ಸಾರಾಂಶ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಬಿಜೆಪಿ -ಜೆಡಿಎಸ್ ಮೈತ್ರಿ ಅಭ್ಯರ್ಥಿ ತಾವೇ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಘೋಷಿಸಿಕೊಂಡಿದ್ದಾರೆ.
ಎಂ.ಅಫ್ರೋಜ್ ಖಾನ್
ರಾಮನಗರ : ರಾಜಕೀಯ ಜಿದ್ದಾಜಿದ್ದಿನ ಕಣವಾಗಿರುವ ಬೊಂಬೆನಾಡು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಸದ್ಯ ಮಹತ್ವ ಪಡೆದುಕೊಂಡಿದೆ. ಬಿಜೆಪಿ -ಜೆಡಿಎಸ್ ಮೈತ್ರಿ ಅಭ್ಯರ್ಥಿ ತಾವೇ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಘೋಷಿಸಿಕೊಂಡಿದ್ದರೆ, ಕಾಂಗ್ರೆಸ್ ಪಕ್ಷದ ಅಚ್ಚರಿ ಅಭ್ಯರ್ಥಿ ಯಾರೆಂಬುದರ ಕುರಿತು ಸಾಕಷ್ಟು ಊಹಾಪೋಹ ಹರಿದಾಡುತ್ತಿರುವ ಕಾರಣ ಕುತೂಹಲವೂ ಹೆಚ್ಚಿಸಿದೆ.
ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ ಹಾಗೂ ಜೆಡಿಎಸ್-ಬಿಜೆಪಿ ಮಿತ್ರ ಪಕ್ಷಗಳ ಪೈಕಿ ಯಾವ ಪಕ್ಷದಿಂದ ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬ ಬಗ್ಗೆ ದಿನಕ್ಕೊಂದು ವದಂತಿಗಳು ಹರಿದಾಡುತ್ತಿತ್ತು. ಮೂರು ಪಕ್ಷಗಳಲ್ಲಿಯೂ ನಾಲ್ಕೈದು ಅಭ್ಯರ್ಥಿಗಳ ಹೆಸರು ಚರ್ಚೆಯಲ್ಲಿದ್ದವು. ಹೀಗಾಗಿ ಇದು ರಾಜಕೀಯ ವಲಯದಲ್ಲಿಯೂ ಸಾಕಷ್ಟು ಸದ್ದು ಮಾಡಿತ್ತು.
ಜೆಡಿಎಸ್ ಚಿಹ್ನೆಯಿಂದಲೇ ಸ್ಪರ್ಧೆ:
ಚನ್ನಪಟ್ಟಣ ಜೆಡಿಎಸ್ ಪಕ್ಷದ ಭದ್ರಕೋಟೆ. ಈ ಕ್ಷೇತ್ರ ಹೇಳಿ ಕೇಳಿ ಪ್ರಸ್ತುತ ಕೇಂದ್ರ ಸಂಪುಟ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ನಿಕಟಪೂರ್ವ ಶಾಸಕರಾಗಿದ್ದ ಕ್ಷೇತ್ರವಾಗಿದೆ. ಅಲ್ಲದೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಟಾಂಗ್ ಕೊಡಬೇಕಾದರೆ ಈ ಕ್ಷೇತ್ರದಲ್ಲಿ ಬಲಿಷ್ಠ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು.
ಈ ಕಾರಣದಿಂದಾಗಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯು ಕ್ಷೇತ್ರದಲ್ಲಿ ಪಕ್ಷದ ಚಿಹ್ನೆ ವಿನಿಮಯ ಮಾಡುವ ಹೊಸ ತಂತ್ರಗಾರಿಕೆ ಹೆಣೆದಿತ್ತು. ಅದರಂತೆ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದ ಚಿಹ್ನೆ ದೊರೆಯುತ್ತಿರುವುದು ಬಹುತೇಕ ಫಿಕ್ಸ್ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿತ್ತು. ಆದರೀಗ ಮೈತ್ರಿಕೂಟದ ಅಭ್ಯರ್ಥಿ ತಾವೇ ಎಂದು ಸಿ.ಪಿ.ಯೋಗೇಶ್ವರ್ ಘೋಷಿಸಿಕೊಂಡಿದ್ದಾಗಿದೆ. ಆದರೆ, ಜೆಡಿಎಸ್ - ಬಿಜೆಪಿ ಪೈಕಿ ಯಾವ ಪಕ್ಷದ ಚಿಹ್ನೆ ಅಡಿಯಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಇನ್ನೂ ಅಂತಿಮಗೊಂಡಿಲ್ಲ.
