ಕದಿರು ತೆಗೆಯುವ ಮೂಲಕ ಪುತ್ತರಿ ನಮ್ಮೆಯನ್ನು ಸಂಭ್ರಮದಿಂದ ಆಚರಿಸಿ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ 32ನೇ ವರ್ಷದ ಸಾರ್ವತ್ರಿಕ ‘ಪುತ್ತರಿ ನಮ್ಮೆ’ಯನ್ನು ಆದಿಮಸಂಜಾತ ಆನಿಮಿಸ್ಟಿಕ್ ನಂಬಿಗೆಯ ಏಕ ಜನಾಂಗೀಯ ಕೊಡವರ ಸಕಲ ಜನಪದ ಪರಂಪರೆಯಂತೆ ಬೆಳಗ್ಗೆ ಹೋಬಳಿಯ "ಪತ್ತ್ ಕಟ್ " ನಾಡ್ ನ ಬಿಳೂರು ಗ್ರಾಮದಲ್ಲಿ ಆಚರಿಸಲಾಯಿತು.ಬಿಳೂರು ಗ್ರಾಮದ ಕಾಂಡೇರ ಸುರೇಶ್ ಅವರ ಬತ್ತದ ಗದ್ದೆಯಲ್ಲಿ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಕದಿರು ತೆಗೆಯುವ ಮೂಲಕ ‘ಪುತ್ತರಿ ನಮ್ಮೆ’ಯನ್ನು ಸಂಭ್ರಮದಿಂದ ಆಚರಿಸಿ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು.ದುಡಿಕೊಟ್ಟ್-ಪಾಟ್ ಮೂಲಕ ಗದ್ದೆಗೆ ಮೆರವಣಿಗೆಯಲ್ಲಿ ತೆರಳಿ ಗಾಳಿಯಲ್ಲಿ ಗುಂಡುಹಾರಿಸುವ ಮೂಲಕ ಕದಿರು ತೆಗೆಯಲಾಯಿತು. ಕೊಡವ ಆಟ್-ಪಾಟ್ ನಡೆಯಿತು. ಅಂತಿಮವಾಗಿ ಮಾನವ ಸರಪಳಿ ಮೂಲಕ ಕೊಡವ ಲ್ಯಾಂಡ್, ವಿಶ್ವ ರಾಷ್ಟ್ರ ಸಂಸ್ಥೆಯ ಘೋಷಣೆಯ ಪ್ರಕಾರ ಅತ್ಯಂತ ಸಣ್ಣ ಪ್ರಾಚೀನ ಬುಡಕಟ್ಟಾದ ಕೊಡವರಿಗೆ ಅಂತರರಾಷ್ಟ್ರೀಯ ಕಾನೂನಡಿಯಲ್ಲಿ ಭದ್ರತೆ ಮತ್ತು ರಾಜ್ಯಾಂಗ ಖಾತ್ರಿಗಾಗಿ ಸೂರ್ಯ-ಚಂದ್ರ, ಜಲದೇವಿ ಕಾವೇರಿ, ಸಂವಿಧಾನ ಮತ್ತು ಗುರು-ಕಾರೋಣರ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಪುತ್ತರಿ ನಮ್ಮೆ ದಿನದಂದು, ಕೊಡವ ನ್ಯಾಷನಲ್ ಕೌನ್ಸಿಲ್ ಕೊಡಗಿನ ಹೊರಗೆ ಪಸರಿಸಿರುವ ಕೊಡವರು ಸೇರಿದಂತೆ ಎಲ್ಲಾ ಕೊಡವರ ಯೋಗಕ್ಷೇಮ, ಸಮೃದ್ಧಿ ಮತ್ತು ನೆಮ್ಮದಿಯ ಬದುಕಿಗಾಗಿ ಪ್ರಾರ್ಥಿಸಿದರು.ಎನ್.ಯು.ನಾಚಪ್ಪ ಅವರು ಮಾತನಾಡಿ ಆದಿಮಸಂಜಾತ, ಆ್ಯನಿಮಿಸ್ಟಿಕ್ ನಂಬಿಗೆಯ ಏಕ ಜನಾಂಗೀಯ ಕೊಡವರ ಎಲ್ಲಾ ಹಬ್ಬಗಳು ಮಾತೃ ಭೂಮಿ, ಭೂದೇವಿ, ಪ್ರಕೃತಿ ದೇವಿ, ದೈವಿಕ ಜಲದೇವಿ ಕಾವೇರಿ, ಸೂರ್ಯ-ಚಂದ್ರ, ಯೋಧ ಪರಂಪರೆ ಬೇಟೆಯ ಕೌಶಲ್ಯ, ಮಂದ್, ಜನಾಂಗೀಯ ಧಾರ್ಮಿಕ "ಸಂಸ್ಕಾರ ಗನ್, ಆಯುಧ ", ಗೆಜ್ಜೆತಂಡ್ ಮತ್ತು ಕೃಷಿ ಪ್ರವೃತ್ತಿಗಳ ಸುತ್ತ ಸುತ್ತುತ್ತವೆ. ಕೊಡವ ಹಬ್ಬಗಳನ್ನು ನಿರ್ಧರಿಸುವಾಗ ಕೊಡವ ಸಂಸ್ಕೃತಿಯಲ್ಲಿ ಮೂಢನಂಬಿಕೆಗೆ ಅವಕಾಶವಿಲ್ಲ. ನಮ್ಮ ಪೂಜ್ಯ ಪೂರ್ವಜರು (ಕಾರೋಣರು) ಕುಲ ಪಿತಾಮರು ರೂಪಿಸಿದ ಈಗಾಗಲೇ ಅಲಿಖಿತ ಮೌಖಿಕ ಕೊಡವ ಜಾನಪದ - ಕಾನೂನು ವ್ಯವಸ್ಥೆಗಳು ಮತ್ತು ನಮ್ಮ ಆಚರಣೆಗಳನ್ನು ಬಹಳ ಹಿಂದೆಯೇ ರೂಪಿಸಿದ್ದಾರೆ. ಇದು ಪೀಳಿಗೆಯಿಂದ ಇಂದಿನವರೆಗೆ ನಮಗೆ ರವಾನಿಸಲ್ಪಟ್ಟಿದೆ. ಅದರಂತೆ ನಮ್ಮ ಹಿರಿಯರು ಹುಣ್ಣಿಮೆಯ ಚಕ್ರದಂತೆ ಹಬ್ಬಗಳನ್ನು ನಿರ್ಧರಿಸುತ್ತಾರೆ.ನಮಗೆ ಯಾವುದೇ ಧಾರ್ಮಿಕ ಕ್ರಿಯೆಯ ಏಜೆಂಟ್ ಗಳ ಅಗತ್ಯವಿಲ್ಲ. ಕೊಡವರು ನೇರವಾಗಿ ಪ್ರಕೃತಿಯ ಚಕ್ರದ ಮೂಲಕ ಸರ್ವಶಕ್ತ ಮತ್ತು ದೈವಿಕತೆಯೊಂದಿಗೆ ಮಾತನಾಡುತ್ತಾರೆ. ಕೊಡವರು ತಾವೇ ತಮ್ಮ ಜನಪದ ಆಚರಣೆಗಳನ್ನು ನಿರ್ಧರಿಸುತ್ತಾರೆ ಮತ್ತು ಪ್ರಚಾರ ಮಾಡುತ್ತಾರೆ ಎಂದು ಇದೇ ಸಂದರ್ಭ ಪ್ರತಿಪಾದಿಸಿದರು. ಪುತ್ತರಿ ಹಬ್ಬವು ಆದಿಮಸಂಜಾತ ಕೊಡವ ಜನಾಂಗೀಯ ಹಬ್ಬಗಳ ಕ್ಯಾಲೆಂಡರ‍್ಗಳಲ್ಲಿ ಪ್ರಮುಖ ಹಬ್ಬವಾಗಿದೆ. ಪುತ್ತರಿ ಕೊಡವ ಜನಾಂಗದ ಕೊಯ್ಲು ಹಬ್ಬ. ಪುತ್ತರಿ ಎಂಬುದು ತಮಿಳು ಕ್ಯಾಲೆಂಡರ‍್ನ ಪೊಂಗಲ್ ಮತ್ತು ಸಿಖ್ಖರ ಬೈಸಾಕಿಯಂತೆ. ಪುತ್ತರಿಯು ಗದ್ದೆಯಿಂದ ಹೊಸ ಅಕ್ಕಿ/ಭತ್ತವನ್ನು ಅಂದರೆ ಆಹಾರ ಧಾನ್ಯವನ್ನು ಮನೆಗೆ ಸ್ವಾಗತಿಸುವುದನ್ನು ಸಂಕೇತಿಸುತ್ತದೆ. ಇದು ಸಮೃದ್ಧಿಯ ಸಂಕೇತವಾಗಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು.

ಕಾರ್ಯಕ್ರಮದಲ್ಲಿ ಕಲಿಯಂಡ ಮೀನಾ ಪ್ರಕಾಶ್, ಕಲಿಯಂಡ ಪ್ರಕಾಶ್, ಕಾಂಡೇರ ಸುರೇಶ್, ಬೇಪಡಿಯಂಡ ದಿನು, ಅರೆಯಡ ಗಿರೀಶ್, ನಂದೆಟ್ಟಿರ ರವಿ ಸುಬ್ಬಯ್ಯ, ಚಂಬಂಡ ಜನತ್, ಕಿರಿಯಮಾಡ ಶೆರಿನ್, ಕಿರಿಯಮಾಡ ಶಾನ್, ಬೊಟ್ಟಂಗಡ ಗಿರೀಶ್, ಅಪ್ಪೆಂಗಡ ಮಾಲೆ ಪೂಣಚ್ಚ, ಚೊಕ್ಕಂಡ ಕಟ್ಟಿ ಪಳಂಗಪ್ಪ, ಪಾರ್ವಂಗಡ ನವೀನ್, ಜಮ್ಮಡ ಮೋಹನ್, ಮದ್ರೀರ ಕರುಂಬಯ್ಯ, ಆದೇಂಗಡ ರಾಣ ಬೋಪಣ್ಣ, ಆದೇಂಗಡ ಸಾಬು ಕಾಳಪ್ಪ, ಕಾಂಡೇರ ಜಿಮ್ಮಿ ಉತ್ತಪ್ಪ ಮತ್ತಿತರರು ಪಾಲ್ಗೊಂಡಿದ್ದರು.