ಜಿಲ್ಲೆಯ ಸಮಸ್ಯೆ ಮರೆತ ಡಿಸಿಗೆ ಸಿಎಂ ಸ್ವಾಗತದ ಸಡಗರ: ಎಚ್‌.ಡಿ.ರೇವಣ್ಣ

| Published : Mar 01 2024, 02:15 AM IST

ಜಿಲ್ಲೆಯ ಸಮಸ್ಯೆ ಮರೆತ ಡಿಸಿಗೆ ಸಿಎಂ ಸ್ವಾಗತದ ಸಡಗರ: ಎಚ್‌.ಡಿ.ರೇವಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಮನ ನೀಡದ ಜಿಲ್ಲಾಧಿಕಾರಿ ಮುಖ್ಯಮಂತ್ರಿಯನ್ನು ಸ್ವಾಗತಿಸಲು ಭಾರಿ ಸಡಗರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಶಾಸಕ ಎಚ್.ಡಿ. ರೇವಣ್ಣ ಅಸಮಧಾನ ವ್ಯಕ್ತಪಡಿಸಿದರು. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಜೆಡಿಎಸ್‌ ನಾಯಕ ಅಸಮಾಧಾನ । ಜೆಡಿಎಸ್‌ ಕಾಲದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ: ವ್ಯಂಗ್ಯಕನ್ನಡಪ್ರಭ ವಾರ್ತೆ ಹಾಸನ

ಜೆಡಿಎಸ್‌ ಕಾಲದಲ್ಲಿ ತರಲಾದ ಅನುದಾನಗಳ ಅಭಿವೃದ್ಧಿ ಕೆಲಸಗಳನ್ನು ಉದ್ಘಾಟಿಸಲು ಶುಕ್ರವಾರ ನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದು, ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಮನ ನೀಡದ ಜಿಲ್ಲಾಧಿಕಾರಿ ಮುಖ್ಯಮಂತ್ರಿಯನ್ನು ಸ್ವಾಗತಿಸಲು ಭಾರಿ ಸಡಗರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಶಾಸಕ ಎಚ್.ಡಿ. ರೇವಣ್ಣ ಅಸಮಧಾನ ವ್ಯಕ್ತಪಡಿಸಿದರು.

ನಗರದಲ್ಲಿರುವ ಸಂಸದರ ನಿವಾಸದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದರೂ ನೀರು ಸರಬರಾಜು ಮಾಡುತ್ತಿಲ್ಲ. ಕುಡಿಯುವ ನೀರಿಗೆ ಜಿಲ್ಲಾ ಪಂಚಾಯತ್‌ಗೆ ೨೫ ಲಕ್ಷ ರು. ಕೊಡುತ್ತೇವೆ ಅಂದಿದ್ದರು, ಇನ್ನೂ ಕೊಟ್ಟಿಲ್ಲ. ಜಿಲ್ಲಾಧಿಕಾರಿ ಖಾತೆಗೆ ೫೦ ಲಕ್ಷ ರು. ಕೊಟ್ಟಿದ್ದಾರೆ. ಎನ್‌ಡಿಆರ್‌ಎಫ್ ನಿಯಮಗಳ ಪ್ರಕಾರ ಒಂದು ರುಪಾಯಿ ಖರ್ಚು ಮಾಡಲು ಆಗಿಲ್ಲ. ರೈತರ ಬೆಳೆ ಹಾನಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ. ಜಿಲ್ಲೆಯ ಶಾಲೆಗಳಿಗೆ ಮೂಲಭೂತ ಸೌಕರ್ಯಗಳಿಲ್ಲ. ಹಾಸನ ನಗರದ ರೈಲ್ವೆ ಫ್ಲೈ ಒವರ್‌ಗೆ ರಾಜ್ಯ ಸರ್ಕಾರ ೪೮ ಕೋಟಿ ರು. ಬಿಡುಗಡೆ ಮಾಡಬೇಕಿತ್ತು, ಅದನ್ನೂ ಮಾಡಿಲ್ಲ. ಈ ಹಿಂದೆ ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ೧೪೦ ಕೋಟಿ ರು. ಹಣ ತರಲಾಗಿತ್ತು. ಆದರೇ ಈಗ ಅದು ನೆನೆಗುದಿಗೆ ಬಿದ್ದಿದೆ. ಹಾಸನ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯರ ಹಾಸ್ಟೆಲ್ ಕಟ್ಟಡ ನಿರ್ಮಾಣ ಮಾಡಿ ವಿದ್ಯಾರ್ಥಿನಿಯರಿಗೆ ನೆರವಾಗಬೇಕು. ಜತೆಗೆ ಕೊಬ್ಬರಿ ಖರೀದಿಗೆ ರಾಜ್ಯ ಸರ್ಕಾರ ಗಮನಹರಿಸಬೇಕು. ಅಲ್ಲದೆ ಈಗಾಗಲೇ ಜಿಲ್ಲೆಯಲ್ಲಿ ವಿವಿಧ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು ಅವುಗಳಿಗೂ ಅಗತ್ಯ ಹಣ ಬಿಡುಗಡೆ ಮಾಡಲು ಒತ್ತಾಯಿಸಬೇಕು ಎಂದು ಆಗ್ರಹಿಸಿದರು.

