ಕನ್ನಡಪ್ರಭ ವಾರ್ತೆ ಮಡಿಕೇರಿ

ಕ್ಷೇತ್ರ ಪುನರ್ ವಿಂಗಡಣೆಯ ಸಂದರ್ಭ ಕೊಡವರಿಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರ ಮತ್ತು ವಿಧಾನಸಭಾ ಕ್ಷೇತ್ರವನ್ನು ಘೋಷಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಮೇ 1 ರಿಂದ ಅಭಿಯಾನವನ್ನು ಆರಂಭಿಸಲಾಗುವುದು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮೇ 1 ರಂದು ಬೆಳಿಗ್ಗೆ 9 ಗಂಟೆಗೆ ಕೊಡವರ ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಭಿಯಾನವನ್ನು ಆರಂಭಿಸಲಾಗುವುದು ಎಂದು ಹೇಳಿದ್ದಾರೆ.

ಆದಿಮಸಂಜಾತ ಮೂಲನಿವಾಸಿ, ಏಕ-ಜನಾಂಗೀಯ, ಪ್ರಕೃತಿ ಆರಾಧಕ-ಅನಿಮಿಸ್ಟಿಕ್ ಕೊಡವರಿಗಾಗಿ ಕೊಡವ ಪ್ರದೇಶದ ಗಡಿಗಳನ್ನು ಬದಲಾಯಿಸದೆ ಕೊಡವ ಸಾಂಪ್ರದಾಯಿಕ ನೆಲೆಯಲ್ಲೇ ಪ್ರತ್ಯೇಕ ಕೊಡವ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳನ್ನು ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೊಡವಲ್ಯಾಂಡ್ ನ ಭೌಗೋಳಿಕ- ರಾಜಕೀಯ ಸ್ವಾಯತ್ತತೆ, ಸ್ವಯಂ-ಆಡಳಿತ, ಆಂತರಿಕ ಸ್ವಯಂ-ನಿರ್ಣಯದ ಹಕ್ಕುಗಳು, ಕೊಡವರನ್ನು ಬುಡಕಟ್ಟು ಪಟ್ಟಿಗೆ ವರ್ಗೀಕರಿಸುವುದು, ವಿಧಾನಸಭೆ ಮತ್ತು ಸಂಸತ್ತಿನಲ್ಲಿ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡುವುದು, ವಿಶ್ವಸಂಸ್ಥೆಯಿಂದ ಆದಿಮಸಂಜಾತ ನಿವಾಸಿಗಳೆಂದು ಮಾನ್ಯತೆ ಪಡೆಯಲು ಸಿಎನ್‌ಸಿ ಕಳೆದ 36 ವರ್ಷಗಳಿಂದ ಅವಿರತ ಮತ್ತು ಶಾಂತಿಯುತವಾಗಿ ಶ್ರಮಿಸುತ್ತಿದೆ.

ಸಿಕ್ಕಿಂನ ಬೌದ್ಧ ಭಿಕ್ಷುಗಳಿಗಾಗಿ ಇರುವ "ಸಂಘ " ಅದೃಶ್ಯ ಮತಕ್ಷೇತ್ರ ಮಾದರಿಯಲ್ಲಿ, ಪ್ರತ್ಯೇಕ ಕೊಡವ ಸಂಸತ್ತು ಮತ್ತು ವಿಧಾನಸಭಾ ಕ್ಷೇತ್ರವನ್ನು ರಚಿಸಬೇಕು. ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿಯನ್ನು ಖಚಿತಪಡಿಸಿಕೊಳ್ಳುವಾಗ, ಕೊಡವ ಮಹಿಳೆಯರಿಗೆ ಪ್ರತ್ಯೇಕ ಆಂತರಿಕ ಕೋಟಾವನ್ನು ನೀಡಬೇಕು. 2027ರ


ಗಣತಿಯಲ್ಲಿ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಂ ಅನ್ನು ಮೀಸಲಿಡಬೇಕು ಎಂದು ಒತ್ತಾಯಿಸಿರುವ ಎನ್.ಯು.ನಾಚಪ್ಪ, ನಮ್ಮ ದೊಡ್ಡ ಸಾಂವಿಧಾನಿಕ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಕೊಡವರ ಸಾಂವಿಧಾನಿಕ ಹಕ್ಕುಗಳನ್ನು ನಿರ್ಧರಿಸಲು ಜನಗಣತಿಯೇ ಪ್ರಮುಖ ಸಾಧನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.