ವಾಲ್ಮೀಕಿ ನಿಗಮ ಹಗರಣದಲ್ಲಿ ಸಿಎಂ ಸಿದ್ದು ಭಾಗಿ ಸಾಬೀತು: ಕ್ಯಾ. ಬ್ರಿಜೇಶ್‌ ಚೌಟ

| Published : Oct 18 2024, 12:14 AM IST

ವಾಲ್ಮೀಕಿ ನಿಗಮ ಹಗರಣದಲ್ಲಿ ಸಿಎಂ ಸಿದ್ದು ಭಾಗಿ ಸಾಬೀತು: ಕ್ಯಾ. ಬ್ರಿಜೇಶ್‌ ಚೌಟ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ಸರ್ಕಾರದಿಂದ ಪೊಲೀಸರನ್ನು ಬಳಸಿಕೊಂಡು ಹಿಂದು ಕಾರ್ಯಕರ್ತರನ್ನು ಹೆದರಿಸುವ ಪ್ರಯತ್ನ ರಾಜ್ಯದಲ್ಲಿ ನಡೆಯುತ್ತಿದೆ, ಹಿಂದುಗಳಿಗೆ ಸುರಕ್ಷತೆ ಇಲ್ಲದ ವಾತಾವರಣ ನಿರ್ಮಾಣವಾಗಿದೆ ಎಂದು ಸಂಸದ ಕ್ಯಾ.ಬ್ರಿಜೇಶ್‌ ಚೌಟ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ವಾಲ್ಮೀಕಿ ನಿಗಮ ಹಗರಣದ ಪ್ರಮುಖ ಆರೋಪಿ ನಾಗೇಂದ್ರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದಾರೆ. ಅವರು ವಿಜಯೋತ್ಸವದ ರೀತಿಯಲ್ಲಿ ಸಿದ್ದರಾಮಯ್ಯಗೆ ಶಾಲು ಹಾಕಿರುವುದನ್ನು ನೋಡಿದಾಗ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಭಾಗಿ ಎಂದು ಸಾಬೀತುಪಡಿಸಿದ್ದಾರೆ ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್‌ ಚೌಟ ಆರೋಪಿಸಿದ್ದಾರೆ.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಕ್ಕೆ ಮಹಾಕಾವ್ಯ ರಾಮಾಯಣವನ್ನು ಕೊಟ್ಟ ವಾಲ್ಮೀಕಿ ಮಹರ್ಷಿಯ ಜಯಂತಿಯನ್ನು ರಾಜ್ಯದಲ್ಲಿ ದುಃಖದಲ್ಲಿ ಆಚರಿಸುವ ಪರಿಸ್ಥಿತಿ ಬಂದಿದೆ. ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಇಂತಹ ಪರಿಸ್ಥಿತಿ ತಂದಿಟ್ಟಿದ್ದಾರೆ. ವಾಲ್ಮೀಕಿ ಮಹರ್ಷಿಯ ಬದುಕು, ಆದರ್ಶ ದಾರಿದೀಪವಾಗಬೇಕಿತ್ತು. ಆದರೆ ರಾಜ್ಯ ಸರ್ಕಾರ ವಾಲ್ಮೀಕಿ ನಿಗಮದಲ್ಲೇ ಹಗರಣ ನಡೆಸಿದ್ದು, ಹಿಂದುಳಿದ ಸಮುದಾಯದ ಏಳಿಗೆಗೆ ಮೀಸಲಿಟ್ಟ ಹಣವನ್ನು ಲೂಟಿ ಮಾಡಿದೆ. ತೆಲಂಗಾಣ ಚುನಾವಣೆಗೆ ಈ ಹಣವನ್ನು ಖರ್ಚು ಮಾಡಿದೆ. ಹಗರಣದ ಎ 1 ಆರೋಪಿ ನಾಗೇಂದ್ರ ಜಾಮೀನು ಮೇಲೆ ಬಿಡುಗಡೆಯಾಗಿರುವುದು ದುರದೃಷ್ಟಕರ. ಜೈಲಿನಿಂದ ಹೊರಬಂದು ಮುಖ್ಯಮಂತ್ರಿಯನ್ನು ಸನ್ಮಾನಿಸಿರುವುದು ರಾಜ್ಯದ ಜನತೆ ತಲೆತಗ್ಗಿಸುವಂತೆ ಮಾಡಿದೆ ಎಂದರು.

