ನಮೂನೆ-7 ರ ಅನ್ವಯ ಸಲ್ಲಿಕೆಯಾದ ಅರ್ಜಿಗಳ ಆಧಾರದ ಮೇಲೆ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ಕುರಿತು ಯಾವುದೇ ತಕ್ಷಣದ ಕ್ರಮಕೈಗೊಳ್ಳುವುದಿಲ್ಲ.
ಧಾರವಾಡ:
ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಟ್ಟು, ಜನರ ಗಮನ ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ರಾಜ್ಯ ಚುನಾವಣಾ ಕಚೇರಿಯ ಮುಂದೆ ಮತದಾರರ ಪಟ್ಟಿಯ ''''''''ವಿಶೇಷ ತೀವ್ರ ಪರಿಷ್ಕರಣೆ'''''''' ವಿರುದ್ಧ ಧರಣಿ ನಡೆಸುವ ಮೂಲಕ ಕಪಟ ನಾಟಕವಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.ಮಂಗಳವಾರ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮೂನೆ-7 ರ ಅನ್ವಯ ಸಲ್ಲಿಕೆಯಾದ ಅರ್ಜಿಗಳ ಆಧಾರದ ಮೇಲೆ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ಕುರಿತು ಯಾವುದೇ ತಕ್ಷಣದ ಕ್ರಮಕೈಗೊಳ್ಳುವುದಿಲ್ಲ ಎಂದು ರಾಜ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ, ಚುನಾವಣಾ ಆಯುಕ್ತರನ್ನು ನೇಮಿಸಿದ್ದು ಹಾಗೂ ಎಸ್‌ಐಆರ್ ಪ್ರಕ್ರಿಯೆಯಲ್ಲಿ ತೊಡಗಿರುವ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಸೇರಿದವರಾಗಿದ್ದಾರೆ. ಇಷ್ಟಾಗಿಯೂ ಚುನಾವಣಾ ಆಯೋಗವು ''''''''ಅಹಿಂದ'''''''' ವರ್ಗದ ಮತದಾರರ ಹೆಸರು ತೆಗೆದು ಹಾಕುತ್ತಿದೆ ಎಂಬ ಮುಖ್ಯಮಂತ್ರಿಗಳ ಆರೋಪದ ಆಧಾರವೇನು ಎಂದು ಪ್ರಶ್ನಿಸಿದರು.
ಎಸ್‌ಐಆರ್ ಒಂದು ಕಡ್ಡಾಯ ಚುನಾವಣಾ ಪ್ರಕ್ರಿಯೆ ಎಂದ ವಿಜಯೇಂದ್ರ, ಕೇರಳದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಎಸ್‌ಐಆರ್ ಪ್ರಕ್ರಿಯೆಯೇ ಕಾರಣವಾಗಿದೆ ಎಂಬ ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿಕೆಯನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ಇನ್ನು, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಂತಾಗಿವೆ. ಇಂತಹ ಕ್ರಮಗಳ ವಿರುದ್ಧ ಬಿಜೆಪಿ ಕಾನೂನು ಹೋರಾಟ ನಡೆಸಲಿದೆ ಎಂದರು.ಕಾಂಗ್ರೆಸ್ ಸರ್ಕಾರವು ತನ್ನ ''''''''ಐದು ಗ್ಯಾರಂಟಿ'''''''' ಯೋಜನೆಗಳ ಅನುಷ್ಠಾನದಿಂದ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆಯಿಂದಾಗಿ ರಾಜ್ಯ ಸಾರಿಗೆ ನಿಗಮಗಳಿಗೆ ಸುಮಾರು ₹ 8,000 ಕೋಟಿ ನಷ್ಟವಾಗಿದೆ. ನೌಕರರಿಗೆ ವೇತನ ಪಾವತಿಸಲೂ ಪರದಾಡುತ್ತಿದೆ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ಪತ್ರ ಬರೆದಿರುವುದನ್ನು ವಿಜಯೇಂದ್ರ ಉಲ್ಲೇಖಿಸಿದರು.
