ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇಲ್ಲಿ ಸೇವಾ ಭಾವನೆಯಿಂದ ಕೆಲಸ ಮಾಡುವುದರಿಂದ ಇದರ ಪ್ರತಿಫಲವು ನೇರವಾಗಿ ರೈತರಿಗೆ ತಲುಪುತ್ತದೆ. ಇವುಗಳನ್ನು ಉಳಿಸಿ ಗ್ರಾಮೀಣಾಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ ಸಲಹೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಸಹಕಾರ ಇಲಾಖೆಯ ಕೇಂದ್ರ ಯೋಜನೆಗಳ ಜಿಲ್ಲಾ ಸಹಕಾರ ಅಭಿವೃದ್ಧಿ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.ಸಹಕಾರ ಸಂಘಗಳು ಗ್ರಾಮೀಣ ಜನರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಇವುಗಳನ್ನು ಉಳಿಸಿ ಗ್ರಾಮೀಣಾಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಜಿಲ್ಲೆಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಭಿವೃದ್ಧಿಗಾಗಿ ಹಾಗೂ ರಚನೆ ಮಾಡಲು ಕೆಎಂಎಫ್ ಕಲಬುರಗಿ, ಪಶು ಸಂಗೋಪನ ಇಲಾಖೆ ಮತ್ತು ರೂಪರೇಷೆಗಳನ್ನು ರಚಿಸಿ ರೈತ ಬಾಂಧವರಿಗೆ ಉಪಯೋಗ ಆಗುವಂತೆ ಸಂಘಗಳನ್ನು ರಚನೆ ಮಾಡಲು ಹಾಗೂ ಜಿಲ್ಲೆಯಲ್ಲಿ ಹೊಸದಾಗಿ ಮೀನುಗಾರಿಕಾ ಸಹಕಾರ ಸಂಘಗಳನ್ನು ರಚಿಸಲು ನಿರ್ದೇಶಿಸಿದರು.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸಿಎಸ್‌ಸಿ ಕೇಂದ್ರಗಳು, ರಸಗೊಬ್ಬರ ಮಾರಾಟ ಕೇಂದ್ರ ಹಾಗೂ ರೈತ ಉತ್ಪಾದಕ ಸಂಸ್ಥೆಯಾಗಿ ರಚಿಸಲು ರೈತರಿಗೆ ಮಾರ್ಗದರ್ಶನ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಪ್ರಧಾನ ಮಂತ್ರಿಗಳ ಆಶಯದಂತೆ ವಿಶ್ವದ ಅತೀ ದೊಡ್ಡದಾದ ಗೋದಾಮು ನಿರ್ಮಾಣ ಮಾಡುವ ಕುರಿತು, ಯಾವುದಾದರೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಗೋದಾಮು ನಿರ್ಮಾಣ ಮಾಡಲು ಇಚ್ಚಿಸಿದ್ದಲ್ಲಿ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು.ಜಿಲ್ಲೆಯಲ್ಲಿ ಮಾರ್ಚ್ 2024ರ ಅಂತ್ಯಕ್ಕೆ ಒಟ್ಟು 109 ಸಂಘಗಳು ಕಾರ್ಯನಿರ್ವಸುಹಿತ್ತಿದ್ದು, ಸದರಿ ಯೋಜನೆ ಅಡಿಯಲ್ಲಿ ಮೊದಲನೇ ಹಂತದಲ್ಲಿ 86 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಗಣಕಯಂತ್ರ ಹಾಗೂ ಇತರೆ ಸಾಮಾಗ್ರಿಗಳು ನೀಡಲಾಗಿದೆ. ಈ ಪೈಕಿ ಒಟ್ಟು 85ಸಂಘಗಳ ಗಣಕೀಕರಣದಲ್ಲಿ ದಾಖಲಾತಿಗಳನ್ನು ಅಪ್ಲೋಡ್ ಮಾಡುವ ಪ್ರಗತಿಯಲ್ಲಿದ್ದು 39 ಸಂಘಗಳ ಗಣಕೀಕರಣ ಪೂರ್ಣಗೊಂಡಿರುತ್ತದೆ.
ಎರಡನೇ ಹಂತದಲ್ಲಿ 19 ಸಂಘಗಳಿಗೆ ಅನುಮೋದನೆ ನೀಡಲಾಗಿರುತ್ತದೆ. ಗಣಕಯಂತ್ರ ಮತ್ತು ಇತರ ಸಾಮಾಗ್ರಿಗಳು ಬರುವುದು ಬಾಕಿ ಇರುತ್ತದೆ ಹಾಗೂ ಮೂರನೇ ಹಂತದಲ್ಲಿ ನಾಲ್ಕು ಸಂಘಗಳಿಗೆ ಅನುಮೋದನೆ ಪಡೆಯಲು ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.ಸಹಕಾರ ಸಂಘಗಳ ಉಪನಿಬಂಧಕರಾದ ಆರ್.ಪವನಕುಮಾರ, ಜಂಟಿ ಕೃಷಿ ನಿರ್ದೇಶಕ ಪಿ.ರವಿ, ಸಹಕಾರ ಸಂಘಗಳ ಲೆಕ್ಕಪರಿಶೋಧಕ ಮಹಿಬೂಬ, ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ವಿಶ್ವನಾಥರೆಡ್ಡಿ ದರ್ಶನಾಪೂರ, ಸಹಾಯಕ ನಿಬಂಧಕ ಸೀಮಾ ಫಾರೂಕಿ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಪಾಂಡುಗೌಡ ಪಾಟೀಲ್, ಕಲಬುರಗಿ ಡಿಸಿಸಿ ಬ್ಯಾಂಕ್ ಜನರಲ್ ಮ್ಯಾನೇಜರ್ ಮುತ್ತುರಾಜ್, ನಬಾರ್ಡ್ ಬ್ಯಾಂಕ್ ಡಿಡಿಎಂ ಲೋಹಿತ್ ಸೇರಿದಂತೆ ಸಮಿತಿಯಲ್ಲಿರುವ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿದ್ದರು.