ಕಡಂಗದಲ್ಲಿ ಸಿಎನ್‌ಸಿಯಿಂದ ಮಾನವ ಸರಪಳಿ ನಿರ್ಮಿಸಿ ಹಕ್ಕೊತ್ತಾಯ ಮಂಡನೆ

| Published : Apr 14 2025, 01:16 AM IST

ಸಾರಾಂಶ

ಕೊಡವ ನ್ಯಾಷನಲ್‌ ಕೌನ್ಸಿಲ್‌ ಸಂಘಟನೆ ಕಡಂಗದಲ್ಲಿ ಮಾನವ ಸರಪಳಿ ರಚಿಸಿ ಹಕ್ಕೊತ್ತಾಯವನ್ನು ಮಂಡಿಸಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಿಕ್ಕಿಂನ ಬೌದ್ಧ ಭಿಕ್ಷುಗಳಿಗೆ ನೀಡಿರುವ ಸಂಘ ವರ್ಚುವಲ್, ಅಮೂರ್ತ (ಅದೃಶ್ಯ) ಕ್ಷೇತ್ರದ ರೀತಿಯಲ್ಲಿ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಆದಿಮಸಂಜಾತ ಕೊಡವರಿಗೆ ಕೂಡ ವಿಶೇಷ ಪ್ರಾತಿನಿಧ್ಯ ಅಥವಾ ಪರ್ಯಾಯವಾಗಿ ಪ್ರತ್ಯೇಕ ಲೋಕಸಭೆ ಮತ್ತು ವಿಧಾನಸಭೆಯ ಕೊಡವ ಮತ ಕ್ಷೇತ್ರವನ್ನು ರಚಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕಡಂಗದಲ್ಲಿ ಮಾನವ ಸರಪಳಿ ರಚಿಸಿ ಹಕ್ಕೊತ್ತಾಯವನ್ನು ಮಂಡಿಸಿತು.

ಸಂಸತ್ತು ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ಪ್ರಾತಿನಿಧ್ಯ ಕಲ್ಪಿಸಬೇಕು, ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ಘೋಷಿಸಬೇಕು, ಎಸ್‌ಟಿ ಟ್ಯಾಗ್ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಪರ ಘೋಷಣೆಗಳನ್ನು ಕೂಗಿದ ಸಿಎನ್‌ಸಿ ಸದಸ್ಯರು ಆದಿಮಸಂಜಾತ ಕೊಡವರ ಪ್ರಗತಿ ಹಾಗೂ ರಕ್ಷಣೆಗಾಗಿ ಸಂವಿಧಾನಬದ್ಧ ಹಕ್ಕುಗಳನ್ನು ಸರ್ಕಾರ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.

ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಕೊಡವರು ಬೇರೆಯೇ ರೇಸ್/ ಮೂಲ ವಂಶಸ್ಥ ಜನಾಂಗವಾಗಿದ್ದು, ಅವರ ಸ್ವತಂತ್ರ ಅಸ್ತಿತ್ವ ಮತ್ತು ವ್ಯಕ್ತಿತ್ವವನ್ನು ಗುರುತಿಸಿ 1871-72 ರಿಂದ 1931ರ ವರೆಗೆ ನಡೆಸಿದ ಜನಗಣತಿಯನ್ನು ಪುನರ್ ಮಾನದಂಡಗೊಳಿಸಿ ಕೊಡವರಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದರು.

ವಿಧಾನಸಭೆ ಮತ್ತು ಸಂಸತ್ ಕ್ಷೇತ್ರಗಳ ಪುನರ್ ಪರಿಶೀಲನೆ, ಪುನರ್ ವ್ಯಾಖ್ಯಾನಕ್ಕಾಗಿ ನಡೆಯುತ್ತಿರುವ ಗಡಿ ರಚನಾ ಪ್ರಕ್ರಿಯೆಯಿಂದ ಕೊಡವ ಸಮುದಾಯದ ಹಿತಾಸಕ್ತಿಗಳಿಗೆ ಧಕ್ಕೆಯಾಗಬಹುದು. ಮೂವರು ಪ್ರಭಾವಿ ರಾಜಕಾರಣಿಗಳು ಸುಳ್ಯದಲ್ಲಿನ ತಮ್ಮ ಭದ್ರಕೋಟೆಯನ್ನು ಕೊಡವಲ್ಯಾಂಡ್‌ನೊಂದಿಗೆ ವಿಲೀನಗೊಳಿಸುವ ಒಳಸಂಚು ರೂಪಿಸಿದ್ದು, ಈ ಪ್ರಯತ್ನದಿಂದಾಗಿ ಸಂಸತ್ ಮತ್ತು ವಿಧಾನಸಭೆಯಲ್ಲಿ ಆದಿಮಸಂಜಾತ ಕೊಡವರ ಪ್ರಾತಿನಿಧ್ಯವನ್ನು ದುರ್ಬಲಗೊಳಿಸಬಹುದು ಎಂದು ಆರೋಪಿಸಿದರು.

ಪಟ್ಟಚೆರುವಂಡ ಸ್ವಪ್ನ, ಕುಮಾರಿ ಪಟ್ಟಚೆರುವಂಡ ಪ್ರಗತಿ ಪೊನ್ನಣ್ಣ, ಕೋಡಿರ ದಿನಾ ಪೊನ್ನಮ್ಮ, ಪಾಂಡಂಡ ಕಿಟ್ಟು, ಬೇಪಡಿಯಂಡ ದಿನು, ಬೇಪಡಿಯಂಡ ಬಿದ್ದಪ್ಪ, ಕೋಡಿರ ವಿನೋದ್ ನಾಣಯ್ಯ, ನೆರ್ಪಂಡ ಹರ್ಷ, ನೆರ್ಪಂಡ ಜಿಮ್ಮಿ, ಉದಿಯಂಡ ಚಂಗಪ್ಪ, ಬಲ್ಲಚಂಡ ರವಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.