ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ 35ನೇ ವರ್ಷದ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನವನ್ನು ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ 35ನೇ ವರ್ಷದ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನವನ್ನು ಆಚರಿಸಲಾಯಿತು.ಮಡಿಕೇರಿ ನಗರದ ಹೊರ ವಲಯದ ಕ್ಯಾಪಿಟಲ್ ವಿಲೇಜ್ ನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ 10 ಹಕ್ಕೊತ್ತಾಯಗಳನ್ನು ಮಂಡಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಖ್ಯಾತ ರಾಜಕೀಯ ತಜ್ಞ, ಇತಿಹಾಸಕಾರ, ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಹಾರ್ವಾರ್ಡ್ ವಿದ್ವಾಂಸ ಡಾ. ಸಂಜೀವ್ ಚೋಪ್ರ ಅವರು ಸಿಎನ್‌ಸಿ ಮಂಡಿಸಿದ ಹಕ್ಕೊತ್ತಾಯಗಳನ್ನು ಸಮರ್ಥಿಸಿ ಮಾತನಾಡಿದರು. ಎನ್.ಯು.ನಾಚಪ್ಪ ಅವರ ನೇತೃತ್ವದ ಸಿಎನ್‌ಸಿ ಸಂಘಟನೆ ಕೇಳುತ್ತಿರುವ ಕೊಡವಲ್ಯಾಂಡ್ ತೀರ ವಾಸ್ತವಿಕ ಮತ್ತು ಕಾರ್ಯಸಾಧನೆಯಾಗಲಿರುವ ಅಂಶವಾಗಿದೆ. ಪ್ರತ್ಯೇಕ ರಾಷ್ಟ್ರವನ್ನು ಕೇಳುವುದು ಅವಾಸ್ತವಿಕ, ರಾಜ್ಯ ಕೇಳುವುದು ಜಟಿಲ ವಿಚಾರ. ಸಿಎನ್‌ಸಿ ಇದೆರಡನ್ನು ಕೇಳದೆ ತಮ್ಮ ಕಳೆದುಹೋದ ತಾಯಿನೆಲವನ್ನು ಸಂವಿಧಾನದ 5 ಮತ್ತು 6ನೇ ಶೆಡ್ಯೂಲ್‌ನಡಿ ಕೇಳುತ್ತಿರುವುದು ಪ್ರಜಾತಂತ್ರ ವ್ಯವಸ್ಥೆಯ ಅತೀ ಮುಖ್ಯ ತಿರುಳಾಗಿದೆ ಎಂದು ಅಭಿಪ್ರಾಯಪಟ್ಟರು.ವಿಧಾನ ಪರಿಷತ್ ಸದಸ್ಯ ಅಡಗೂರು ವಿಶ್ವನಾಥ್ ಮಾತನಾಡಿ ನನ್ನ ಬಹುದಿನಗಳ ಗೆಳೆಯ ನಾಚಪ್ಪ ಒಬ್ಬ ಧೀಮಂತ ಹೋರಾಟಗಾರರಾಗಿದ್ದು, ಅವರು ಕರೆದಾಗಲೆಲ್ಲ ನಾನು ಬರುತ್ತಲೇ ಇದ್ದೇನೆ. ಕೊಡಗಿಗೆ ಮಾತ್ರ ಸೀಮಿತವಾಗಿರುವ ಈ ಕೊಡವರ ಕುಲ ಸಮಸ್ಯೆಯನ್ನು ಬಗೆಹರಿಸಿ ತಾರ್ಕಿಕ ಅಂತ್ಯಕ್ಕೆ ತಲುಪಿಸಲು ನಾನು ಸಂಸದ ಯದುವೀರ್ ಸೇರಿದಂತೆ ಎಲ್ಲರ ಬಳಿಗೂ ನಿಯೋಗ ಕೊಂಡೊಯ್ಯುತ್ತೇನೆ. ಇದಕ್ಕಾಗಿ ಸಂಜೀವ್ ಚೋಪ್ರರಂತಹ ಬುದ್ಧಿ ಜೀವಿಗಳನ್ನು ಒಳಗೊಂಡ ಒಂದು ಇನ್ನರ್ ಕ್ಯಾಬಿನೇಟ್ ರಚಿಸಬೇಕೆಂದು ಸಲಹೆ ನೀಡಿದರು.
ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಮಾತನಾಡಿ, ಎನ್.ಯು.ನಾಚಪ್ಪ ಅವರು, ತಪ್ಪಸಿನಂತೆ ಈ ಕೊಡವ ಲ್ಯಾಂಡ್ ಆಂದೋಲನವನ್ನು ರೂಪಿಸಿದ್ದಾರೆ. ಯಾರೇ ವಿರೋಧಿಸಲಿ, ಅಡ್ಡಗಾಲು ಹಾಕಲಿ ತಾವು ನಂಬಿದ ಸಿದ್ಧಾಂತಕ್ಕೆ ಬದ್ದರಾಗಿದ್ದಾರೆ. ಅವರಿಗೆ ನನ್ನ ವೈಯುಕ್ತಿಕ ಬೆಂಬಲವಲ್ಲದೆ, ತಾವು ಪ್ರತಿನಿಧಿಸುವ ಬೆಂಗಳೂರು ಕೊಡವ ಸಮಾಜದ ಶ್ರೀ ರಕ್ಷೆ ಇರಲಿದೆ ಎಂದು ಭರವಸೆ ನೀಡಿದರು.ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ನಾಣಯ್ಯ ಮಾತನಾಡಿ, ಇಡೀ ನಾಲ್ನಾಡ್ ಕೊಡವ ಸಮಾಜದ ಬೆಂಬಲವನ್ನು ಸಿಎನ್‌ಸಿಗೆ ನೀಡಲಿದ್ದು, ನಾಚಪ್ಪ ಹಾಗೂ ಅವರ ಸಂಗಡಿಗರು ಇಡೀ ಭಾರತ ದೇಶಕ್ಕೆ ಕೊಡವರ ಧ್ವನಿಯನ್ನು ತಲುಪಿಸುವಲ್ಲಿ ಸಫಲರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹೆಸರಾಂತ ವೈದ್ಯ ಡಾ.ಮಾತಂಡ ಅಯ್ಯಪ್ಪ ಅವರು ಮಾತನಾಡಿ, ಪ್ರತಿಯೊಬ್ಬ ಹೋರಾಟಗಾರರಿಗೂ ಎನ್.ಯು.ನಾಚಪ್ಪ ಸ್ಫೂರ್ತಿದಾಯಕರಾಗಿದ್ದು, ಇಲ್ಲಿ ಭಾಗವಹಿಸಿದವರ ಸಂಖ್ಯೆ ಶೇ.25 ರಷ್ಟು ಇದ್ದರೆ, ಇನ್ನು ಶೇ.75 ರಷ್ಟು ಸುಪ್ತ ಬೆಂಬಲಿಗರು ಮೌನವಾಗಿ ಸಿಎನ್‌ಸಿಗೆ ಬೆಂಬಲಿಸುತ್ತಿದ್ದಾರೆ. ಕೊಡವಲ್ಯಾಂಡ್ ಬೇಗ ಕಾರ್ಯಗತವಾಗಲಿ ಎಂದು ಹಾರೈಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕೊಡವರನ್ನು ಆದಿಮಸಂಜಾತ ಏಕ-ಜನಾಂಗೀಯ ಅನಿಮಿಸ್ಟಿಕ್ ಗುಂಪಾಗಿ ಗುರುತಿಸಲು ಸಿಎನ್‌ಸಿ ಸಂವಿಧಾನಿಕ ಪ್ರಯಾಣವನ್ನು ಮುಂದುವರೆಸಿದೆ. ಕೊಡವ ಜನರ ಪೂರ್ವಜರ ತಾಯ್ನಾಡು, ಕೊಡವಲ್ಯಾಂಡ್, ಭೂ ಮಂಡಲದ ಸೃಷ್ಟಿಯಿಂದಲೂ ಅಸ್ತಿತ್ವದಲ್ಲಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಪ್ರತಿಪಾದಿಸುತ್ತದೆ. ಇದು ಸಮುದಾಯದ ಭೂಮಿಯೊಂದಿಗಿನ ಆಳವಾದ ಸಂಪರ್ಕವನ್ನು ಎತ್ತಿ ತೋರಿಸುತ್ತದೆ ಎಂದರು.