ಸಿಎಂಗೆ ಕಪ್ಪು ಬಟ್ಟೆ ಪ್ರದರ್ಶನ, ಸಮಾವೇಶದಲ್ಲಿ ಹೈಡ್ರಾಮಾ

| Published : Apr 29 2025, 12:45 AM IST

ಸಾರಾಂಶ

ಇಲ್ಲಿನ ಸಿಪಿಇಡಿ ಮೈದಾನದಲ್ಲಿ ಕಾಂಗ್ರೆಸ್‌ ಆಯೋಜಿಸಿದ್ದ ಸಂವಿಧಾನ ರಕ್ಷಿಸಿ, ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ನ ಪ್ರತಿಭಟನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದ ವೇಳೆ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಕಪ್ಪು ಬಾವುಟ ಪ್ರದರ್ಶನ ಮಾಡಿ, ಸಿಎಂ ವಿರುದ್ಧ ಘೋಷಣೆ ಕೂಗಿದ ಘಟನೆ ನಡೆಯಿತು. ಈ ವೇಳೆ ಗೊಂದಲ ಸೃಷ್ಟಿಯಾಗಿ, ಹೈಡ್ರಾಮಾ ಕೂಡ ಜರುಗಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಇಲ್ಲಿನ ಸಿಪಿಇಡಿ ಮೈದಾನದಲ್ಲಿ ಕಾಂಗ್ರೆಸ್‌ ಆಯೋಜಿಸಿದ್ದ ಸಂವಿಧಾನ ರಕ್ಷಿಸಿ, ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ನ ಪ್ರತಿಭಟನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದ ವೇಳೆ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಕಪ್ಪು ಬಾವುಟ ಪ್ರದರ್ಶನ ಮಾಡಿ, ಸಿಎಂ ವಿರುದ್ಧ ಘೋಷಣೆ ಕೂಗಿದ ಘಟನೆ ನಡೆಯಿತು. ಈ ವೇಳೆ ಗೊಂದಲ ಸೃಷ್ಟಿಯಾಗಿ, ಹೈಡ್ರಾಮಾ ಕೂಡ ಜರುಗಿತು.

