ಸಾರಾಂಶ
ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಮಡಿಕೇರಿಯ ಕೊಡವ ಮಂದ್ ನಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಸ್ವಾತಂತ್ರ್ಯ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಸಂವಿಧಾನದ ಆಶಯದಂತೆ ಕೊಡವರು ಪ್ರತಿಪಾದಿಸಬಹುದಾದ ಹಕ್ಕೊತ್ತಾಯಗಳನ್ನು ವಿವರಿಸಿದರು.ಆದಿಮಸಂಜಾತ ಅನಿಮಿಸ್ಟಿಕ್ ಏಕ ಜನಾಂಗೀಯ ಕೊಡವ ಸಮುದಾಯ ನಿಜಅರ್ಥದಲ್ಲಿ ಸ್ವಾತಂತ್ರ್ಯವನ್ನು ಅನುಭವಿಸಬೇಕಾದರೆ ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ, ಸ್ವಆಡಳಿತ ಮತ್ತು ಸ್ವಯಂ ನಿರ್ಣಯದ ಹಕ್ಕುಗಳು ಸಾಕಾರಗೊಳ್ಳಬೇಕಾಗುತ್ತದೆ. ಭಾರತ ದೇಶ ಸ್ವಾತಂತ್ರ್ಯವನ್ನು ಸಾಧಿಸಿ 79 ವರ್ಷಗಳಾಗಿದೆ. ಆದರೆ ಸಂವಿಧಾನದ ವಿಧಿಗಳನ್ನು ಸಂಪೂರ್ಣವಾಗಿ ಜಾರಿಗೆ ತಂದಾಗ ಮಾತ್ರ ನಿಜವಾದ ಸ್ವಾತಂತ್ರ್ಯ ಲಭಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಆದಿಮಸಂಜಾತ ಅನಿಮಿಸ್ಟಿಕ್ ಏಕ ಜನಾಂಗೀಯ ಕೊಡವರು ಅತ್ಯಂತ ಸೂಕ್ಷ್ಮ ಸಮುದಾಯಕ್ಕೆ ಸೇರಿದವರಾಗಿದ್ದು, ಕೊಡವ ಭಾಷೆ, ಸಂಸ್ಕೃತಿ, ಸಂಪ್ರದಾಯ, ಪರಂಪರೆ, ಜಲ, ಪರಿಸರ ಮತ್ತು ಕೊಡವ ಭೂಮಿಯ ರಕ್ಷಣೆಗಾಗಿ ಸಿಎನ್‌ಸಿ ಸಂಘಟನೆ ಕಳೆದ 35 ವರ್ಷಗಳಿಂದ ಶಾಂತಿಯುತ ಹೋರಾಟಗಳನ್ನು ನಡೆಸಿಕೊಂಡು ಬಂದಿದೆ. ಸಾಂವಿಧಾನಿಕ ಹಕ್ಕಾಗಿರುವ ಕೊಡವಲ್ಯಾಂಡ್ ನ ಬೇಡಿಕೆಯನ್ನು ಮುಂದಿಟ್ಟುಕೊಂಡು ಸರಕಾರದ ಗಮನ ಸೆಳೆಯುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ. ಕೊಡವರ ಈ ಬೇಡಿಕೆ ಈಡೇರಿದಾಗ ಮಾತ್ರ ಸ್ವಾತಂತ್ರ್ಯೋತ್ಸವದ ಸಂಭ್ರಮ ಇಮ್ಮಡಿಯಾಗಲು ಸಾಧ್ಯ ಎಂದು ಎನ್.ಯು.ನಾಚಪ್ಪ ಅಭಿಪ್ರಾಯಪಟ್ಟರು. ಪ್ರಮುಖರಾದ ಮಣವಟ್ಟಿರ ಚಿಣ್ಣಪ್ಪ, ಪುಟ್ಟಿಚಂಡ ದೇವಯ್ಯ, ಪುದಿಯೊಕ್ಕಡ ಕಾಶಿ ಮತ್ತಿತರರು ಉಪಸ್ಥಿತರಿದ್ದರು. ರಾಷ್ಟ್ರಧ್ವಜಕ್ಕೆ ಗೌರವ ಅರ್ಪಿಸಿ ರಾಷ್ಟ್ರಗೀತೆಯನ್ನು ಹಾಡಲಾಯಿತು.