ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್‌ ಅಧ್ಯಕ್ಷ ದೊಡ್ಡಸ್ವಾಮೇ ಗೌಡ ಕಳಕಳಿ

---

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಹಕಾರ ಕ್ಷೇತ್ರ ವಿಸ್ತಾರವಾದ ಕ್ಷೇತ್ರವಾಗಿದ್ದು, ಸಾಲ ಪಡೆದವರು ಸಂಘಕ್ಕೆ ಮರುಪಾವತಿ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಹಾಗಾದಾಗ ಅವುಗಳು ಬೆಳವಣಿಗೆ ಹೊಂದುತ್ತವೆ ಎಂದು ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇ ಗೌಡ ಹೇಳಿದರು.

ನಗರದ ಶಿವಕುಮಾರ ಸ್ವಾಮಿ ಭವನದಲ್ಲಿ ನಡೆದ ಜಿಲ್ಲಾ ಭಗೀರಥ ಅಭಿವೃದ್ಧಿ ಸಹಕಾರ ಸಂಘದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.


೧೧೩ ವರ್ಷಗಳ ಹಿಂದೆ ಗದಗ ಜಿಲ್ಲೆಯ ಕಣಗಿನಹಾಳದ ಸಣ್ಣರಾಮನ ಗೌಡ ಸಿದ್ದನಗೌಡ ಅವರು ಸಣ್ಣ ಪ್ರಮಾಣದಲ್ಲಿ ಸಹಕಾರ ಸಂಘ ಆರಂಭಿಸಿದರು. ಪ್ರಸ್ತುತ ಸಹಕಾರ ಸಂಘಗಳು ಬಲಿಷ್ಠವಾಗಿದ್ದು, ಬಡವರು, ರೈತರು, ಮಹಿಳೆಯರಿಗೆ ಸಾಲ ಕೊಡುವ ಮೂಲಕ ಅವರ ಬಾಳಿಗೆ ನೆರವಾಗಿವೆ. ಸಹಕಾರ ಸಂಘಗಳ ಶಾಖೆಗಳು ಹೆಚ್ಚಾಗಬೇಕಿದೆ ಎಂದರು.

ಮೈಸೂರು-ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಡಿ ೪೧೭ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ೩೧ ಶಾಖೆಗಳನ್ನು ಹೊಂದಿದ್ದು, ೧ ಸಾವಿರ ಕೋಟಿ ಠೇವಣಿ ಸಂಗ್ರಹವಿದ್ದು, ಇದುವರಗೆ ೨ ಸಾವಿರ ಕೋಟಿ ರು.ಸಾಲ ಒದಗಿಸಲಾಗಿದೆ. ೫ ಲಕ್ಷದವರಗೆ ಬಡ್ಡಿರಹಿತ ಸಾಲ ನೀಡಲಾಗಿದೆ. ಸಮುದಾಯದವರು ಜಿಲ್ಲಾ ಭಗೀರಥ ಅಭಿವೃದ್ಧಿ ಸಹಕಾರ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಹಕಾರ ಸಂಘದ ಅಧ್ಯಕ್ಷ, ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ಸಮುದಾಯದವರು ಈಗಲೂ ತರಕಾರಿ, ವೀಳ್ಯದೆಲೆ, ಹೂ ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಸಕಾಲದಲ್ಲಿ ಸಾಲ ನೀಡಲು ಸಹಕಾರ ಸಂಘವನ್ನು ಸ್ಥಾಪಿಸಲಾಗಿದೆ. ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಬೇಕಾದರೆ ಅವರು ಕೇಳಿದ ದಾಖಲೆ ಒದಗಿಸಬೇಕು. ಅಷ್ಟು ಸುಲಭವಾಗಿ ಸಾಲ ಸಿಗುವುದಿಲ್ಲ. ಆದರೆ ಸಹಕಾರ ಸಂಘದಲ್ಲಿ ಸಾಲ ಪಡೆಯಬೇಕಾದರೆ ಕೆಲ ದಾಖಲೆ ಕೊಟ್ಟರೇ ಸಾಕು. ಮುಖ್ಯವಾಗಿ ಸಮುದಾಯದವರು ಸಹಕಾರ ಸಂಘಗಳ ಕಾರ್ಯನಿರ್ವಹಣೆಯ ಬಗ್ಗೆ ಹೆಚ್ಚಿನ ಅರಿವು ಪಡೆಯಬೇಕು. ಸಂಘದ ಸದಸ್ಯರಾದವರು ವರ್ಷಕ್ಕೊಮ್ಮೆ ನಡೆಯುವ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ತಪ್ಪದೇ ಭಾಗವಹಿಸಬೇಕು ಎಂದರು.

