ಸಾರಾಂಶ
ಹಾನಗಲ್ಲ: ಪಕ್ಷ, ಚಿಹ್ನೆಗಳನ್ನು ಮೀರಿ ಚುನಾವಣೆಗಳನ್ನು ಜಯಶಾಲಿಯಾಗಿ ಎದುರಿಸಿದ ಮೇಧಾವಿ ನಾಯಕ ಸಿ.ಎಂ. ಉದಾಸಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶುಕ್ರವಾರ ಹಾನಗಲ್ಲಿನಲ್ಲಿ ಸಿ.ಎಂ. ಉದಾಸಿ ಅವರ ೮೮ನೇ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನ ಜನತೆಯ ಹಿತ ಕಾಯಲು ನೀರಾವರಿ ಯೋಜನೆ, ರಸ್ತೆ ಕೊಡುಗೆಯಾಗಿ ನೀಡಿ, ಜನಸಾಮಾನ್ಯರ ಸಂಕಷ್ಟಕ್ಕೆ ಸದಾ ಅಕ್ಕರೆಯಿಂದ ಕೆಲಸ ಮಾಡಿರುವುದು ಎಲ್ಲ ಕಾಲಕ್ಕೂ ಮಾದರಿ ಎಂದು ಹೇಳಿದರು.ಹಾವೇರಿ ಜಿಲ್ಲೆಯಾಗಲು ೧೫ ವರ್ಷಗಳ ನಿರಂತರ ಹೋರಾಟ ನಡೆಸಿ ಸಾಧ್ಯವಾಗಿಸಿದ ಹಿರಿಮೆ ಅವರದ್ದು. ನನ್ನ ತಂದೆಯ ನಂತರ ನನ್ನ ರಾಜಕೀಯ ಗುರುವಾಗಿದ್ದ ಎಂ. ಉದಾಸಿ ಅವರ ಮಾರ್ಗದರ್ಶನ, ಆಶೀರ್ವಾದದಿಂದಲೇ ನಾನು ಮುಖ್ಯಮಂತ್ರಿಯಾದದ್ದು. ಹಾನಗಲ್ಲ ತಾಲೂಕಿನಲ್ಲಿ ಒಳ್ಳೆಯ ಬಿಜೆಪಿ ಕಾರ್ಯಕರ್ತರ ತಂಡವಿದೆ. ಆದರೆ ಅದನ್ನು ಮುನ್ನಡೆಸುವ ನಾಯಕರ ಕೊರತೆ ಇದೆ. ಕೂಡಲೇ ಸಾಮೂಹಿಕ ನಾಯಕತ್ವದಲ್ಲಿ ಹಾನಗಲ್ಲ ತಾಲೂಕನ್ನು ಮತ್ತೆ ಬಿಜೆಪಿ ಭದ್ರಕೋಟೆ ಮಾಡಬೇಕು. ಅದಕ್ಕಾಗಿ ನನ್ನ ಎಲ್ಲ ಸಹಕಾರ ಇದೆ ಎಂದರು.ಸಿ.ಎಂ. ಉದಾಸಿ ಅವರ ಒಡನಾಡಿ, ವಕೀಲ ಬಿ.ಎಸ್. ಅಕ್ಕಿವಳ್ಳಿ ಮಾತನಾಡಿ, ಸಿ.ಎಂ. ಉದಾಸಿ ಅವರು ಬೆಳೆವಿಮೆಯ ವಿಷಯದಲ್ಲಿ ಹಾನಗಲ್ಲ ತಾಲೂಕಿಗೆ ದೊಡ್ಡ ಉಪಕಾರ ಮಾಡಿದರು. ಬೆಳೆವಿಮೆ ನಾಯಕ ಎಂದೇ ಖ್ಯಾತಿಯಾದರು. ರಾಜ್ಯದಲ್ಲಿ ಅತಿ ಹೆಚ್ಚು ಬೆಳೆ ವಿಮೆ ಪಡೆಯುತ್ತಿರುವ ತಾಲೂಕು ಹಾನಗಲ್ಲ ಆಗಿದೆ. ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿದೆ. ಇದು ಸಿ.ಎಂ. ಉದಾಸಿ ಅವರು ಮೂಡಿಸಿದ ಜಾಗೃತಿಯ ಪ್ರತಿಫಲ ಎಂದರು.ಮಾಜಿ ಶಾಸಕ ಶಿವರಾಜ ಸಜ್ಜನವರ ಮಾತನಾಡಿದರು. ಸಿ.ಎಂ. ಉದಾಸಿ ಅವರ ಧರ್ಮಪತ್ನಿ ನೀಲಮ್ಮ ಚನ್ನಬಸಪ್ಪ ಉದಾಸಿ, ಸಹೋದರಿ ಶಿವಗಂಗಕ್ಕ ಪಟ್ಟಣದ, ಸೊಸೆ ಸವಿತಾ ಉದಾಸಿ, ತಾಲೂಕು ಬಿಜೆಪಿ ಅಧ್ಯಕ್ಷ ನಿಂಗಪ್ಪ ಗೊಬ್ಬೇರ, ಮುಖಂಡರಾದ ಎಂ.