ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಟಗರು, ಹುಲಿ ಇದ್ದಂತೆ ಯಾವುದೇ ಕಾರಣಕ್ಕೂ ಭಯ ಬೀಳುವ ಅಗತ್ಯವಿಲ್ಲ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಹೇಳಿದರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಟಗರು, ಹುಲಿ ಇದ್ದಂತೆ ಯಾವುದೇ ಕಾರಣಕ್ಕೂ ಭಯ ಬೀಳುವ ಅಗತ್ಯವಿಲ್ಲ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಹೇಳಿದರು.ರಾಜ್ಯಪಾಲರ ಪ್ರಾಸಿಕ್ಯೂಷನ್ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಿಂದುಳಿದ ವರ್ಗ ನಾಯಕ ಎನ್ನುವ ಕಾರಣದಿಂದ ಬಿಜೆಪಿ ಟಾರ್ಗೆಟ್ ಮಾಡಿದೆ. ಸಿದ್ದರಾಮಯ್ಯ ಜನರ ಮುಖ್ಯಮಂತ್ರಿ. ಅಂಥವರ ವಿರುದ್ಧ ಯಾರೋ ಖಾಸಗಿ ವ್ಯಕ್ತಿ ಕೊಟ್ಟ ದೂರಿನ ಅನ್ವಯ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ ಎಂದರೆ ಏನರ್ಥ? ಈ ಕಾರಣಕ್ಕಾಗಿಯೇ ನಾವು ರಾಜಭವನ ಚಲೋ ಹೋರಾಟ ಮಾಡಿದೇವು ಎಂದರು.
ದೂರು ಕೊಟ್ಟ ದಿನದಂದೇ ರಾಜ್ಯಪಾಲರು ನೋಟಿಸ್ ಕೊಡುತ್ತಾರೆ. ಕೆಲವೇ ದಿನಗಳಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುತ್ತಾರೆ. ಅದಕ್ಕಿಂತ ಮುಂಚೆಯೇ ನವೆಂಬರ್‌ನಲ್ಲಿ ಕುಮಾರಸ್ವಾಮಿ ವಿರುದ್ಧ ತನಿಖಾ ಸಂಸ್ಥೆಯೇ ದೂರು ಕೊಟ್ಟರೂ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಲ್ಲ. ಮುರಗೇಶ ನಿರಾಣಿ, ಶಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ ವಿರುದ್ಧ ತನಿಖೆಗೂ ಅನುಮತಿ ಏಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.ಮುಡಾ ನಿವೇಶನ ಕೊಡುವ ವಿಚಾರದಲ್ಲಿ ಸಿದ್ದರಾಮಯ್ಯ ಪಾತ್ರ ಏನಿದೆ? ಲಿಂಗಾ ಎನ್ನುವವವರು 1935ರಲ್ಲಿ ಭೂಮಿ ಖರೀದಿಸಿದ್ದರು. ಆಗ ಸಿದ್ದರಾಮಯ್ಯ ಹುಟ್ಟಿಯೇ ಇರಲಿಲ್ಲ. ಅವರಿಂದ ಸಿದ್ದರಾಮಯ್ಯ ಭಾವ ಮೈದುನನಿಗೆ ಬಂದಿದೆ. ಅವರು ಸಿದ್ದರಾಮಯ್ಯ ಪತ್ನಿಗೆ ಕೊಟ್ಟಿದ್ದರು. ಆಗಿನ ಸರ್ಕಾರ ಸಿದ್ದರಾಮಯ್ಯ ಪತ್ನಿಗೆ ಕೊಟ್ಟಿದೆ. ಇವರೊಬ್ಬರಿಗೆ ಕೊಟ್ಟಿದ್ದಲ್ಲ. 125 ಜನರಿಗೆ ನಿವೇಶನ ಕೊಡಲಾಗಿದೆ ಎಂದರು.
ಬಿಜೆಪಿಗೆ ಸಿದ್ದರಾಮಯ್ಯ ಜನಪ್ರಿಯತೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಸರ್ಕಾರವನ್ನು ಅಭದ್ರಗೊಳಿಸಲು ಈ ರೀತಿ ಮಾಡುತ್ತಿದೆ. ಆದರೆ ಸಿದ್ದರಾಮಯ್ಯ ಹೆದರಿಲ್ಲ. ಹೆದರುವ ಅವಶ್ಯಕತೆಯೂ ಇಲ್ಲ. ಹೈಕಮಾಂಡ್, ಎಲ್ಲ ಶಾಸಕರು, ಜತೆಗೆ ರಾಜ್ಯದ ಜನತೆಯೂ ಅವರೊಂದಿಗಿದೆ ಎಂದರು.