ರಾಜ್ಯದಲ್ಲಿ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಹೊಂದಿದ್ದ ದೇವರಾಜ ಅರಸು ಅವರ ದಾಖಲೆಯನ್ನು ಸಿಎಂ ಸಿದ್ದರಾಮಯ್ಯ ಸರಿಗಟ್ಟಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ಅಭಿಮಾನಿಗಳಿಂದ ರಾಜ್ಯಾದ್ಯಂತ ಸಂಭ್ರಮಾಚರಣೆ ಮುಂದುವರಿದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಹೊಂದಿದ್ದ ದೇವರಾಜ ಅರಸು ಅವರ ದಾಖಲೆಯನ್ನು ಸಿಎಂ ಸಿದ್ದರಾಮಯ್ಯ ಸರಿಗಟ್ಟಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ಅಭಿಮಾನಿಗಳಿಂದ ರಾಜ್ಯಾದ್ಯಂತ ಸಂಭ್ರಮಾಚರಣೆ ಮುಂದುವರಿದಿದೆ.

ಗದಗ ಜಿಲ್ಲೆ ಗಜೇಂದ್ರಗಡ ಸಮೀಪದ ವದೇಗೊಳ ಗ್ರಾಮದಲ್ಲಿ ಅಭಿಮಾನಿಗಳು ಸಾರ್ವಜನಿಕರಿಗೆ ನಾಟಿಕೋಳಿಯ ಔತಣಕೂಟ ಏರ್ಪಡಿಸಿದ್ದರು. 80 ಕೇಜಿ ನಾಟಿ ಕೋಳಿ ಮಾಂಸದಿಂದ 800ಕ್ಕೂ ಹೆಚ್ಚು ಜನರಿಗೆ ಭೋಜನ ನೀಡಲಾಯಿತು. ಸಿದ್ದರಾಮಯ್ಯ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಲಾಯಿತು.

ಚಿಕ್ಕಬಳ್ಳಾಪುರ ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಯುವ ಕಾಂಗ್ರೆಸ್ ನಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ, ಸುಮಾರು ಸಾವಿರ ಜನರಿಗೆ ‘ಚಿಕನ್ ಬಿರಿಯಾನಿ ಔತಣಕೂಟ’ ಆಯೋಜಿಸಲಾಗಿತ್ತು. ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಅಭಿಮಾನಿಗಳು ಲಕ್ಷ್ಮಿ ನರಸಿಂಹಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಸಿದ್ದರಾಮಯ್ಯ ಸೇರಿ ಪ್ರಮುಖ ಕೈ ನಾಯಕರ ಹೆಸರಲ್ಲಿ ಅರ್ಚನೆ ಮಾಡಿದರು. ಬಳಿಕ, ಸಾರ್ವಜನಿಕರಿಗೆ ಸಿಹಿ ಹಂಚಿ, ಅನ್ನಸಂತರ್ಪಣೆ ನಡೆಸಿದರು.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಕುರುಬ ಸಮುದಾಯದಿಂದ 2000ಕ್ಕೂ ಹೆಚ್ಚು ಜನರಿಗೆ ನಾಟಿ ಕೋಳಿ ಬಿರಿಯಾನಿ ಊಟ ವಿತರಿಸಲಾಯಿತು.

ಸಿದ್ದರಾಮಯ್ಯನವರ ತವರು ಸಿದ್ದರಾಮನಹುಂಡಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ಅಭಿಮಾನಿಗಳು ಪಟಾಕಿ ಸಿಡಿಸಿ, ಡ್ಯಾನ್ಸ್ ಮಾಡಿ ಸಂಭ್ರಮಾಚರಣೆ ನಡೆಸಿದರು. ಬೃಹತ್ ಕಟೌಟ್ ಹಾಕಿ,‌ ಹಾಲಿನ ಅಭಿಷೇಕ ಮಾಡಿ, ಸಂಭ್ರಮಪಟ್ಟರು. ಶಿವಮೊಗ್ಗದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸಾರ್ವಜನಿಕರಿಗೆ ಸಹಿ ಹಂಚಿ, ಪಟಾಕಿ ಸಿಡಿಸಲಾಯಿತು. ರಾಜ್ಯದ ಇತರೆಡೆಯೂ ಸಂಭ್ರಮಾಚರಣೆಗಳು ನಡೆದ ಬಗ್ಗೆ ವರದಿಯಾಗಿದೆ.