ

| Published : Jul 27 2025, 01:53 AM IST

ಬೆಂಗಳೂರಲ್ಲಿ ಸ್ಥಾಪಿಸಲಾದ ರಾಷ್ಟ್ರೀಯ ಸೈನಿಕ ವೀರಗಲ್ಲು ಸಿಎಂ ಸಿದ್ದರಾಮಯ್ಯರಿಂದ ಅನಾವರಣ
Share this Article
  • FB
  • TW
  • Linkdin
  • Email

ಸಾರಾಂಶ

ದೇಶಕ್ಕಾಗಿ ಹುತಾತ್ಮರಾದ ವೀರ ಯೋಧರ ಹೆಮ್ಮೆಯ ಸ್ಮರಣೆ ಹಾಗೂ ಅವರ ಕುಟುಂಬದ ನೋವಿನ ಭಾವದ ನಡುವೆ ಶನಿವಾರ ನಗರದಲ್ಲಿ ಕಾರ್ಗಿಲ್ ವಿಜಯೋತ್ಸವದ 26ನೇ ವರ್ಷಾಚರಣೆ ಆಚರಿಸಿ, ಸೈನಿಕರಿಗೆ ಗೌರವ ಅರ್ಪಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೇಶಕ್ಕಾಗಿ ಹುತಾತ್ಮರಾದ ವೀರ ಯೋಧರ ಹೆಮ್ಮೆಯ ಸ್ಮರಣೆ ಹಾಗೂ ಅವರ ಕುಟುಂಬದ ನೋವಿನ ಭಾವದ ನಡುವೆ ಶನಿವಾರ ನಗರದಲ್ಲಿ ಕಾರ್ಗಿಲ್ ವಿಜಯೋತ್ಸವದ 26ನೇ ವರ್ಷಾಚರಣೆ ಆಚರಿಸಿ, ಸೈನಿಕರಿಗೆ ಗೌರವ ಅರ್ಪಿಸಲಾಯಿತು.

ಇದೇ ವೇಳೆ ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನದ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಸ್ಥಾಪಿಸಿರುವ ಸುಮಾರು 700 ಟನ್‌ ತೂಕದ 75 ಅಡಿ ಎತ್ತರದ ಏಕಶಿಲ ‘ವೀರಗಲ್ಲು’ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು. ದೇಶದ ಹೆಮ್ಮೆಯ ಸೈನಿಕರ ತ್ಯಾಗ-ಬಲಿದಾನವನ್ನು ಸ್ಮರಿಸಿ ಹುತಾತ್ಮ ಯೋಧ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿ ನಮನ ಸಲ್ಲಿಸಿದರು.

ರಾಷ್ಟ್ರೀಯ ಸೈನಿಕ ಸ್ಮಾರಕ ಮ್ಯಾನೇಜ್ಮೆಂಟ್‌ ಟ್ರಸ್ಟ್‌ ವತಿಯಿಂದ ನಡೆದ ಕಾರ್ಗಿಲ್‌ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತೀಯ ವಾಯುಪಡೆಯ ನಿವೃತ್ತ ಏರ್‌ಕಮೋಡರ್‌ ಎಂ.ಕೆ.ಚಂದ್ರಶೇಖರ್‌ ಅವರು, ವೀರಗಲ್ಲು ದೇಶದ ವೀರ ಸೈನಿಕರ ತ್ಯಾಗ-ಬಲಿದಾನದ ಸಂಕೇತ. ಪ್ರಾಣ ತ್ಯಾಗ ಮಾಡಿದ ಸೈನಿಕರ ಕುಟುಂಬಗಳ ಪಾಲಿಗೆ ಪವಿತ್ರ ಸ್ಥಳ. ದೇಶದ ರಕ್ಷಣೆಗಾಗಿ ನಮಗಾಗಿ ಯೋಧರು ಮಾಡಿರುವ ಸೇವೆ, ತೋರಿದ ಶೌರ್ಯ, ತ್ಯಾಗ, ಬಲಿದಾನವನ್ನು ಮಕ್ಕಳಿಗೆ, ಯುವಜನರಿಗೆ ತಿಳಿಸುವ ಅಗತ್ಯ ಇದೆ ಎಂದರು.

ಸ್ವಾತಂತ್ರ್ಯಾ ನಂತರದಲ್ಲಿ ಸೇನಾಪಡೆಗಳಿಗೆ ಗೌರವಿಸುವ, ಸ್ಮರಿಸುವ ದೇಶದ ಮೊದಲ ಪ್ರಮುಖ ಸ್ಮಾರಕವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗಿದೆ. ಇದು ಎಲ್ಲ ಭಾರತೀಯರಿಗೂ ಸ್ಫೂರ್ತಿಯ ತಾಣ. ಸ್ಮಾರಕ, ವೀರಗಲ್ಲು ಯೋಜನೆ ಅನುಷ್ಠಾನಕ್ಕೆ ಕೊಡುಗೆ ನೀಡಿ, ಜೊತೆಯಾಗಿ ದೃಢವಾಗಿ ನಿಂತ ನಿವೃತ್ತ ಯೋಧರು ಮತ್ತು ಅವರ ಕುಟುಂಬಗಳು ಹಾಗೂ ಅಸಂಖ್ಯಾತ ಜನರ ನಿರಂತರ ಸಹಕಾರ ಮತ್ತು ಬೆಂಬಲದಿಂದ ಸ್ಮಾರಕ ಸಿದ್ಧವಾಗಿದೆ. ವೀರಗಲ್ಲನ್ನು ಲೋಕಾರ್ಪಣೆ ಮಾಡಿದ ಸರ್ಕಾರದ ಕ್ರಮ ಸ್ವಾಗತಾರ್ಹ ಎಂದು ಹೇಳಿದರು.

ಸಮಾರಂಭದಲ್ಲಿ ಸೈನಿಕರ ಕುಟುಂಬದವರು, ಸೈನಿಕರು, ಎನ್‍ಸಿಸಿ, ಸ್ಕೌಟ್, ಆರ್ಮಿ ಪಬ್ಲಿಕ್ ಶಾಲೆ ಮಕ್ಕಳು, ನಿವೃತ್ತ ಸೇನಾ ಅಧಿಕಾರಿಗಳು ಸಂಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್‍ನ ಬ್ಯಾಂಡ್‍ಸೆಟ್ ನುಡಿಸಿದ ಸೈನಿಕ ಸಂಗೀತ ಗಮನ ಸೆಳೆಯಿತು.

ಗೃಹ ಸಚಿವ ಡಾ.ಜಿ.ಪರಮೇಶ್ವರ, ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ನಿವೃತ್ತ ಸೇನಾ ಅಧಿಕಾರಿಗಳು, ಮಾಜಿ ಯೋಧರು ಮತ್ತಿತರರು ಉಪಸ್ಥಿತರಿದ್ದರು.