ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಅಬ್ದುಲ್ ಕಲಾಂ, ವಿಶ್ವೇಶ್ವರಯ್ಯ, ಅಂಬೇಡ್ಕರ್ ರಂತಹ ಮಹನೀಯರನ್ನು ಆದರ್ಶವಾಗಿಟ್ಟುಕೊಂಡು ಹಿಂದೆ ಗುರು ಮುಂದೆ ಗುರಿ ಇಟ್ಟುಕೊಂಡು ಛಲದಿಂದ ಸಾಧನೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಕರೆ ನೀಡಿದರು.ಸಿ.ಎನ್.ಎಂ. ಪಿ.ಯು. ಕಾಲೇಜು ಹಾಗೂ ವೈಬ್ರೆಂಟ್ ಅಕಾಡೆಮಿ ಮೂಡಬಿದರೆ ವತಿಯಿಂದ ಮಹಾದೇವಪುರದಲ್ಲಿರುವ ಸಿ.ಎನ್.ಎಂ. ಪಬ್ಲಿಕ್ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಸಿಎನ್.ಎಂ ಪಿ.ಯು. ಕಾಲೇಜಿನ ವಿದ್ಯಾರ್ಥಿನಿ ಟಿ.ಎಂ. ಐಶ್ವರ್ಯ ಅವರು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 600ಕ್ಕೆ 589 ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುವ ಹಿನ್ನೆಲೆಯಲ್ಲಿ ಅಭಿನಂದಿಸಿದ ಅವರು ಮಾತನಾಡಿದರು.ಗುಂಡ್ಲುಪೇಟೆಯ ಮಂಜು ಹಾಗೂ ಭಾಗ್ಯ ಅವರ ಪುತ್ರಿಯಾದ ಐಶ್ವರ್ಯ ಅವರು ನಮ್ಮ ಕಾಲೇಜಿನಿ ಹೆಮ್ಮೆಯ ವಿದ್ಯಾರ್ಥಿನಿಯಾಗಿದ್ದು, ಉತ್ತಮ ಅಂಕಗಳನ್ನು ಪಡೆದಿದ್ದಾಳೆ. ಮುಂದಿನ ವರ್ಷದಲ್ಲಿ ಐಶ್ವರ್ಯಳನ್ನು ಮಾದರಿಯಾಗಿಟ್ಟುಕೊಂಡು ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಲು ಪ್ರಯತ್ನಿಸಬೇಕು. ಮನುಷ್ಯ ಈ ಭೂಮಿ ಮೇಲೆ ಹುಟ್ಟಿದ ಮೇಲೆ ಏನಾದರೂ ಗುರುತು ಬಿಟ್ಟು ಹೋಗಬೇಕು. ಒಳ್ಳೆಯ ಸ್ನೇಹಿತರ ಸಹವಾಸ ಮಾಡಬೇಕು. ತಂದೆ, ತಾಯಿಯವರ, ಶಿಕ್ಷಕರ ಮಾರ್ಗದರ್ಶನ ಪಡೆದುಕೊಂಡು ಚೆನ್ನಾಗಿ ಓದಿ ಕೆಎಎಸ್, ಐಎಎಸ್, ಐಪಿಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಆಯ್ಕೆಯಾಗಿ ಈ ನಾಡಿಗೆ ಈ ದೇಶಕ್ಕೆ ಸೇವೆ ಸಲ್ಲಿಸಬೇಕು ಎಂದರು.ಸಂಸ್ಥೆಯ ಕಾರ್ಯದರ್ಶಿ ಭರತ್ ಮಂಜೇಗೌಡ, ಸುಭಾಶ್ ಜಾ, ಪ್ರಾಂಶುಪಾಲ ಕೆ.ಎನ್. ನಾಗೇಶ್, ಶಾರದಾ ಪ್ರಸಾದ್, ರಾಜೀವ್, ರಾಜಶೇಖರಮೂರ್ತಿ ಇದ್ದರು.