ಸಾರಾಂಶ
ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆ. ೩೦ರಂದು ಹಾವೇರಿ ಜಿಲ್ಲೆಗೆ ಆಗಮಿಸಲಿದ್ದು, ಅಂದು ಮಧ್ಯಾಹ್ನ ೧೨.೩೦ಕ್ಕೆ ಬ್ಯಾಡಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೇವರಗುಡ್ಡದಲ್ಲಿ ಶ್ರೀ ಮಾಲತೇಶ ದೇವರ ದರ್ಶನ ಪಡೆದು, ಬಳಿಕ ಸ್ಥಳೀಯರು ನಿರ್ಮಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಪುತ್ಥಳಿ ಅನಾವರಣಗೊಳಿಸಲಿದ್ದಾರೆ ಎಂದು ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ, ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಿಎಂ ಸಿದ್ದರಾಮಯ್ಯನವರು ಶುಕ್ರವಾರ ಬೆಳಗ್ಗೆ ೧೦.೩೦ಕ್ಕೆ ವಿಶೇಷ ವಿಮಾನ ಮೂಲಕ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ ೧೨ಕ್ಕೆ ಹುಬ್ಬಳ್ಳಿ ಬಿಟ್ಟು ಸುಕ್ಷೇತ್ರ ದೇವರಗುಡ್ಡಕ್ಕೆ ಆಗಮಿಸಲಿದ್ದಾರೆ. ಆರಂಭದಲ್ಲಿ ಮಾಲತೇಶ ದೇವರ ದರ್ಶನ ಪಡೆದು, ಬಳಿಕ ರಾಯಣ್ಣನ ಮೂರ್ತಿ ಅನಾವರಣ ಮಾಡಲಿದ್ದಾರೆ. ನಂತರ ಸುಮಾರು ೯೦ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಕನಕ ಭವನ ಉದ್ಘಾಟಿಸಿ ಬಳಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.ಮುಖ್ಯಮಂತ್ರಿಗಳ ಜತೆಗೆ ಪ್ರವಾಸೋದ್ಯಮ ಸಚಿವ ಹೆಚ್.ಕೆ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ವಿಪ ಮುಖ್ಯ ಸಚೇತಕ ಸಲೀಂ ಅಹ್ಮದ್ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ಮಾಜಿ ಶಾಸಕರು, ಗಣ್ಯರು ಭಾಗವಹಿಸಲಿದ್ದಾರೆ.ಈಗಾಗಲೇ ಸುಮಾರು ೨೫-೨೮ಕೋಟಿ ಅಧಿಕ ಹಣವನ್ನು ದೇವರಗುಡ್ಡ ಅಭಿವೃದ್ಧಿಗೆ ಖರ್ಚು ಮಾಡಿದ್ದೇವೆ. ಇನ್ನು ಹೆಚ್ಚಿನ ಅಭಿವೃದ್ಧಿ ಮಾಡಿ ಪ್ರವಾಸೋದ್ಯಮ ತಾಣ ಮಾಡುವುದಾಗಿ ಸಿಎಂ ತಿಳಿಸಿದ್ದಾರೆ. ಜತೆಗೆ ಯಲ್ಲಮ್ಮ ಗುಡ್ಡದ ಮಾದರಿಯಲ್ಲಿ ದೇವರ ದರ್ಶನಕ್ಕೆ ರೋಪ್ ವೇ ಕೂಡ ಮಾಡುವ ಚಿಂತನೆ ಇದೆ. ಸರ್ಕಾರದಿಂದ ಇನ್ನೂ ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿ ಇದ್ದೇವೆ ಎಂದು ತಿಳಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ದೇವರಗುಡ್ಡ ಕಾರ್ಯಕ್ರಮ ಮುಗಿಸಿಕೊಂಡು ನೇರವಾಗಿ ಹಾವೇರಿಹೊರವಲಯದ ಐತಿಹಾಸಿಕ ಹೆಗ್ಗೇರಿ ಕೆರೆಗೆ ಆಗಮಿಸಿ ಬಾಗಿನ ಅರ್ಪಣೆ ಮಾಡಲಿದ್ದಾರೆ. ಹೆಗ್ಗೇರಿ ಕೆರೆ ಭರ್ತಿ ಮಾಡಿದ ಕೀರ್ತಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಈ ಹಿನ್ನೆಲೆಯಲ್ಲಿ ಅವರ ಕೈಯಿಂದಲೇ ಬಾಗಿನ ಅರ್ಪಣೆ ಮಾಡಲಾಗುತ್ತಿದೆ. ಈ ಕೆರೆಯಲ್ಲಿ ಗಾಜಿನ ಮನೆ, ಪಕ್ಷಿಧಾಮ ಮಾಡುವ ನಿಟ್ಟಿನಲ್ಲಿ ಅನುದಾನವೂ ಬಿಡುಗಡೆಯಾಗಿತ್ತು. ಆದರೆ ಕಾಲಾಂತರದಲ್ಲಿ ಹಣ ವಾಪಸ್ ಹೋಗಿದೆ. ಈ ಬಾರಿ ಸಿಎಂ ಗಮನಕ್ಕೆ ತಂದು ಹೆಗ್ಗೇರಿ ಕೆರೆ ಸರಿಯಾಗಿ ಅಭಿವೃದ್ದಿ ಮಾಡುವ ಪ್ರಯತ್ನ ಮಾಡುತ್ತೇವೆ. ಪಕ್ಷಿಧಾಮದ ಜತೆಗೆ ಹೆಗ್ಗೇರಿ ಕೆರೆಯ ಸೌಂದರ್ಯೀಕರಣಕ್ಕೆ ಶ್ರಮಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ ಹಿರೇಮಠ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್ ಗಾಜಿಗೌಡ್ರ, ಎಂ.ಎಂ. ಮೈದೂರ, ಪ್ರಭು ಬಿಷ್ಟನಗೌಡ್ರ, ಬಸವರಾಜ ಹೆಡಿಗೊಂಡ, ಮಹದೇವಗೌಡ ಗಾಜಿಗೌಡ್ರ ಇತರರಿದ್ದರು.