ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಧರ್ಮಸ್ಥಳವನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಕಮ್ಯುನಿಷ್ಟರಿಗೆ ಬೆಂಬಲ ಕೊಡುವ ಮುಖ್ಯಮಂತ್ರಿ ಸಿಕ್ಕಿರುವುದು ಈ ರಾಜ್ಯದ ದೌರ್ಭಾಗ್ಯ ಎಂದು ವಿಜಯಪುರ ಶಾಸಕ ಬಸನಗೌಡ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದರು.ಬಾಗಲಕೋಟೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕೃಪಾಪೋಷಿತ ಎಸ್ಐಟಿ ಇದಾಗಿದೆ. ಅವರಿಗೆ ಏನೂ ಸಿಗುತ್ತಿಲ್ಲ. ಅವನು ಯಾವನೋ ಒಬ್ಬ ಮುಖವಾಡದ ಲೋಫರ್ ಮಾತುಕೇಳಿ, ಎಸ್ಐಟಿ ನೇಮಿಸಿ, ಐಜಿಪಿ ಲೇವಲ್ ಅಧಿಕಾರಿ ಅಲ್ಲಿ ಕೂತು. ಹಿಂದುಗಳನ್ನು ಅಪಮಾನ ಮಾಡೋದನ್ನು ಗಮನಿಸಿದರೆ ದೇಶದಲ್ಲಿ ಹಿಂದುಗಳ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ದೂರಿದರು.ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಅವರಿದ್ದಾರಂತ ದೇಶದಲ್ಲಿ ಹಿಂದೂಗಳು ಅದಾರ. ಕರ್ನಾಟಕದಲ್ಲಂತೂ ಸಾಬರ ಸರ್ಕಾರವಾಗಿದೆ ಎಂದು ಆರೋಪಿಸಿದರು.
ಧರ್ಮಸ್ಥಳದಲ್ಲಿ ಎಸ್ಡಿಪಿಐನವರಿಗೆ ಏನು ಕೆಲಸ? ಅವರು ದೇಶ ದ್ರೋಹಿಗಳು. ಅವರ್ಯಾಕೆ ಪ್ರತಿಭಟನೆ ಮಾಡುತ್ತಾರೆ, ಅಲ್ಲಿ ಏನೂ ಸಿಕ್ಕಿಲ್ಲ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಅಪಮಾನ ಮಾಡಬೇಕು. ಹಿಂದೂ ಧರ್ಮದ ದೇವಸ್ಥಾನಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಾಡಿದರು. ಶನಿ ಸಿಂಗನಾಪುರದಲ್ಲಿ ಮಾಡಿದರು. ಇವತ್ತು ಧರ್ಮಸ್ಥಳ, ನಾಳೆ ವೀರಭದ್ರೇಶ್ವರ, ವೆಂಕಟೇಶ್ವನದು ಮುಗಿದಿದೆ. ಈಗ ಅಲ್ಲಿಯೂ ಹುಂಡಿಯೊಳಗೆ ಏನೋ ಹಾಕಿದ್ದಾರೆ ಎಂಬ ಸುದ್ದಿ ಬಂದಿದೆ ಎಂದರು.ಅಕ್ರಮ ಮತದಾನ ಕುರಿತು ರಾಹುಲ್ ಗಾಂಧಿ ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಯತ್ನಾಳ, ರಾಹುಲ ಗಾಂಧಿ ದೊಡ್ಡ ಬಚ್ಚಾ ಅದು. ಅದಕ್ಕೆ ಮೆದುಳೇ ಇಲ್ಲ. ಎಲ್ಲರಿಗೂ ತಲೆಯಲ್ಲಿ ಮೆದುಳು ಇದ್ದರೆ, ರಾಹುಲ್ ಗಾಂಧಿಗೆ ಮೊಳಕಾಲಲ್ಲಿ ಮೆದುಳಿದೆ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯಗಾಗಿ ಬಾದಾಮಿ ಚುನಾವಣೆಯಲ್ಲಿ ಮತ ಖರೀದಿ ಮಾಡಿದ್ದೇನೆ ಎಂಬ ಮಾಜಿ ಸಚಿವ ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯನವರ ದೋಸ್ತನ ಹೇಳಿದಾನಲ್ರಿ, ಇನ್ನೊಂದೆರಡು ವರ್ಷ ತಡೀರಿ ಜಮೀರ್ ಅಹ್ಮದ್ ಖಾನ್ ಕೂಡ ಹೇಳ್ತಾನೆ. ಇಂದು ರಾಜಕಾರಣದಲ್ಲಿ ರೊಕ್ಕ ಕೊಡದೇನೆ ಎಷ್ಟು ಮಂದಿ ಆರಿಸಿ ಬರುವವರು ಇದಾರೆ ಹೇಳ್ರಿ, ರೊಕ್ಕ ಇರಲಾರದೆ ಯಾರ ವೋಟ್ ಹಾಕ್ತಾರೆ ಎಂದು ಹೇಳಿದರು.ಬಿಜೆಪಿಗೆ ಅವಶ್ಯಕತೆ ಬಿದ್ರೆ ತಗೋತಾರೆ: ಯತ್ನಾಳ ಮರಳಿ ಬಿಜೆಪಿ ಸೇರುವ ವಿಚಾರಕ್ಕೆ ಪ್ರತಿಕ್ರಯಿಸಿದ ಶಾಸಕ ಯತ್ನಾಳ, ನಾ ಯಾರ ಜೊತೆಯೂ ಮಾತಾಡೋದಿಲ್ಲ. ಆರಾಮ ಇದ್ದೇವೆ. ಚುನಾವಣೆಗೆ ಇನ್ನೂ ಮೂರು ವರ್ಷ ಇದೆ. ಸಮಾಜದ ಕೆಲಸ, ದೇಶದ ಪರ ಕೆಲಸ ಮಾಡುತ್ತಿದ್ದೇವೆ. ಬಿಜೆಪಿಗೆ ಅವಶ್ಯಕತೆ ಬಿದ್ದರೆ ತಗೊತಾರೆ. ಇಲ್ಲದಿದ್ದರೆ ನಮ್ಮದೇ ರಾಜಕೀಯ ಪಕ್ಷ ಇದೆಯಲ್ಲ ಹಿಂದು ಪಾರ್ಟಿ, ಭಗವಾ ಜೆಂಡಾ ಹಿಡಕೊಂಡು ಹೋಗ್ತೀವಿ. ವಿಜಯೇಂದ್ರನನ್ನೇ ಮತ್ತೆ ರಾಜ್ಯಾಧ್ಯಕ್ಷನಾಗಿ ಮಾಡಿದರೆ, ಅವನನ್ನೇ ಮುಖ್ಯಮಂತ್ರಿ ಮಾಡ್ತೀವಿ ಎಂದು ಹೊರಟರೆ, ಬಿಜೆಪಿಗೆ ಯಾಕೆ ಹೋಗಬೇಕು ಸುಡುಗಾಡು. ಯಡಿಯೂರಪ್ಪನ ಮಾರಿ ನೋಡಲಿಕ್ಕೊ, ವಿಜಯೇಂದ್ರನ ಹಿಂದೆ ಜೀ ಅನ್ನಲಿಕ್ಕೊ? ನಾ ಜೀ ಅನ್ನುವ ಮಗ ಅಲ್ಲ. ಅದರಲ್ಲೂ ವಿಜಯೇಂದ್ರನಂತಹ ಒಬ್ಬ ಕ್ರಿಮಿನಲ್ ಗೆ ಜಿ ಅನ್ನೋದು ನನ್ನಿಂದ ಆಗೋದಿಲ್ಲ. ಎಂದು ವಿಜಯೇಂದ್ರ ವಿರುದ್ಧ ಮತ್ತೆ ಕಿಡಿಕಾರಿದರು.
ಕರ್ನಾಟಕವನ್ನೇ ದಿವಾಳಿ ಮಾಡಿದರು: ಮೆಟ್ರೋ ಹಳದಿ ಮಾರ್ಗದ ವಿಷಯದಲ್ಲಿ ಬಿಜೆಪಿ, ಕಾಂಗ್ರೆಸ್ ಕ್ರೆಡಿಟ್ ವಾರ್ ಬಗ್ಗೆ ಮಾತನಾಡಿದ ಬಸನಗೌಡ ಯತ್ನಾಳ, ಮೆಟ್ರೋ ಕೇಂದ್ರ ಸರ್ಕಾರದ ಯೋಜನೆ. ಇದರಲ್ಲಿ ಕ್ರೆಡಿಟ್ ಏನ್ ತೆಗೆದುಕೊಳ್ತಾರೆ. ಸಿದ್ದರಾಮಯ್ಯನವರು ಕರ್ನಾಟಕ ದಿವಾಳಿ ಮಾಡಿದ್ದ ಕ್ರೆಡಿಟ್ ತೆಗೆದುಗೊಳ್ಳಲಿ, ಗ್ಯಾರಂಟಿ ಜಾರಿ ಮಾಡಿ ಇಡೀ ಕರ್ನಾಟಕವನ್ನೇ ದಿವಾಳಿ ಮಾಡಿದ್ದಾರೆ ಎಂದು ಟೀಕಿಸಿದರು.