ಸರ್ಕಾರದ ಆದಾಯ ಹೆಚ್ಚಿಸುವ ಸಲುವಾಗಿ ಅಬಕಾರಿ ಇಲಾಖೆಗೆ ಆದಾಯದ ಗುರಿಗಳನ್ನು ನೀಡಲಾಗಿದೆ ಮತ್ತು ದಿನಸಿ ಅಂಗಡಿಗಳ ಮೂಲಕ ಮದ್ಯ ಮಾರಾಟ ಮಾಡಲಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯೇ ಕಾಂಗ್ರೆಸ್ ಸರ್ಕಾರದ ಏಕೈಕ ಸಾಧನೆ ಎಂದು ಟೀಕಿಸಿದ ಅವರು, 139 ಶಾಸಕರನ್ನು ಹೊಂದಿದ್ದರೂ ಕಾಂಗ್ರೆಸ್ ಸರ್ಕಾರವು ಅಸುರಕ್ಷಿತ ಭಾವನೆ ಹೊಂದಿದ್ದು, ಬರಗಾಲದಿಂದ ಉಂಟಾದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮುಖ್ಯಮಂತ್ರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಬದಲು ರಿಯಲ್ ಎಸ್ಟೇಟ್ ವಲಯ ಉತ್ತೇಜಿಸಲು ಸರ್ಕಾರ ಆದ್ಯತೆ ನೀಡುತ್ತಿದೆ. ಬರೀ ಬೆಂಗಳೂರು ಅಭಿವೃದ್ಧಿಯನ್ನು ರಾಜ್ಯದ ಅಭಿವೃದ್ಧಿಯಾಗಿ ಬಿಂಬಿಸಲಾಗುತ್ತಿದೆ ಎಂದು ಕಿಡಿಕಾರಿದರು.ಬೆಳೆ ನಷ್ಟ, ವಿದ್ಯುತ್ ಕೊರತೆ ಮತ್ತು ನೀರಿನ ಅಭಾವದಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಮಹಾರಾಷ್ಟ್ರದಲ್ಲಿ ₹ 2 ಲಕ್ಷ ವರೆಗೆ ಕೃಷಿ ಸಾಲ ಮನ್ನಾ ಮಾಡಿದ್ದು, ಇಲ್ಲೂ ₹ 5 ಲಕ್ಷ ವರೆಗೆ ಸಾಲ ಮನ್ನಾ ಮಾಡಬೇಕು. ಜತೆಗೆ ಸಂಕಷ್ಟದಲ್ಲಿರುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹ 50,000 ಪರಿಹಾರ ನೀಡಬೇಕೆಂದು ನಾವು ಆಗ್ರಹಿಸಿದ್ದೇವೆ. ಆದರೆ, ಸರ್ಕಾರವು ಅವರ ದುಸ್ಥಿತಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ವಿರುದ್ಧ ಹೋರಾಟ ನಿಂತರವಾಗಿರುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ವಿಪ ಸದಸ್ಯ ಲಿಂಗರಾಜ ಪಾಟೀಲ, ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿ ಎಸ್.ವಿ. ಸಂಕನೂರು, ಗ್ರಾಮೀಣ ಜಿಲ್ಲಾಧ್ಯಕ್ಷ ನಿಂಗಪ್ಪ ಸುತ್ತಗಟ್ಟಿ, ಜಯತೀರ್ಥ ಕಟ್ಟಿ, ಮಾಜಿ ಶಾಸಕ ಅಶೋಕ ಕಾಟವೆ, ಮಾಜಿ ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ಇತರರು ಇದ್ದರು. 28ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ...ಸದ್ಯದ ವಿಧಾನ ಪರಿಷತ್ ಚುನಾವಣೆ ಸೇರಿದಂತೆ ಮುಂಬರುವ ವಿಪ ಚುನಾವಣೆ ಹಾಗೂ ಜಿಲ್ಲಾ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ. ಅಲ್ಲದೆ, 2028ರಲ್ಲಿ 130ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಕರ್ನಾಟಕದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಯಲಿದೆ.
ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