ರಾಜಕೀಯ ಬೇಡ:

ಹನೂರು ಮಾಜಿ ಶಾಸಕ, ಮೈಸೂರು-ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಆರ್‌. ನರೇಂದ್ರ ಮಾತನಾಡಿ, ಸಹಕಾರ ಸಂಘಗಳು ರಾಜಕೀಯ ರಹಿತವಾಗಿ ಕೆಲಸ ಮಾಡಬೇಕು. ಉತ್ತರ ಕರ್ನಾಟಕದಲ್ಲಿ ಸಹಕಾರ ಸಂಘಗಳು ಅಭಿವೃದ್ಧಿ ಪಥದಲ್ಲಿದ್ದು, ನಮ್ಮ ಜಿಲ್ಲೆಯಲ್ಲೂ ಬೆಳವಣಿಗೆಗೆ ಆದ್ಯತೆ ನೀಡಬೇಕು ಎಂದರು. ಗುಂಡ್ಲುಪೇಟೆ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಸಂಘದ ನಾಮಫಲಕ ಅನಾವರಣ ಮಾಡಿದರು. ಚಾಮುಲ್ ನಿರ್ದೇಶಕ ಎಚ್.ಎಸ್. ನಂಜುಂಡ ಪ್ರಸಾದ್ ಮುಖ್ಯ ಭಾಷಣ ನೆರವೇರಿಸಿದರು. ಚಾಮುಲ್ ಅಧ್ಯಕ್ಷ ಎಂ. ನಂಜುಂಡಸ್ವಾಮಿ,

ಮೈಸೂರು-ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ವೈ.ಎಂ.ಜಯರಾಂ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಆರ್‌. ಜಯರಾಂ, ಕರ್ನಾಟಕ ರಾಜ್ಯ ಮೀನುಗಾರಿಕೆ ಸಹಕಾರ ಮಾರಾಟ ಮಂಡಳಿ ನಿರ್ದೇಶಕ ಲಿಂಗರಾಜು, ಜಿಪಂ ಮಾಜಿ ಸದಸ್ಯ ಯೋಗೀಶ್, ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್‌, ಲೋಕೋಪಯೋಗಿ ಇಲಾಖೆ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶಿವಕುಮಾರ್‌, ಜಿಲ್ಲಾ ಸಹಕಾರ ಸಂಘಗಳ ಉಪನಿಬಂದಕಿ ಜ್ಯೋತಿ ಅರಸ್, ಮೈಸೂರು-ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಿಇಒ ಕಾಂತರಾಜು, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸೋಮೇಶ್ವರ್‌, ಕೋಡಿಮೋಳೆ ಗೋವಿಂದಶೆಟ್ಟಿ, ಪ್ರಕಾಶ್, ಕುಸುಮರಾಜು, ತಾಪಂ ಮಾಜಿ ಸದಸ್ಯ ಪುಟ್ಟಸ್ವಾಮಿ, ರಾಜಣ್ಣ, ನಿವೃತ ಪ್ರಾಂಶುಪಾಲ ಸೋಮಣ್ಣ, ಮಲೆ ಮಹದೇಶ್ವರ ಪ್ರಾಧಿಕಾರದ ಸದಸ್ಯ ಮರಿಸ್ವಾಮಿ, ಚೂಡಾ ಸದಸ್ಯ ದ್ವಾರಕಿ, ಕೆಡಿಪಿ ಸದಸ್ಯ ಶ್ರೀನಿವಾಸ್, ಮಹದೇವ ಶೆಟ್ಟಿ, ಗೋವಿಂದಶೆಟ್ಟಿ ಸೇರಿದಂತೆ ಭಗೀರಥ ಅಭಿವೃದ್ಧಿ ಸಹಕಾರ ಸಂಘದ ಸದಸ್ಯರು, ಉಪ್ಪಾರ ಸಮಾಜದ ವಿವಿಧ ಗ್ರಾಮಗಳ ಮುಖಂಡರು, ಯಜಮಾನರು, ಗ್ರಾಮಸ್ಥರು ಹಾಜರಿದ್ದರು.

---

11ಸಿಎಚ್ಎನ್13

ಜಿಲ್ಲಾ ಭಗೀರಥ ಅಭಿವೃದ್ಧಿ ಸಹಕಾರ ಸಂಘದ ಸಮಾರಂಭವನ್ನು ಅಧ್ಯಕ್ಷ ದೊಡ್ಡಸ್ವಾಮೇಗೌಡ ಉದ್ಘಾಟಿಸಿದರು.