ಈಗಲೂ ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಅನಸೂಯ ಹಾಗೂ ಜಯಮುತ್ತು ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಬೇಕೆಂಬ ಕೂಗು ಜೆಡಿಎಸ್ ಪಾಳಯದಲ್ಲಿ ಬಲವಾಗಿ ಕೇಳಿ ಬರುತ್ತಿದೆ. ಮತ್ತೊಂದೆಡೆ
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರನ್ನು ಜೆಡಿಎಸ್ ಚಿಹ್ನೆಯಿಂದ ನಿಲ್ಲಿಸುವ ತಂತ್ರವೂ ಚಾಲ್ತಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಯೋಗೇಶ್ವರ್ ಗೆ ಬಿಜೆಪಿ ಬಿಟ್ಟು ಜೆಡಿಎಸ್ ಚಿಹ್ನೆಯಡಿ ಸ್ಪರ್ಧಿಸಿದರೆ ತನಗೆ ರಾಜಕೀಯವಾಗಿ ಎಲ್ಲಿ ಹಿನ್ನಡೆಯಾಗುತ್ತದೆಯೋ ಎಂಬ ಆತಂಕವೂ ಕಾಡುತ್ತಿದೆ.
ಕೈ ಆಕಾಂಕ್ಷಿಗಳ ಬಾಯಿ ಮುಚ್ಚಿಸಿದ ಡಿಕೆಶಿ:
ಈಗಾಗಲೇ ಚನ್ನಪಟ್ಟಣ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಘೋಷವಾಕ್ಯದಡಿ 9 ಜನಸ್ಪಂದನಾ ಸಭೆಗಳಲ್ಲಿ ಜನರಿಂದ ಅಹವಾಲು ಆಲಿಸುವ ಮೂಲಕ ಪಕ್ಷ ಸಂಘಟನೆಗೆ ಚಾಲನೆ ನೀಡಿದ್ದಾಗಿದೆ. ಇದು ಜೆಡಿಎಸ್ - ಬಿಜೆಪಿ ನಾಯಕರಲ್ಲಿ ಸಹಜವಾಗಿಯೇ ತಳಮಳ ಉಂಟು ಮಾಡಿದೆ.
ಇಷ್ಟೇ ಅಲ್ಲದೆ, ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ಪಕ್ಷ ಸೂಚಿಸಿದರೆ ಅದಕ್ಕೆ ತಾವು ಸಿದ್ಧ ಇರುವುದಾಗಿಯೂ ಹೇಳಿರುವ ಡಿ.ಕೆ.ಶಿವಕುಮಾರ್ ಅಭ್ಯರ್ಥಿ ಆಯ್ಕೆ ಕುರಿತು ಕ್ಷೇತ್ರದ ಮತದಾರರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತೇವೆ. ಜೊತೆಗೆ ಮುಖ್ಯಮಂತ್ರಿ ಹಾಗೂ ಪ್ರಧಾನ ಕಾರ್ಯದರ್ಶಿಯೊಂದಿಗೆ ಚರ್ಚಿಸುತ್ತೇವೆ. ಬಳಿಕ ಯಾರು ಸ್ಪರ್ಧಿಸಬೇಕೆಂದು ಪಕ್ಷದ ಚುನಾವಣಾ ಸಮಿತಿಯಲ್ಲಿ ತೀರ್ಮಾನಿಸುತ್ತೇವೆ ಎಂದಿದ್ದಾರೆ.
ಈ ಮೂಲಕ ಡಿ.ಕೆ.ಶಿವಕುಮಾರ್ ಉಪಚುನಾವಣೆಯಲ್ಲಿ ಬೇರೆ ಯಾವ ನಾಯಕರು ಟಿಕೆಟ್ ಬಯಕೆ ವ್ಯಕ್ತಪಡಿಸದಂತೆ ಆಕಾಂಕ್ಷಿಗಳ ಬಾಯಿ ಮುಚ್ಚಿಸುವ ಜೊತೆಗೆ ತಾನು ಸ್ಪರ್ಧೆ ಮಾಡದಿದ್ದರು ಸಹ ತಾವು ಸೂಚಿಸಿದವರೇ ಅಭ್ಯರ್ಥಿಯಾಗಲಿದ್ದು, ಅವರ ಗೆಲುವಿಗಾಗಿ ಎಲ್ಲರೂ ಶ್ರಮಿಸಲೇ ಬೇಕೆಂಬ ಅನಿವಾರ್ಯತೆಯನ್ನು ಸೃಷ್ಟಿ ಮಾಡಿದ್ದಾರೆ.