ಮಹಾ ಚುನಾವಣೆಗೂ ಹಣಕ್ಕೆ ಸೂಚನೆ?: ಕಾಂಗ್ರೆಸ್‌ ಪಕ್ಷಕ್ಕೆ ಸದ್ಯ ಕರ್ನಾಟಕವೇ ಎಟಿಎಂ ಆಗಿದ್ದು, ಇದೀಗ ಮಹಾರಾಷ್ಟ್ರ ಚುನಾವಣೆಗೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಲ್ಮೀಕಿ ಹಗರಣದಲ್ಲಿ ಈಗ ಜಾಮೀನಿನಿಂದ ಹೊರಬಂದು ಭೇಟಿಯಾಗಿರುವ ಎ 1 ಆರೋಪಿ, ಮಾಜಿ ಸಚಿವ ನಾಗೇಂದ್ರ ಅವರಿಂದ ಸಲಹೆ ಸೂಚನೆ ಪಡೆದಿರುವ ಸಾಧ್ಯತೆಗಳಿವೆ. ಈಗ ಯಾವ ನಿಗಮದ ಮೇಲೆ ಸಿಎಂ ಕಣ್ಣಿಟ್ಟಿದ್ದಾರೆ? ಗುರುತರವಾದ ಆರೋಪ ಕೇಳಿ ಬರುವಾಗ ಪಾರದರ್ಶಕ ತನಿಖೆಗೆ ಪೂರಕವಾಗಿ ರಾಜಿನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಮಹಾನಗರ ಪಾಲಿಕೆ ಮೇಯರ್‌ ಮನೋಜ್‌ ಕುಮಾರ್‌, ಮುಖಂಡರಾದ ಕ್ಯಾ.ಗಣೇಶ್‌ ಕಾರ್ಣಿಕ್‌, ಪ್ರೇಮಾನಂದ ಶೆಟ್ಟಿ, ಸಂಜಯ ಪ್ರಭು, ಯತೀಶ್‌ ಆರ್ವಾರ್‌, ಪ್ರೇಮಾನಂದ ಶೆಟ್ಟಿ, ಕದ್ರಿ ಮನೋಹರ್‌ ಶೆಟ್ಟಿ ಇದ್ದರು.

ಪೊಲೀಸ್‌ ಬಳಸಿ ಹಿಂದೂಗಳ ಹೆದರಿಸುವ ಯತ್ನ

ಕಾಂಗ್ರೆಸ್‌ ಸರ್ಕಾರದಿಂದ ಪೊಲೀಸರನ್ನು ಬಳಸಿಕೊಂಡು ಹಿಂದು ಕಾರ್ಯಕರ್ತರನ್ನು ಹೆದರಿಸುವ ಪ್ರಯತ್ನ ರಾಜ್ಯದಲ್ಲಿ ನಡೆಯುತ್ತಿದೆ, ಹಿಂದುಗಳಿಗೆ ಸುರಕ್ಷತೆ ಇಲ್ಲದ ವಾತಾವರಣ ನಿರ್ಮಾಣವಾಗಿದೆ ಎಂದು ಸಂಸದ ಕ್ಯಾ.ಬ್ರಿಜೇಶ್‌ ಚೌಟ ಆರೋಪಿಸಿದರು.

ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಹಿಂದು ಮುಖಂಡನ ಮೇಲೆ ಪೊಲೀಸ್‌ ಅಧಿಕಾರಿಯಿಂದಲೂ ಹಲ್ಲೆ ನಡೆದಿದೆ. ಪ್ರಕರಣ ಇತ್ಯರ್ಥವಾಗುವ ಸಮಯದಲ್ಲಿ ಈ ರೀತಿ ಆಗಿದೆ. ಪೊಲೀಸ್‌ ಠಾಣೆ ಒಳಗೂ ಯಾರಿಗೂ ಸುರಕ್ಷತೆ ಇಲ್ಲದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಕಾನೂನು ಪ್ರಕಾರ ಕರ್ತವ್ಯ ಮಾಡಬೇಕೇ ವಿನಃ ಸರ್ಕಾರದ ಕೈಗೊಂಬೆಯಾಗಬಾರದು ಎಂದರು.