ಕನ್ನಡಪ್ರಭ ವಾರ್ತೆ ಬೆಳಗಾವಿ ಗೋಕಾಕ ಜಿಲ್ಲಾ ರಚನೆಗೆ ಆಗ್ರಹಿಸಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿ ನಿಯೋಗ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಗೋಕಾಕ ಜಿಲ್ಲಾ ರಚನೆಗೆ ಆಗ್ರಹಿಸಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿ ನಿಯೋಗ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.

ಆಡಳಿತಾತ್ಮಕ, ಅಭಿವೃದ್ಧಿ ಹಿತದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಯನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಬೆಳಗಾವಿ ಜಿಲ್ಲೆ ವಿಭಜನೆ ಮಾಡುವಂತೆ ಕೋರಿ ಸಿಎಂ ಸಿದ್ದರಾಮಯ್ಯ ಅವರರಿಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯ ಮೇರೆಗೆ ಮುಖ್ಯಮಂತ್ರಿಯನ್ನು ಭೇಟಿಯಾಗಿ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಜಿಲ್ಲೆ ಮಾಡುವಂತೆ ಮನವಿ ನೀಡಲಾಗಿದೆ. ಜಿಲ್ಲೆ ವಿಭಜನೆಗೆ ಸಂಬಂಧಿಸಿದಂತೆ 18 ಶಾಸಕರನ್ನು ಕರೆದು ಅಭಿಪ್ರಾಯ ಪಡೆದು ನಿರ್ಣಯ ಮಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದರು.

ಜಿಲ್ಲೆ ವಿಭಜನೆಯಾದರೆ ಮೊದಲು ಗೋಕಾಕ ಆಗಲಿ ಎಂದು ಹೇಳಿದ್ದೇವೆ. ಆಯೋಗದ ವರದಿಯಂತೆ ಜಿಲ್ಲೆಯನ್ನು ಮಾಡಬೇಕು. ಅಧಿವೇಶನದಲ್ಲಿ ಜಿಲ್ಲಾ ವಿಭಜನಭಯ ಆಶಾವಾದವಿದೆ ಎಂದು ಹೇಳಿದರು.

ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿ ನಿಯೋಗದಲ್ಲಿ ಗೋಕಾಕ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಅಂಕಲಗಿ ಅಡವಿಸಿದ್ದೇಶ್ವರ ಮಠದ ಅಮರ ಸಿದ್ದೇಶ್ವರ ಸ್ವಾಮೀಜಿ, ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ, ಯುವ ಮುಖಂಡರಾದ ರಾಹುಲ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ ಸೇರಿ ಮೊದಲಾದವರು ಪಾಲ್ಗೊಂಡಿದ್ದರು.