ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ತಾಲೂಕಿನ ಜನತೆಯ ಬಹು ವರ್ಷಗಳ ಬೇಡಿಕೆ ಹಾಗೂ ನಿರೀಕ್ಷೆಯಾಗಿದ್ದ, ಸ್ಥಳೀಯವಾಗಿಯೇ ತಾಂತ್ರಿಕ ಶಿಕ್ಷಣ ಕಲಿತು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಆಶಾಕಿರಣವಾಗಿರುವ ನೂತನ ಸರ್ಕಾರಿ ಎಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಕಾಲೇಜು ಕಟ್ಟಡ ಲೋಕಾರ್ಪಣೆಗೆ ಸಿದ್ಧವಾಗಿವೆ.ಇದೇ ತಿಂಗಳ ೨೬ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿವಿಧ ಇಲಾಖೆಗಳ ಸಚಿವ ಮಹೋದಯರು ಆಗಮಿಸಿ ನೂತನ ಕಾಲೇಜು ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಉದ್ಘಾಟನೆ ಮಾಡಲಿದ್ದಾರೆ ಎಂದು ಸ್ಥಳೀಯ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರೂ ಆದ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು. ನಗರದ ಜೇನುಕಲ್ ತಾಲೂಕು ಕ್ರೀಡಾಂಗಣದಲ್ಲಿ ಸಿಎಂ ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ಹಾಗೂ ಪೆಂಡಾಲ್ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿ, ಬೃಹತ್ ಕಾರ್ಯಕ್ರಮಕ್ಕೆ ಪೂರ್ವ ಸಿದ್ಧತಾ ಕಾರ್ಯ ಈಗಾಗಲೇ ಆರಂಭವಾಗಿವೆ ಎಂದರು.
ಹಕ್ಕುಪತ್ರ ವಿತರಣೆ:ಅಂದೇ ಹೌಸಿಂಗ್ ಫಾರ್ ಆಲ್ ಯೋಜನೆಯಡಿ ನಿರ್ಮಾಣವಾಗಿರುವ ಮನೆಗಳ ಪೈಕಿ ೩೦೦ ಫಲಾನುಭವಿಗಳಿಗೂ ಸಿಎಂ ಹಾಗೂ ಸಚಿವರ ಮೂಲಕ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.ಈಜುಕೊಳ:
ನಗರಸಭೆ ವತಿಯಿಂದ ಕಂತೇನಹಳ್ಳಿ ಪಾರ್ಕ್‌ಗೆ ಹೊಂದಿಕೊಂಡಿರುವ ಕೆರೆ ಅಂಗಳದಲ್ಲಿ ನಿರ್ಮಾಣಗೊಂಡಿರುವ ಈಜುಕೊಳ ಸಹ ಅಂದೇ ಲೋಕಾರ್ಪಣೆಗೊಳ್ಳಲಿದೆ. ಇಲ್ಲೂ ರಾಜ್ಯ ಮತ್ತು ರಾಷ್ಟ್ರಮಟ್ಟದ ಒಲಂಪಿಕ್ ಕ್ರೀಡೆಗಳನ್ನು ನಡೆಸಬಹುದು ಎಂದರು. ಅದೇ ರೀತಿ ನಗರದ ಸಂತೆ ಮೈದಾನದಲ್ಲಿ ನಗರಸಭೆಯಿಂದ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣಗಳೂ ಉದ್ಘಾಟನೆಗೊಳ್ಳಲಿವೆ ಎಂದ ಶಾಸಕರು ಇದೇ ರೀತಿ ನೂರಾರು ಕೋಟಿ ವೆಚ್ಚದ ಹತ್ತು ಹಲವು ನೂತನ ಕಾಮಗಾರಿಗಳಿಗೆ ಅಂದೇ ಚಾಲನೆ ದೊರೆಯಲಿದೆ ಎಂದು ಮಾಹಿತಿ ನೀಡಿದರು.ಅಂದಿನ ಕಾರ್ಯಕ್ರಮಕ್ಕೆ ನಗರ ಹಾಗೂ ತಾಲೂಕಿನಿಂದ ಸುಮಾರು ೫೦ ಸಾವಿರ ಜನ ಸೇರಲಿದ್ದಾರೆ. ಎಲ್ಲರ ಸಹಕಾರದಿಂದ ನಾಡಿನ ಸಿಎಂ ಹಾಗೂ ಮಂತ್ರಿಗಳನ್ನು ಶಿಷ್ಟಾಚಾರದಂತೆ ಸ್ವಾಗತಿ ಯಶಸ್ವಿ ಕಾರ್ಯಕ್ರಮ ನಡೆಸಲು ಯೋಜಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಸಮೀವುಲ್ಲಾ, ಉಪಾಧ್ಯಕ್ಷ ಮನೋಹರ್ ಮೇಸ್ತ್ರಿ, ಸದಸ್ಯರಾದ ವೆಂಕಟಮುನಿ, ಯೂನಸ್, ದರ್ಶನ್ ಜಾಕೀರ್, ನಾಮ ನಿರ್ದೇಶನ ಸದಸ್ಯರಾದ ಕಿರಣ್, ಭಾರತಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಣಾವರ ಶ್ರೀನಿವಾಸ್, ಕಾಂಗ್ರೆಸ್ ಹಿರಿಯ ಮುಖಂಡ ಶಶಿಧರ್, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಶೇಖರ್, ತಾಪಂ ಮಾಜಿ ಅಧ್ಯಕ್ಷರಾದ ಹಾರನಹಳ್ಳಿ ಶಿವಮೂರ್ತಿ, ಮಂಜುಳಾ ಬಾಯಿ ಚಂದ್ರನಾಯ್ಕ, ಮುಖಂಡರಾದ ಮಂಜುರಾಜ್, ಮಲ್ಲೇಶಣ್ಣ ಇದ್ದರು.============= ಹೇಳಿಕೆಕಾಲೇಜು ಉದ್ಘಾಟನೆಯಿಂದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ತಾಂತ್ರಿಕ ಶಿಕ್ಷಣವನ್ನು ಇಲ್ಲಿಯೇ ಪಡೆಯಲಿದ್ದಾರೆ. ಸುಮಾರು ೨೦ ಕೋಟಿಗೂ ಹೆಚ್ಚು ವೆಚ್ಚದಲ್ಲಿ ಪಾಲಿಟೆಕ್ನಿಕ್ ಕಾಲೇಜು ಹಾಗೂ ೭೦ ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತವಾದ ಎಂಜಿನಿಯರಿಂಗ್ ಕಾಲೇಜು ಆಗಿದೆ. ಎಲ್ಲ ಮಕ್ಕಳು, ಪೋಷಕರು ಇದರ ಸದುಯೋಗ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಕ್ಷೇತ್ರವನ್ನು ಮಾದರಿಯಾಗಿ ಮಾಡಲು ಶ್ರಮಿಸಲಾಗುವುದು.
ಕೆ.ಎಂ.ಶಿವಲಿಂಗೇಗೌಡ, ಶಾಸಕ -