ಕಾಂಗ್ರೆಸ್‌ ಕಾರ್ಯಕರ್ತರ ಜೊತೆಗೆ ಸಮಾವೇಶಕ್ಕೆ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತೆಯರು ತಮ್ಮನ್ನು ಯಾರೂ ಗುರುತಿಸದಂತೆ ತಮ್ಮ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೆವಾಲಾ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ ಸೇರಿದಂತೆ ಕಾಂಗ್ರೆಸ್‌ ನಾಯಕರು ಸಮಾವೇಶವನ್ನುದ್ದೇಶಿಸಿ ಮಾತನಾಡುವವರೆಗೂ ಸುಮ್ಮನಿದ್ದ ಬಿಜೆಪಿ ಕಾರ್ಯಕರ್ತೆಯರು, ಸಿಎಂ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದಾಗಲೇ ತಮ್ಮ ಮುಖಕ್ಕೆಕಟ್ಟಿಕೊಂಡಿದ್ದ ಬಟ್ಟೆಯನ್ನು ಬಿಚ್ಚಿದರು.ನಂತರ ಬಿಜೆಪಿ ಕಾರ್ಯಕರ್ತೆ ಶಿಲ್ಪಾ ಕೇಕರೆ ಕಪ್ಪು ಬಟ್ಟೆ ಪ್ರದರ್ಶಿಸಿದರು. ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಸಮಾವೇಶದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಬಳಿಕ ಪೊಲೀಸರು ಶಿಲ್ಪಾ ಸೇರಿ ಆರು ಬಿಜೆಪಿ ಮಹಿಳಾ ಕಾರ್ಯಕರ್ತೆಯರನ್ನು ತಮ್ಮ ವಶಕ್ಕೆ ಪಡೆದುಕೊಂಡರು.ಸಿದ್ದರಾಮಯ್ಯ ಗೋ ಗೋ ಪಾಕಿಸ್ತಾನ ಎಂದು ಬಿಜೆಪಿ ಕಾರ್ಯಕರ್ತೆ ಶಿಲ್ಪಾ ಘೋಷಣೆ ಕೂಗಿದರು. ಪಹಲ್ಗಾಮ್ ಪ್ರಕರಣ ಬಗ್ಗೆ ಸಿಎಂ ಹೇಳಿಕೆ ಖಂಡಿಸಿ ತಮ್ಮ ಆಕ್ರೋಶವನ್ನು ಹೊರಹಾಕಿದರು. ನಂತರ ಶಿಲ್ಪಾ ಅವರನ್ನು ಕ್ಯಾಂಪ್‌ ಠಾಣೆಗೆ ಕರೆದುಕೊಂಡು ಹೋಗಲು ಪೊಲೀಸರು ತಮ್ಮ ಜೀಪಿನಲ್ಲಿ ಕೂರಿಸಿದರು. ಈ ವೇಳೆ ಕಾಂಗ್ರೆಸ್‌ ಕಾರ್ಯಕರ್ತರ ಪೊಲೀಸ್‌ ಜೀಪಿಗೆ ಮುತ್ತಿಗೆ ಹಾಕಿದರು. ಆಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಅವರನ್ನು ಚದುರಿಸಿ ಶಿಲ್ಪಾರನ್ನು ಕರೆದುಕೊಂಡು ಹೋದರು.ಶಿಲ್ಪಾರನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋದರು. ಸಿಎಂಗೆ ಕಪ್ಪು ಬಾವುಟ ಪ್ರದರ್ಶಿಸಿದ ಬಿಜೆಪಿ ಕಾರ್ಯಕರ್ತೆಯರ ಆರೋಗ್ಯ ತಪಾಸಣೆಗೆ ವಂಟಮೂರಿಯಲ್ಲಿರುವ ತಾಯಿ ಮತ್ತು ಮಕ್ಕಳ ಆರೋಗ್ಯ ಕೇಂದ್ರಕ್ಕೆ ಕರೆತರುವ ಮೂಲಕ ಪೊಲೀಸರು ಮತ್ತೊಂದು ಯಡವಟ್ಟು ಮಾಡಿಕೊಂಡರು. ಜಿಲ್ಲಾಸ್ಪತ್ರೆ ಇಲ್ಲವೇ ಪಿಎಚ್‌ಸಿಗಳಲ್ಲಿ ಆರೋಗ್ಯ ತಪಾಸಣೆ ಮಾಡಬೇಕೆಂಬ ನಿಯಮವಿತ್ತು. ಆದರೆ, ಇಲ್ಲಿನ ವೈದ್ಯರು ಆರೋಗ್ಯ ತಪಾಸಣೆ ‌ಮಾಡಲು ನಿರಾಕರಿಸಿದರು. ಮರಳಿ ಅವರನ್ನು ಬಿಮ್ಸ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ವೈದ್ಯಕೀಯ ತಪಾಸಣೆ ನಡೆಸಲಾಯಿತು. ಬಳಿಕ ಕೋರ್ಟ್‌ಗೆ ಹಾಜರು ಪಡಿಸಲಾಯಿತು. ಕಾರ್ಯಕರ್ತೆಯರ ಪರವಾಗಿ ವಕೀಲರಾದ ವಿನೋದಕುಮಾರ ಪಾಟೀಲ ಮತ್ತು ಧನ್ಯಕುಮಾರ ಪಾಟೀಲ ವಕಾಲತ್ತು ವಹಿಸಿದ್ದರು. ಕೋರ್ಟ್ ಮುಂದೆ ಬಿಜೆಪಿ ನಾಯಕರು, ಕಾರ್ಯಕರ್ತರು ಜಮಾಯಿಸಿದ್ದರು.ಪೊಲೀಸರ ಈ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತೆಯರು, ನಮ್ಮನ್ನು ಠಾಣೆಯಿಂದ ಠಾಣೆಗೆ ಪೊಲೀಸರು ಸುತ್ತಾಡಿಸುತ್ತಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿಗೆ ಮಾಡಿದಂತೆ ನಮಗೂ ಎಲ್ಲ ಕಡೆಗೂ ಪೊಲೀಸರು ಕರೆದೊಯ್ಯುತ್ತಿದ್ದಾರೆ. ಹಿಂದು ವಿರೋಧಿ ವಿರುದ್ಧ ನಮ್ಮ ಪ್ರತಿಭಟನೆ ಇತ್ತು ಅಷ್ಟೇ ಎಂದರು.ಡಿಸಿಪಿ ಮೇಲೆ ಸಚಿವೆ ಹೆಬ್ಬಾಳಕರ ಗರಂ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಭಾಷಣ ಮಾಡುವಾಗ ವೇದಿಕೆಯಲ್ಲೇ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಏನೋ ಸೂಚನೆ ಕೊಡುತ್ತಾರೆ. ಅದರಂತೆ ಸಚಿವೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ವೇದಿಕೆಯಿಂದ ಕೆಳಗೆ ಬಂದು, ಡಿಸಿಪಿ ರೋಹನ ಜಗದೀಶ ವಿರುದ್ಧ ಹರಿಹಾಯ್ದರು. ಏನಿದು ಸಮಾವೇಶದಲ್ಲಿ ಗೊಂದಲ ಉಂಟಾಗಿದೆ. ನಿಮಗ್ಯಾರು ಅವರನ್ನು ಬಿಡಲು ಹೇಳಿದ್ದು? ಹೀಗೆ ಗಲಾಟೆಯಾಗಲು ಯಾರು ಕಾರಣ? ಕೂಡಲೇ ಪರಿಸ್ಥಿತಿ ನಿಯಂತ್ರಿಸುವಂತೆ ಸೂಚನೆ ನೀಡುತ್ತಾರೆ. ಈ ನಡುವೆ ಬಿಜೆಪಿ ಮಹಿಳಾ ಕಾರ್ಯಕರ್ತೆಯರನ್ನು ಬಂಧಿಸುವಂತೆ ಕಾಂಗ್ರೆಸ್‌ ಕಾರ್ಯಕರ್ತರು ಆಗ್ರಹಿಸುತ್ತಾರೆ. ಜತೆಗೆ ಕಾಂಗ್ರೆಸ್‌ ಕಾರ್ಯಕರ್ತರು ಪೊಲೀಸರ ವಾಹನಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.ಬಿಜೆಪಿ- ಕಾಂಗ್ರೆಸ್‌ ಕಾರ್ಯಕರ್ತರ ಹೈಡ್ರಾಮಾ:

