ಬಿಸಿಲಿನಿಂದ ತಪ್ಪಿಸಿಕೊಳ್ಳಲು ಬೆಳಗ್ಗೆ, ಸಂಜೆ ಮಾತ್ರ ಪ್ರಚಾರ

| Published : Apr 09 2024, 12:51 AM IST / Updated: Apr 09 2024, 04:51 AM IST

ಬಿಸಿಲಿನಿಂದ ತಪ್ಪಿಸಿಕೊಳ್ಳಲು ಬೆಳಗ್ಗೆ, ಸಂಜೆ ಮಾತ್ರ ಪ್ರಚಾರ
Share this Article
  • FB
  • TW
  • Linkdin
  • Email

ಸಾರಾಂಶ

ಕರಾವಳಿಯಲ್ಲಿ ಬಿಸಿಲು 34ರಿಂದ 36 ಡಿಗ್ರಿ ಸೆಲ್ಷಿಯಸ್ ನಷ್ಟಿದ್ದು, ಕೆಲವು ದಿನಗಳಲ್ಲಿ ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಜೊತೆಗೆ ಉಷ್ಣ ಅಲೆ (ಹೀಟ್ ವೇವ್) ಕೂಡ ಕಾಣಿಸಿಕೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದೆ.

 ಉಡುಪಿ  :  ಕರಾವಳಿಯಲ್ಲಿ ಬಿಸಿಲಿನ ತೀವ್ರತೆ ದಿನೇದಿನೆ ಹೆಚ್ಚುತ್ತಿದ್ದು, ಲೋಕಸಭಾ ಚುನಾವಣಾ ಪ್ರಚಾರದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಎಸಿ ಕಾರಿನಲ್ಲಿ ತಿರುಗಾಡುತ್ತಿದ್ದ ರಾಜಕಾರಣಿಗಳು ದಿನವಿಡೀ ಅಲ್ಲಲ್ಲಿ ಸಭೆಗಳಲ್ಲಿ ಭಾಷಣ ಮಾಡುತ್ತಾ ಧಗೆಗೆ ಬಳಲಿ ಬೆಂಡಾಗುತ್ತಿದ್ದಾರೆ. ಮನೆಮನೆ ತಿರುಗುತ್ತಿರುವ ಕಾರ್ಯಕರ್ತರಂತೂ ಬಿಸಿಲಿನಿಂದ ಹೈರಾಣಾಗುತ್ತಿದ್ದಾರೆ.

ಕರಾವಳಿಯಲ್ಲಿ ಬಿಸಿಲು 34ರಿಂದ 36 ಡಿಗ್ರಿ ಸೆಲ್ಷಿಯಸ್ ನಷ್ಟಿದ್ದು, ಕೆಲವು ದಿನಗಳಲ್ಲಿ ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಜೊತೆಗೆ ಉಷ್ಣ ಅಲೆ (ಹೀಟ್ ವೇವ್) ಕೂಡ ಕಾಣಿಸಿಕೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದೆ.

ಆದರೆ ಚುನಾವಣೆಗೆ ಇನ್ನು ಕೆಲವೇ ದಿನಗಳಷ್ಟೇ ಇರುವುದರಿಂದ ಅಭ್ಯರ್ಥಿಗಳಿಗೆ, ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ ಈ ಬಿಸಿಲು ಅಗ್ನಿಪರೀಕ್ಷೆಯನ್ನೊಡ್ಡುತ್ತಿದೆ. ಅನಿವಾರ್ಯವಾಗಿ ಅದನ್ನು ಎದುರಿಸಲೇ ಬೇಕಾಗಿದೆ.

ಅಭ್ಯರ್ಥಿಗಳು ಮತ್ತು ಪಕ್ಷದ ನಾಯಕರು ದಿನವಿಡೀ ಗಂಟೆಗೊಂದರಂತೆ ಊರೂರು ಸುತ್ತಿ ಮನೆ ಅಥವಾ ಸಣ್ಣ ಸಭಾಂಗಣಗಳಲ್ಲಿ, ನೂರಿನ್ನೂರು ಜನ ಸೇರುವ ಕಾರ್ನರ್ ಮೀಟಿಂಗ್‌ಗಳಲ್ಲಿ ಭಾಗವಹಿಸಿ ಮತಯಾಚನೆ ಮಾಡುತ್ತಿದ್ದಾರೆ. ಅವರು ಬಿಸಿಲಿನಿಂದ ತಪ್ಪಿಸಿಕೊಂಡರೂ ಸೆಕೆಯಿಂದ ತಪ್ಪಿಸಿಕೊಳ್ಳಲಾಗುತ್ತಿಲ್ಲ.

ಆದರೆ ಕುತ್ತಿಗೆಯಲ್ಲಿ ಪಕ್ಷದ ಶಾಲುಗಳನ್ನು ಧರಿಸಿ ಪಕ್ಷಕ್ಕಾಗಿ ಮುಡಿಪಾಗಿರುವ ಕಾರ್ಯಕರ್ತರ ಪಾಡು ಮಾತ್ರ ಶೋಚನೀಯವಾಗುತ್ತಿದೆ. ಸುಡುಬಿಸಿನಲ್ಲಿ ನಡೆದುಕೊಂಡು ಮನೆಮನೆಗೆ ತೆರಳುತ್ತಿರುವ ಈ ಕಾರ್ಯಕರ್ತರಂತೂ ನೆರಳು ಸಿಕ್ಕಲ್ಲಿ ನಿಂತು ಬೆವರೊರೆಸಿಕೊಳ್ಳುತ್ತಿದ್ದಾರೆ.

ಹಗಲಿನ ಬಿಸಿಲು ತಡೆದುಕೊಳ್ಳುವುದಕ್ಕಾಗದೇ ಬೆಳಗ್ಗೆ ಮತ್ತು ಸಂಜೆಯ ಹೊತ್ತಿನಲ್ಲಿ ಮಾತ್ರ ಕಾರ್ಯಕರ್ತರು ಮನೆಮನೆಗೆ ಭೇಟಿಗೆ ತೆರಳುತ್ತಿದ್ದಾರೆ.

ರಾಜಕೀಯ ಪಕ್ಷದ ಹಿರಿಯರೊಬ್ಬರು ತಮ್ಮ ಕಾಲದಲ್ಲಿ ಮಳೆಗಾಲ ಇರಲಿ ಬೇಸಿಗೆಗಾಲವೇ ಇರಲಿ ದೊಡ್ಡ ಗುಂಪುಕಟ್ಟಿಕೊಂಡು ಘೋಷಣೆಗಳನ್ನು ಕೂಗುತ್ತಾ ಊರೂರು ಸುತ್ತುತ್ತಿದ್ದುದನ್ನು ನೆನಪಿಸಿಕೊಂಡು, ಈಗ ಕಾರ್ಯಕರ್ತರಲ್ಲಿ ಆ ಉಮೇದು ಇಲ್ಲ, ಬಿಸಿಲಿನಲ್ಲಿ ಹುಡುಗರು ತಿರುಗಾಡುವುದಕ್ಕೆ ಒಪ್ಪುತ್ತಿಲ್ಲ ಮಾರ್ರೆ ಎಂದು ಅಲವತ್ತುಕೊಂಡರು.