ಶುಕ್ರವಾರ ಮುಖ್ಯಮಂತ್ರಿ ಹಾಸನದಲ್ಲಿ ೧,೨೦೦ ಕೋಟಿ ರು. ವೆಚ್ಚದ ವಿವಿಧ ಕಾಮಗಾರಿ ಉದ್ಘಾಟನೆ ಮಾಡುತ್ತಿದ್ದಾರೆ. ಡಿಸಿಯವರು ಜಿಲ್ಲೆಯ ಸಮಸ್ಯೆ ಬಗ್ಗೆ ಇವೆಲ್ಲವನ್ನೂ ಮುಖ್ಯಮಂತ್ರಿ ಗಮನಕ್ಕೆ ತರಬೇಕು. ಜಿಲ್ಲೆಗೆ ಮುಖ್ಯಮಂತ್ರಿ ಸ್ವಲ್ಪ ಹಣ ಕೊಟ್ಟರೆ ಒಳ್ಳೆಯದು. ರಾಜಕಾರಣ ಆಮೇಲೆ ಮಾಡೋಣ. ಈ ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಡಲಿ ಎಂದು ಮನವಿ ಮಾಡಿದರು.

ಡಿಸಿ ಬಗ್ಗೆ ವ್ಯಂಗ್ಯ

‘ಕಾರ್ಯಕ್ರಮಕ್ಕೆ ಹೋದಾಗ ಯಾರಿಗೂ ಮುಜುಗರ ಆಗಬಾರದು. ಅಲ್ಲಿ ನಮ್ಮ ಮೇಲೆ ಯಾರಾದರೂ ಸುಮ್ಮನೆ ಧಿಕ್ಕಾರ ಹಾಕಿದರೆ! ನನ್ನ ಕ್ಷೇತ್ರ ಆಗಿದ್ದರೆ ಬರಬಹುದಿತ್ತು. ಸ್ವರೂಪ್‌ ಪ್ರಕಾಶ್ ಅವರ ಕ್ಷೇತ್ರ ಅವರು ಪಾಲ್ಗೊಳ್ಳುತ್ತಾರೆ. ಮುಖ್ಯಮಂತ್ರಿ ಬರುವ ಕಾರ್ಯಕ್ರಮವನ್ನೆಲ್ಲಾ ಜಿಲ್ಲಾಧಿಕಾರಿ ಎಲ್ಲಾ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಜನ ಕರೆಸೋದು, ಬಸ್ ವ್ಯವಸ್ಥೆ ಎಲ್ಲಾ ಅವರೇ ವಹಿಸಿಕೊಂಡಿದ್ದಾರೆ. ರಾಜಕೀಯ ಮಾಡುವುದೇ ಬೇರೆ. ನಮ್ಮ ಜಿಲ್ಲೆಗೆ ಕೊಡುಗೆ ಕೊಡುತ್ತೇನೆ ಎಂದು ಬರುತ್ತಿದ್ದಾರೆ. ಜಿಲ್ಲಾಧಿಕಾರಿ ಹಗಲು, ರಾತ್ರಿ ಕಷ್ಟಪಡುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಗಿಂತ ಹೆಚ್ಚಾಗಿ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಸಿಎಂ ಗಮನಕ್ಕೆ ತರಬೇಕು. ಜಿಲ್ಲಾಧಿಕಾರಿ ಜಿಲ್ಲೆಯನ್ನು ಸಂಪೂರ್ಣ ನಿಯಂತ್ರಣ ತೆಗೆದುಕೊಂಡಿದ್ದಾರೆ. ಜಿಲ್ಲಾಧಿಕಾರಿಯೇ ಬಸ್ ವ್ಯವಸ್ಥೆ ಮಾಡಿ ಜನರನ್ನು ಕರೆದುಕೊಂಡು ಬರಲು ಒಂದೊಂದು ಇಲಾಖೆಗೆ ಉಸ್ತುವಾರಿ ಕೊಟ್ಟಿದ್ದಾರೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಕಾಂಗ್ರೆಸ್ ಮುಖಂಡರನ್ನು ಬದಿಗೊತ್ತಿ ಜನರನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಬರಲು ಓಡಾಡುತ್ತಿದ್ದಾರೆ. ಬಾಣಾವರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರಂತೆ ಕೆಲಸ ಮಾಡಿದ್ದಾರೆ ಎಂದು ಕುಟುಕಿದರು.

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರೇವಣ್ಣ, ಯಾರೇ ಆಗಲಿ ಆ ರೀತಿ ಕೂಗಿದರೆ ತಪ್ಪು. ಎಫ್‌ಎಸ್‌ಎಲ್ ವರದಿ, ತನಿಖಾ ವರದಿ ಬರಲಿ. ತನಿಖೆಯಾಗಲಿ ಆಮೇಲೆ ನಿಜಾಂಶ ತಿಳಿಯುತ್ತದೆ’ ಎಂದರು.

ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಘುಗೌಡ, ನಗರಸಭೆ ಸದಸ್ಯ ಚಂದ್ರೇಗೌಡ ಇದ್ದರು.ಹಾಸನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಎಚ್.ಡಿ.ರೇವಣ್ಣ.