ಅತಿ ಸೂಕ್ಷ್ಮ ಏಕ-ಜನಾಂಗೀಯ ಆನಿಮಿಸ್ಟಿಕ್ ನಂಬಿಕೆಯ ಆದಿಮಸಂಜಾತ ಸಮುದಾಯವಾದ ಕೊಡವರನ್ನೊಳಗೊಂಡ ಪರಿಪೂರ್ಣ ಗಣರಾಜ್ಯವನ್ನು ರಚಿಸಬೇಕು ಮತ್ತು ಕೊಡವರ 10 ಕಾನೂನುಬದ್ಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಸತ್ಯಾಗ್ರಹ ನಡೆಸಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಅತಿ ಸೂಕ್ಷ್ಮ ಏಕ-ಜನಾಂಗೀಯ ಆನಿಮಿಸ್ಟಿಕ್ ನಂಬಿಕೆಯ ಆದಿಮಸಂಜಾತ ಸಮುದಾಯವಾದ ಕೊಡವರನ್ನೊಳಗೊಂಡ ಪರಿಪೂರ್ಣ ಗಣರಾಜ್ಯವನ್ನು ರಚಿಸಬೇಕು ಮತ್ತು ಕೊಡವರ 10 ಕಾನೂನುಬದ್ಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಸತ್ಯಾಗ್ರಹ ನಡೆಸಿತು.ಸತ್ಯಾಗ್ರಹದ ನೇತೃತ್ವ ವಹಿಸಿದ್ದ ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಕೇಂದ್ರದ ಗೃಹಸಚಿವರಿಗೆ ಸಲ್ಲಿಸಿದರು.ಸಂವಿಧಾನದ 5, 6 ಮತ್ತು 8ನೇ ಪರಿಚ್ಛೇದಗಳೊಂದಿಗೆ 244ನೇ ಮತ್ತು 371ನೇ ವಿಧಿಯ ಅಡಿಯಲ್ಲಿ ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯನ್ನು ರಚಿಸಬೇಕು. ಸ್ವ-ಆಡಳಿತ, ಸ್ವ-ನಿರ್ಣಯ ಹಕ್ಕುಗಳು, ಆದಿಸಮಸಂಜಾತ ಕೊಡವರಿಗೆ ವಿಶ್ವ ರಾಷ್ಟ್ರ ಸಂಸ್ಥೆಯ ಮಾನ್ಯತೆ ಕಲ್ಪಿಸಬೇಕು. ಸೂಕ್ಷ್ಮ ಆದಿಮಸಂಜಾತ ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವ ಜನಾಂಗಕ್ಕೆ ಈಶಾನ್ಯ ಭಾರತದ ಎಥ್ನಿಕ್ ಕೂಟಕ್ಕೆ ಕೊಡಮಾಡಲಾದ ಎಸ್‌ಟಿ ನಮೂನೆಯ ರಾಜ್ಯಾಂಗ ಖಾತ್ರಿ ಅಡಿಯಲ್ಲಿ ವರ್ಗೀಕರಣ ನೀಡಬೇಕು. ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ಅತ್ಯಗತ್ಯ ಧಾರ್ಮಿಕ ಚಟುವಟಿಕೆಯಾಗಿ ರಕ್ಷಿಸಬೇಕಾದ ಕೊಡವ ಸ್ಯಾಕ್ರಮೆಂಟ್ ಗನ್-ತೋಕ್ ಹಕ್ಕುಗಳನ್ನು ಗೌರವಿಸಬೇಕು. ಸಂವಿಧಾನದ 8ನೇ ಪರಿಚ್ಛೇದದಲ್ಲಿ ಕೊಡವ ಮಾತೃಭಾಷೆ ‘ಕೊಡವ ತ್ತಕ್’ಅನ್ನು ಸೇರಿಸಬೇಕು. ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯಲ್ಲಿ ಸೊಗಸಾದ ಕೊಡವ ಸಾಂಸ್ಕೃತಿಕ ಪರಂಪರೆಯನ್ನು ಸೇರಿಸಬೇಕು, ತಲಕಾವೇರಿಯನ್ನು ಯಹೂದಿಗಳ ದೇವನೆಲೆಯಾದ ಮೌಂಟ್ ಮೊರಿಯಾಕ್ಕೆ ಸಮಾನವಾಗಿ ಕೊಡವ ಪವಿತ್ರ ತೀರ್ಥ ಯಾತ್ರಾ ಸ್ಥಳವೆಂದು ಘೋಷಿಸಬೇಕು ಮತ್ತು 1966ರ ಹೆಲ್ಸಿಂಕಿ ನಿಯಮದಡಿ ಕೊಡವ ಲ್ಯಾಂಡ್‌ಗೆ ವಿತರಿಸಬೇಕಾದ ಕಾವೇರಿ ನದಿ ನೀರಿನ ಪಾಲನ್ನು ನೀಡಬೇಕು, ಸಂವಿಧಾನದ 49ನೇ ವಿಧಿ ಮತ್ತು ವಿಶ್ವಸಂಸ್ಥೆ ರೂಪಿಸಿದ 1964ರ ವೆನಿಸ್ ಚಾರ್ಟರ್ ಅಡಿಯಲ್ಲಿ ದೇವಾಟ್‌ಪರಂಬ್, ಮಡಿಕೇರಿ ಕೋಟೆ, ನಾಲ್ನಾಡ್ ಅರಮನೆ, ಕೊಡವ ನರಮೇಧ ಸ್ಮಾರಕಗಳನ್ನು ಮತ್ತು ಉಲುಗುಲಿ, ಮುಳ್ಳುಸೋಗೆ ಮತ್ತು ಲಕ್ಡಿಕೋಟೆಯಲ್ಲಿ ಕೊಡವ ಯುದ್ಧ ಸ್ಮಾರಕಗಳನ್ನು ನಿರ್ಮಿಸಬೇಕು. ಕೊಡವ ಲ್ಯಾಂಡ್‌ನಲ್ಲಿ ದೊಡ್ಡ ಪ್ರಮಾಣದ ಒಳ ನುಸುಳುವಿಕೆ ಮತ್ತು ಜನಸಂಖ್ಯಾ ಬದಲಾವಣೆಯನ್ನು ತಡೆಗಟ್ಟಲು ಇನ್ನರ್ ಲೈನ್ ಪರ್ಮಿಟ್ ಅನ್ನು ನಮ್ಮ ಸಂವಿಧಾನದ 371ನೇ ವಿಧಿಯ ಅಡಿಯಲ್ಲಿ ತರಬೇಕು ಎಂದು ಒತ್ತಾಯಿಸಲಾಯಿತು. ಆದಿಮಸಂಜಾತ ಕೊಡವ ಸಮುದಾಯದ ಹಕ್ಕುಗಳು ಮತ್ತು ಘನತೆಯನ್ನು ಖಾತ್ರಿಪಡಿಸುವ ಮೂಲಕ ಈ ಹಕ್ಕೊತ್ತಾಯಗಳನ್ನು ತ್ವರಿತವಾಗಿ ಪರಿಗಣಿಸುವಂತೆ ಸಿಎನ್‌ಸಿ ಸರ್ಕಾರವನ್ನು ಒತ್ತಾಯಿಸುತ್ತದೆ. ಕೊಡವ ಧ್ವನಿಯನ್ನು ಆಲಿಸುವ ಮತ್ತು ಮೌಲ್ಯಯುತವಾದ ನಿಜವಾದ ಅಂತರ್ಗತ ಒಳಗೊಳ್ಳುವಿಕೆಯ ಗಣರಾಜ್ಯವನ್ನು ಸಾಕಾರಗೊಳಿಸಲು ಕೈಜೋಡಿಸುವಂತೆ ಕೊಡವ ನ್ಯಾಷನಲ್ ಕೌನ್ಸಿಲ್ ಈ ರಾಷ್ಟ್ರದ ಮತ್ತು ವಿಶ್ವದ ಸರ್ವೋಚ್ಛ ಆಡಳಿತಾಂಗಕ್ಕೆ ಮನವಿ ಮಾಡುತ್ತದೆ ಎಂದು ತಿಳಿಸಿದರು.

ಕಲಿಯಂಡ ಮೀನಾ ಪ್ರಕಾಶ್, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಪುಲ್ಲೇರ ಸ್ವಾತಿ ಕಾಳಪ್ಪ, ಚೋಳಪಂಡ ಜ್ಯೋತಿ ನಾಣಯ್ಯ, ಪಟ್ಟಮಾಡ ಲಲಿತಾ ಗಣಪತಿ, ಮುದ್ದಿಯಡ ಲೀಲಾವತಿ, ಪಚ್ಚಾರಂಡ ಶಾಂತಿ ಪೊನ್ನಪ, ಕಲಿಯಂಡ ಪ್ರಕಾಶ್, ಪುಲ್ಲೇರ ಕಾಳಪ್ಪ, ಅಜ್ಜಿಕುಟ್ಟೀರ ಲೋಕೇಶ್, ಕಿರಿಯಮಾಡ ಶೆರಿನ್, ಬೊಟ್ಟಂಗಡ ಗಿರೀಶ್ ಪೆಮ್ಮಯ್ಯ, ಮಂದಪಂಡ ಮನೋಜ್ ಮಂದಣ್ಣ, ಮಣವಟ್ಟಿರ ಚಿಣ್ಣಪ್ಪ, ಕೂಪದಿರ ಸಾಬು, ನಂದೇಟ್ಟಿರ ರವಿ ಸುಬ್ಬಯ್ಯ, ಚಂಙಂಡ ಚಾಮಿ ಪಳಂಗಪ್ಪ, ನಂದಿನೆರವಂಡ ವಿಜು, ಚೋಳಪಂಡ ನಾಣಯ್ಯ, ಮೇದುರ ಕಂಠಿನಾಣಿಯಪ್ಪ, ತೋಲಂಡ ಸೋಮಯ್ಯ, ಅವರೇಮಾದಂಡ ಚೆಂಗಪ್ಪ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.