ಕಾಂಗ್ರೆಸ್‌ ಸಮಾವೇಶದಲ್ಲಿ ಬಿಜೆಪಿ ಕಾರ್ಯಕರ್ತೆಯರ ಗದ್ದಲ ವಿಚಾರವಾಗಿ ಬೆಳಗಾವಿ ಕ್ಯಾಂಪ್‌ ಪೊಲೀಸ್‌ ಠಾಣೆ ಎದುರು ಬಿಜೆಪಿ- ಕಾಂಗ್ರೆಸ್‌ ಕಾರ್ಯಕರ್ತರಿಂದ ಹೈಡ್ರಾಮಾ ನಡೆಯಿತು. ಮೋದಿ ಪರ ಬಿಜೆಪಿ ಕಾರ್ಯಕರ್ತರು, ರಾಹುಲ್ ಗಾಂಧಿ ಪರ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರು.ಮುಖ್ಯಮಂತ್ರಿಗೆ ಕಪ್ಪು ಬಾವುಟ ಪ್ರದರ್ಶಿಸಿ, ಪ್ರತಿಭಟನೆ ನಡೆಸಿದ್ದ ಬಿಜೆಪಿ ಕಾರ್ಯಕರ್ತೆ ಶಿಲ್ಪಾ ಅವರನ್ನು ವಶಕ್ಕೆ ಪಡೆದು ಕ್ಯಾಂಪ್‌ ಠಾಣೆಗೆ ಕರೆತಂದ ಮಾಹಿತಿ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಠಾಣೆಯತ್ತ ಆಗಮಿಸಿದರು. ಕಾಂಗ್ರೆಸ್ ಸಮಾವೇಶದಲ್ಲಿ ಗೊಂದಲ ಸೃಷ್ಟಿಸಿದ ಬಿಜೆಪಿ ಕಾರ್ಯಕರ್ತೆ ಶಿಲ್ಪಾಳನ್ನು ಬಂಧಿಸುವಂತೆ ಕಾಂಗ್ರೆಸ್‌ ಕಾರ್ಯಕರ್ತರು ಕೂಡ ಠಾಣೆಗೆ ಬಂದು ಪ್ರತಿಭಟಿಸಿ ಆಗ್ರಹಿಸಿದರು. ಬಿಜೆಪಿ, ಕಾಂಗ್ರೆಸ್‌ ಕಾರ್ಯಕರ್ತರು ಪರಸ್ಪರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಎರಡೂ ಪಕ್ಷಗಳ ಕಾರ್ಯಕರ್ತರು, ನಾಯಕರ ಮನವೊಲಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.