ಸಾರಾಂಶ
ಕಟಗಾರಕೊಪ್ಪದಂತಹ ಗ್ರಾಮೀಣ ಭಾಗದಲ್ಲಿ ಶಿವಶಾಂತಿಕಾ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಶಾಖೆ ಆರಂಭಿಸಿರುವುದು ಆಡಳಿತ ಮಂಡಳಿಗೆ ಗ್ರಾಮೀಣ ಜನತೆ ಬಗ್ಗೆ ಇರುವ ಕಳಕಳಿಗೆ ಸಾಕ್ಷಿಯಾಗಿದೆ.
ಭಟ್ಕಳ: ತಾಲೂಕಿನ ಕಟಗಾರಕೊಪ್ಪದಲ್ಲಿ ಕೋಟಖಂಡದ ಶಿವಶಾಂತಿಕಾ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಎರಡನೇ ಶಾಖೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಸಹಕಾರಿ ಸಂಘದ ಆರಂಭದಿಂದ ಅಲ್ಲಿನ ಜನತೆಗೆ ಆರ್ಥಿಕ ವ್ಯವಹಾರ ಮಾಡಲು ಅನುಕೂಲವಾಗಲಿದೆ. ಸಹಕಾರ ಸಂಘಗಳು ರಾಷ್ಟ್ರೀಕೃತ ಬ್ಯಾಂಕುಗಳಿಗಿಂತಲೂ ಉತ್ತಮ ಸೇವೆ ನೀಡುತ್ತಿದ್ದು, ಹೀಗಾಗಿಯೇ ಜನರು ಸಹಕಾರಿ ಸಂಘದತ್ತ ಮುಖ ಮಾಡಿ ಉತ್ತಮ ವ್ಯವಹಾರ ಮಾಡುತ್ತಿದ್ದಾರೆ.ಕಟಗಾರಕೊಪ್ಪದಂತಹ ಗ್ರಾಮೀಣ ಭಾಗದಲ್ಲಿ ಶಿವಶಾಂತಿಕಾ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಶಾಖೆ ಆರಂಭಿಸಿರುವುದು ಆಡಳಿತ ಮಂಡಳಿಗೆ ಗ್ರಾಮೀಣ ಜನತೆ ಬಗ್ಗೆ ಇರುವ ಕಳಕಳಿಗೆ ಸಾಕ್ಷಿಯಾಗಿದೆ. ಸಂಘ ಜನರ ಪ್ರೀತಿ, ವಿಶ್ವಾಸ ಗಳಿಸಿ ಗ್ರಾಹಕರಿಗೆ ಉತ್ತಮ ಸೇವೆ ನೀಡಲಿ ಎಂದು ಶುಭ ಹಾರೈಸಿದರು.
ಕಟಗಾರಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಸ್ತಿ ಗೊಂಡ ಮಾತನಾಡಿ, ನಮ್ಮೂರಿನಲ್ಲಿ ಸಹಕಾರಿ ಸಂಘದ ಶಾಖೆ ಆರಂಭಿಸಿರುವುದು ಜನರಿಗೆ ಆರ್ಥಿಕ ವ್ಯವಹಾರ ನಡೆಸಲು ಅನುಕೂಲವಾಗಲಿದೆ. ಸಂಸ್ಥೆ ಇಲ್ಲಿನ ಜನರ ವಿಶ್ವಾಸ ಗಳಿಸಿ ಹೆಚ್ಚಿನ ವ್ಯವಹಾರ ನಡೆಸಿ ಜನತೆಗೆ ಅನುಕೂಲ ಮಾಡಿಕೊಡಲಿ ಎಂದರು.ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ ಮಾತನಾಡಿ, ಕಟಗಾರಕೊಪ್ಪದಲ್ಲಿ ಯಾವುದೇ ಆರ್ಥಿಕ ಸಂಸ್ಥೆಗಳು ಇಲ್ಲದ್ದನ್ನು ಮನಗಂಡು ಇಲ್ಲಿನ ಜನತೆಗೆ ಆರ್ಥಿಕ ವ್ಯವಹಾರ ನಡೆಸಲು ಅನುಕೂಲ ಆಗಲು ನಮ್ಮ ಸಂಘದ ಶಾಖೆಯನ್ನು ತೆರೆದಿದ್ದೇವೆ. ಊರಿನ ಜನರು ನಮ್ಮ ಸಂಘದಲ್ಲಿ ಹೆಚ್ಚಿನ ವ್ಯವಹಾರ ಮಾಡುವುದರ ಮೂಲಕ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕಿತ್ರೆ ದೇವಿಮನೆ ಆಡಳಿತ ಮಂಡಳಿಯ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರು ಅವರು ಭದ್ರತಾ ಕೊಠಡಿ ಉದ್ಘಾಟಿಸಿದರು. ಗ್ರಾಪಂ. ಮಾಜಿ ಅಧ್ಯಕ್ಷ ರಾಜು ನಾಯ್ಕ, ಶಿರಾಲಿ ಸೊಸೈಟಿ ಅಧ್ಯಕ್ಷ ವೆಂಕಟೇಶ ನಾಯ್ಕ, ಹಿರಿಯರಾದ ಉಮೇಶ ಹೆಗಡೆ, ಸುಕ್ರ ಗೊಂಡ, ಸಾಹಿತಿ ಶಂಭು ಹೆಗಡೆ, ಮಾರುಕೇರಿ ಗ್ರಾಪಂ ಅಧ್ಯಕ್ಷೆ ನಾಗವೇಣಿ ಗೊಂಡ, ಕಟಗಾರಕೊಪ್ಪ ಗ್ರಾಪಂ ಸದಸ್ಯರಾದ ರವಿದಾಸ ನಾಯ್ಕ, ನಾಗಮ್ಮ ಗೊಂಡ, ಸಂಘದ ನಿರ್ದೇಶಕರಾದ ಸೋಮಯ್ಯ ಗೊಂಡ, ಶಿವಾನಂದ ಹೆಬ್ಬಾರ, ಸುಧಾ ಹೆಗಡೆ, ಗಣಪಯ್ಯ ಹೆಗಡೆ, ಗಣೇಶ ಗೊಂಡ, ಶ್ರೀನಿವಾಸ ಹೆಬ್ಬಾರ, ನಾರಾಯಣ ಭಟ್ಟ, ಭಾಸ್ಕರ ಶೆಟ್ಟಿ, ಶೈಲಾ ಹೆಬ್ಬಾರ, ಕಾರ್ಯನಿರ್ವಾಹಕ ಶ್ರೀಧರ ಹೆಬ್ಬಾರ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಎಂ.ಡಿ. ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಕೃಷ್ಣ ಮೊಗೇರ ನಿರೂಪಿಸಿದರು. ನಿರ್ದೇಶಕ ಶೈಲೇಂದ್ರ ಜೈನ್ ವಂದಿಸಿದರು.