ಬಿ. ಕಲಾಲ, ರಾಜಶೇಖರ ಕಟ್ಟೆಗೌಡರ, ಕಲ್ಯಾಣಕುಮಾರ ಶೆಟ್ಟರ, ಬಸವರಾಜ ಹಾದಿಮನಿ, ಪದ್ಮನಾಭ ಕುಂದಾಪುರ, ರಾಜಣ್ಣ ಗೌಳಿ, ರಾಜಣ್ಣ ಪಟ್ಟಣದ, ಮಾಲತೇಶ ಸೊಪ್ಪಿನ, ಭೋಜರಾಜ ಕರೂದಿ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಮಹೇಶ ಕಮಡೊಳ್ಳಿ, ಎ.ಎಸ್. ಬಳ್ಳಾರಿ, ಸಂದೀಪ ಪಾಟೀಲ, ಶೇಖರ ಸಜ್ಜನ, ಮಹೇಶ ನಲ್ವಾಡ, ಹನುಮಂತಪ್ಪ ಕಲ್ಲೇರ, ಸಿದ್ದರಾಜ ಕಲಕೋಟಿ, ಶಿವಲಿಂಗಪ್ಪ ತಲ್ಲೂರ ಪಾಲ್ಗೊಂಡಿದ್ದರು.ಶಿವಕುಮಾರ ಉದಾಸಿ ಮನವೊಲಿಸೋಣ: ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಸಂಸದ ಶಿವಕುಮಾರ ಉದಾಸಿ ಅವರ ಮನವೊಲಿಸಿ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಮೂಹಿಕ ಪ್ರಯತ್ನ ಮಾಡೋಣ. ಅವರ ಗೆಲುವು ಅಷ್ಟೇ ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಸಿ.ಎಂ. ಉದಾಸಿ ಅವರ ೮೮ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಾನಗಲ್ಲ ಬಿಜೆಪಿ ಭದ್ರಕೋಟೆ. ಇಲ್ಲಿ ಕಾರ್ಯಕರ್ತ ದೊಡ್ಡ ತಂಡವಿದೆ. ಸಿ.ಎಂ. ಉದಾಸಿ ಅವರು ಗೆದ್ದಿರುವಾಗಷ್ಟೇ ಅಲ್ಲದೆ ಸೋತಾಗಲೂ ತಮ್ಮನ್ನು ನೆಚ್ಚಿದವರನ್ನು ಕೈಬಿಡದೆ, ತಾಲೂಕಿನ ಹಿತಕ್ಕೆ ಕೆಲಸ ಮಾಡಿದರು. ಅವರ ಪುತ್ರ, ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ ೩ ಬಾರಿ ಹೊಸ ಹಾವೇರಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿ ಅಭಿವೃದ್ಧಿ ಕೆಲಸಕ್ಕೆ ಸಾಥ್ ನೀಡಿದರು. ಆದರೆ ಅವರು ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಎಲ್ಲರೂ ಒಟ್ಟಾಗಿ ಶಿವಕುಮಾರ ಉದಾಸಿ ಅವರ ಮನ ಒಲಿಸೋಣ. ಇದಕ್ಕಾಗಿ ನಾನು ಮುಂಚೂಣಿಯಲ್ಲಿರುವೆ ಎಂದರು.ಸಭೆಯಲ್ಲಿ ಪಾಲ್ಗೊಂಡಿದ್ದ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿತ ಅಭ್ಯರ್ಥಿಗಳಾದ ಸಂದೀಪ ಪಾಟೀಲ, ಶೇಖರ ಸಜ್ಜನ, ಮಹೇಶ ನಲ್ವಾಡ ಅವರ ಹೆಸರು ಹೇಳಿ, ನೀವು ಆಕಾಂಕ್ಷಿತರ ಎಂದು ಗೊತ್ತಿದೆ. ಆದರೆ ಈ ಕ್ಷೇತ್ರದಲ್ಲಿ ಸುಲಭ ಗೆಲುವಿಗೆ ಶಿವಕುಮಾರ ಉದಾಸಿ ಬೇಕು. ಹೀಗೆಂದು ನೀವು ಬೇಸರಗೊಳ್ಳಬೇಡಿ. ಇದು ಸತ್ಯ ಸಂಗತಿ. ನಾವು ನೀವೆಲ್ಲ ಸೇರಿ ಶಿವಕುಮಾರ ಉದಾಸಿ ಅವರನ್ನು ಅಭ್ಯರ್ಥಿಯನ್ನಾಗಿಸಿ ಗೆಲ್ಲಿಸೋಣ ಎಂದರು.