ಸಾರಾಂಶ
ಕೊಡವ ಬುಡಕಟ್ಟು ಜನಾಂಗದ ಎಡ್‌ಮ್ಯಾರ್ 1ಹೊಸ ವರ್ಷಾಚರಣೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಬೇಂಗ್ ನಾಡಿನ ಬೆಟ್ಟತ್ತೂರು ಗ್ರಾಮದಲ್ಲಿ ಚಾಲನೆ ನೀಡಿತು.
ಕನ್ನಡಫ್ರಭ ವಾರ್ತೆ ಮಡಿಕೇರಿ
ಕೊಡವ ಬುಡಕಟ್ಟು ಜನಾಂಗದ ಎಡ್‌ಮ್ಯಾರ್ 1 ಹೊಸ ವರ್ಷಾಚರಣೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಬೇಂಗ್ ನಾಡಿನ ಬೆಟ್ಟತ್ತೂರು ಗ್ರಾಮದಲ್ಲಿ ಭಾನುವಾರ ಉಳುಮೆ ಮಾಡುವ ಮೂಲಕ ಚಾಲನೆ ನೀಡಿತು.ಗ್ರಾಮದ ಕೃಷಿಕ ಕೂಪದಿರ ಎನ್.ಮೋಹನ್ ಅವರ ಗದ್ದೆಯಲ್ಲಿ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಜೋಡೆತ್ತು ಕೆಂಪಯ್ಯ ಹಾಗೂ ಕರಿಯನ ಮೂಲಕ ಗದ್ದೆ ಉಳುಮೆ ಮಾಡಿ ಭೂಮಿಗೆ ನಮನ ಸಲ್ಲಿಸಿದರು.
ಎಡ್‌ಮ್ಯಾರ್ 1 ಏ.14 ರಂದು ಆದರೂ ಕೊಡವ ಸಂಪ್ರದಾಯದಂತೆ ಕೊಡವರು ಸೋಮವಾರದಂದು ಎತ್ತುಗಳಿಂದ ಉಳುಮೆ ಮಾಡುವುದಿಲ್ಲ. ಈ ಕಾರಣಕ್ಕಾಗಿ ಒಂದು ದಿನ ಮುಂಚಿತವಾಗಿ ಉಳುಮೆ ಮಾಡಿ ಕೊಡವ ಬುಡಕಟ್ಟು ಜನಾಂಗ ಭೂಮಿ ಮತ್ತು ಪ್ರಕೃತಿಯೊಂದಿಗೆ ಹೊಂದಿರುವ ಅವಿನಾಭಾವ ಸಂಬಂಧದ ಕುರಿತು ಸಾಕ್ಷೀಕರಿಸಲಾಯಿತು ಎಂದು ಎನ್.ಯು.ನಾಚಪ್ಪ ತಿಳಿಸಿದರು.ಕೊಡವ ಬುಡಕಟ್ಟು ಜನರು ಸೌರ ಕ್ಯಾಲೆಂಡರನ್ನು ಅನುಸರಿಸುತ್ತಾರೆ. ಹೊಸ ವರ್ಷದ ಎಡ್‌ಮ್ಯಾರ್ 1 ಸೇರಿದಂತೆ ಕೊಡವರ ಸಾಂಪ್ರದಾಯಿಕ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸುವ ಮೂಲಕ ವಿಶಿಷ್ಟ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸವನ್ನು ಸಿಎನ್‌ಸಿ ಸಂಘಟನೆ ಮಾಡಿಕೊಂಡು ಬರುತ್ತಿದೆ ಎಂದರು.
ಕೊಡವ ಬುಡಕಟ್ಟಿನ ‘ಕೊಡವ’ ಮಾತೃಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‌ನಲ್ಲಿ ಅಳವಡಿಸಬೇಕು. ಕೊಡವ ಸಂಸ್ಕೃತಿ-ಜಾನಪದ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಗಳ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ಧಾರ್ಮಿಕ ‘ಸಂಸ್ಕಾರ’ ಗನ್ ವಿನಾಯಿತಿ ಸವಲತ್ತು ಮುಂದುವರಿಯಬೇಕು ಮತ್ತು ಸಿಖ್ಖರ ಕಿರ್ಪಾನ್ ಮಾದರಿಯಲ್ಲಿ ಸಂವಿಧಾನದ 25 ಮತ್ತು 26ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಬೇಕು.ಕೂಪದಿರ ಒಕ್ಕದ ಅಧ್ಯಕ್ಷೆ ಕೂಪದಿರ ಪುಷ್ಪಾ ಮುತ್ತಪ್ಪ, ಕೂಪದಿರ ಗಂಗವ್ವ, ಕೂಪದಿರ ಕಾವೇರಿಯಮ್ಮ, ಕೂಪದಿರ ಭವ್ಯಾ ಮಾಚಯ್ಯ, ಕೂಪದಿರ ನಯನಾ ಯಶವಂತ, ಪಟ್ಟಮಾಡ ಕುಶ, ಕೂಪದಿರ ಮೋಹನ್, ಮಂದಪಂಡ ಮನೋಜ್, ರೋಷನ್, ಕೂಪದಿರ ಪ್ರಣಾಮ್, ಯಶವಂತ ಕುಮಾರ್ ಮತ್ತಿತರರು ಗದ್ದೆ ಉಳುಮೆ ಸಂದರ್ಭ ಹಾಜರಿದ್ದರು.