ಗಡಿನಾಡು ಪಾವಗಡಕ್ಕೆ 21ರಂದು ಸಿಎಂ ಆಗಮನ

| Published : Jul 07 2025, 11:48 PM IST

ಸಾರಾಂಶ

ಜು.21ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್‌ ಸಚಿವ ರಾಜಣ್ಣ ಸೇರಿದಂತೆ ಇತರೆ ಸಚಿವರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾವಗಡಕ್ಕೆ

ಕನ್ನಡಪ್ರಭ ವಾರ್ತೆ ಪಾವಗಡ

ನಗರ ಹಾಗೂ ಗ್ರಾಮೀಣ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಕೆಯ ಉದ್ಘಾಟನಾ ಕಾರ್ಯಕ್ರಮದ ಹಿನ್ನಲೆಯಲ್ಲಿ ಇದೇ ಜು.21ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್‌ ಸಚಿವ ರಾಜಣ್ಣ ಸೇರಿದಂತೆ ಇತರೆ ಸಚಿವರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾವಗಡಕ್ಕೆ ಅಗಮಿಸಲಿದ್ದು, ಕಾರ್ಯಕ್ರಮಕ್ಕೆ ತಾಲೂಕಿನಿಂದ 50ಸಾವಿರಕ್ಕಿಂತ ಹೆಚ್ಚು ಜನ ಸೇರಲಿದ್ದಾರೆಂದು ಶಾಸಕ ಎಚ್.ವಿ.ವೆಂಕಟೇಶ್‌ ಹೇಳಿದರು.

ಸೋಮವಾರ ಗುರುಭವನದ ಪಕ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮೈದಾನದಲ್ಲಿ ಅತ್ಯಾಧುನಿಕ ಹಾಗೂ ನವೀನ ಮಾದರಿಯ ಬೃಹತ್‌ ವೇದಿಕೆ ಸಿದ್ದತೆ ಕುರಿತು ಪರಿಶೀಲನೆ ನಡೆಸಿದ

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಜು.21,ಬೆಳಿಗ್ಗೆ 11ಗಂಟೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಇತರೇ ಗಣ್ಯರು ಪಾವಗಡಕ್ಕೆ ಆಗಮಿಸಲಿದ್ದಾರೆ. ಅಂದು ಮನೆಮನೆ ಪೂರೈಕೆಯ ತುಂಗಭದ್ರಾ ಕುಡಿಯುವ ನೀರು ಯೋಜನೆಯ ಉದ್ಘಾಟನೆ, ಮನೆ , ಜಮೀನಿನ ಹಕ್ಕು ಪತ್ರ ವಿತರಣೆ ಸೇರಿದಂತೆ ಇತರೇ ಹಲವಾರು ಯೋಜನೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿರುವುದಾಗಿ ತಿಳಿಸಿದರು.

ಸಿಎಂ ಸಿದ್ದರಾಮಯಯ್ಯ ಅವರ ಆಗಮನ ಹಿನ್ನಲೆಯಲ್ಲಿ ಈಗಾಗಲೇ ತಾಲೂಕು ಆಡಳಿತದಿಂದ ಸಿದ್ಧತೆ ಕೈಗೊಂಡಿದ್ದು, ಇಲ್ಲಿನ ಗುರುಭವನ ಸಮೀಪದ ಸರ್ಕಾರಿ ಪ್ರಾಥಮಿಕ ಪಾಠ ಶಾಲಾ ಮೈದಾನದಲ್ಲಿ ಸುಸಜ್ಜಿತವಾದ ಆಧುನಿಕ ಮಾದರಿಯ ಶಾಮೀಯಾನದಲ್ಲಿ ವ್ಯವಸ್ಥಿತವಾದ ವೇದಿಕೆ ಹಾಕಲಾಗುವುದು. ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಸೇರಿ ತಾಲೂಕಿನಿಂದ 50ಸಾವಿರಕ್ಕಿಂತ ಹೆಚ್ಚು ಜನ ಸೇರಲಿದ್ದಾರೆ. ಪಟ್ಟಣದಲ್ಲಿ 1ಕಿಮೀ ರಸ್ತೆ ಉದ್ದಕ್ಕೂ ಬಾಳೇ ಹಾಗೂ ಮಾವಿನ ತೋರಣಗಳ ಶೃಂಗಾರ, ಅಲಂಕೃತ ವಿದ್ಯುತ್‌ ದ್ವೀಪ ಹಾಗೂ ವೇದಿಕೆ ಸುತ್ತ ಎಲ್‌ ಇಡಿ ಸ್ಕ್ರೀನ್‌, ಅಳವಡಿಕೆ ಸೇರಿದಂತೆ ನಗರದ ಸುತ್ತ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಬಡವರ ಮಾಶಾಸನ ಮಂಜೂರಾತಿ ಪತ್ರ ವಿತರಣೆ, ವಿವಿಧ ಯೋಜನೆಯ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಸಿಎಂ ಹಾಗೂ ಡಿಸಿಎಂ ಗೃಹ ಸಚಿವರು ವಿತರಿಸಲಿದ್ದಾರೆ.

ಮಾಜಿ ಸಚಿವರಾದ ವೆಂಕಟರಮಣಪ್ಪ ಅವರ ಹನುಮಂತನಹಳ್ಳಿ ತೋಟದ ಮನೆಯಲ್ಲಿ ಊಟದ ಸಿದ್ಧತೆ ಕೈಗೊಳ್ಳಲು ಉದ್ದೇಶಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರ ಆಗಮನಕ್ಕೆ ಈಗಾಗಲೇ ತಯಾರಿ ನಡೆಸಿದ್ದು, ಕಾರ್ಯಕ್ರಮವನ್ನು ಶಿಸ್ತಿನಿಂದ ನಡೆಸಲು ಅಧಿಕಾರಿಗಳಿಗೆ ಹಾಗೂ ಶಾಮೀಯಾನ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.

ಇದೇ ವೇಳೆ ತಹಸೀಲ್ದಾರ್‌ ಡಿ.ಎನ್‌.ವರದರಾಜು, ಸಿಪಿಐ ಸುರೇಶ್‌, ಕಂದಾಯ ತನಿಖಾಧಿಕಾರಿ ರಾಜ್‌ಗೋಪಾಲ್‌, ಹಿರಿಯ ಮುಖಂಡರಾದ ಎ.ಶಂಕರರೆಡ್ಡಿ, ಬತ್ತಿನೇನೆ ನಾಗೇಂದ್ರರಾವ್‌, ಪಿ.ಎಚ್‌.ರಾಜೇಶ್‌ ತೆಂಗಿನಕಾಯಿ ರವಿ, ಶಿವಮೂರ್ತಿ, ಗುತ್ತಿಗೆದಾರರಾದ ಆರ್‌.ಎ.ಹನುಮಂತರಾಯಪ್ಪ, ರೊಪ್ಪ ನಾಗರಾಜು, ವೆಂಕಟಮ್ಮನಹಳ್ಳಿ ಚನ್ನಕೇಶವ, ಮುಖಂಡರಾದ ಗೋರಸ್‌ ಮಾವು ಹನುಮಂತರಾಯಪ್ಪ, ಬಂಗಾರಪ್ಪ, ಇತರರಿದ್ದರು.