ಸದ್ಯಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪುತ್ರಿ ಐಶ್ವರ್ಯ, ಮಾಜಿ ಸಂಸದ ಡಿ.ಕೆ.ಸುರೇಶ್, ವಿಧಾನಸಭಾ ಚುನಾವಣೆಯಲ್ಲಿ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಪರಾಜಿತರಾದ ಕುಸುಮಾ ಹನುಮಂತರಾಯಪ್ಪ ಹಾಗೂ ವಿಧಾನ ಪರಿವತ್ ಸದಸ್ಯ ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ.
ಸದ್ಯದ ಪರಿಸ್ಥಿತಿಯಲ್ಲಿ ಚನ್ನಪಟ್ಟಣ ಉಪ ಚುನಾವಣೆ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ನಡುವಿನ ಹಣಾಹಣಿಯಾಗಿದೆ. ಅಭ್ಯರ್ಥಿಗಳಾಗಿ ಕಣಕ್ಕೆ ಯಾರೇ ಬಂದರೂ ಇಬ್ಬರಿಗೂ ಇದು ಪ್ರತಿಷ್ಠೆಯ ಚುನಾವಣೆ. ಡಿ.ಕೆ.ಶಿವಕುಮಾರ್ ಶತಾಯಗತಾಯ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಪಣ ತೊಟ್ಟಿದ್ದರೆ, ಕ್ಷೇತ್ರವನ್ನು ಉಳಿಸಿಕೊಳ್ಳಲೇ ಬೇಕಿರುವುದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಅನಿವಾರ್ಯವಾಗಿದೆ.
ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ತಾವೆಂದು ಯೋಗೇಶ್ವರ್ ಸ್ವಯಂ ಘೋಷಿಸಿಕೊಂಡಿದ್ದಾರೆಯೇ ಹೊರತು ಬಿಜೆಪಿ ಅಥವಾ ಜೆಡಿಎಸ್ ಪಕ್ಷದ ಅಧಿಕೃತ ಘೋಷಣೆ ಅಲ್ಲ. ಹೀಗಾಗಿ ಮೈತ್ರಿಕೂಟದ ಅಧಿಕೃತ ಅಭ್ಯರ್ಥಿ ಯಾರೆಂಬುದನ್ನು ನೋಡಿಕೊಂಡು ತನ್ನ ಅಭ್ಯರ್ಥಿಯನ್ನು ಘೋಷಿಸುವ ತೀರ್ಮಾನಕ್ಕೆ ಕಾಂಗ್ರೆಸ್ ನಾಯಕರು ಬಂದಂತಿದೆ.
ಸಿಪಿವೈನಿಂದ ಒತ್ತಡ ಹೇರುವ ತಂತ್ರಗಾರಿಕೆ
ಎರಡು ಚುನಾವಣೆಯಲ್ಲಿ ಸೋತಿರುವ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುವುದಿಲ್ಲ. ಜೆಡಿಎಸ್ ಬಗ್ಗೆ, ಜನರ ಬಗ್ಗೆ ಕಾಳಜಿ ಹೊಂದಿರುವ ಸಿ.ಪಿ.ಯೋಗೀಶ್ವರ್ ಅಂತಹ ಅಭ್ಯರ್ಥಿ ಸ್ಪರ್ಧಿಸಬಹುದು. ಬಿಜೆಪಿ-ಜೆಡಿಎಸ್ ನಡುವೆ ಯಾವುದೇ ಗೊಂದಲವಾಗದಂತೆ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಆದರೀಗ ಬಿಜೆಪಿ ಹಾಗೂ ಜೆಡಿಎಸ್ ವರಿಷ್ಠರು ಘೋಷಣೆ ಮಾಡುವುದಕ್ಕೂ ಮುನ್ನವೇ ಯೋಗೇಶ್ವರ್ ತಾನೇ ಮೈತ್ರಿ ಅಭ್ಯರ್ಥಿಯೆಂದು ಹೇಳಿಕೊಂಡಿದ್ದಾರೆ. ಇದು ಉಭಯ ಪಕ್ಷಗಳ ವರಿಷ್ಠರ ಮೇಲೆ ಒತ್ತಡ ಹೇರುವ ತಂತ್ರಗಾರಿಕೆಯ ಭಾಗ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.