ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ನಡೆಯಲಿರುವ ಸಚಿವ ಸಂಪುಟ ಸಭೆಗೆ ದ.ಕ. ಜಿಲ್ಲಾಡಳಿತ ಭರದ ಸಿದ್ಧತೆ ನಡೆಸಿದೆ. ನಗರದ ಹೊರವಲಯದ ಪಡೀಲ್‌ನ ಪ್ರಜಾಸೌಧದ ಜಿಲ್ಲಾಧಿಕಾರಿ ಕಚೇರಿಯಲ್ಲೇ ಸಚಿವ ಸಂಪುಟ ಸಭೆ ನಡೆಯಲಿದ್ದು, ಡಿಸಿ ಕಚೇರಿಯ ಎರಡನೇ ಮಹಡಿಯಲ್ಲಿ ಮಿನಿ ಕ್ಯಾಬಿನೆಟ್ ಹಾಲ್ ನಿರ್ಮಿಸಲಾಗಿದೆ.

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ನಡೆಯಲಿರುವ ಸಚಿವ ಸಂಪುಟ ಸಭೆಗೆ ದ.ಕ. ಜಿಲ್ಲಾಡಳಿತ ಭರದ ಸಿದ್ಧತೆ ನಡೆಸಿದೆ. ನಗರದ ಹೊರವಲಯದ ಪಡೀಲ್‌ನ ಪ್ರಜಾಸೌಧದ ಜಿಲ್ಲಾಧಿಕಾರಿ ಕಚೇರಿಯಲ್ಲೇ ಸಚಿವ ಸಂಪುಟ ಸಭೆ ನಡೆಯಲಿದ್ದು, ಡಿಸಿ ಕಚೇರಿಯ ಎರಡನೇ ಮಹಡಿಯಲ್ಲಿ ಮಿನಿ ಕ್ಯಾಬಿನೆಟ್ ಹಾಲ್ ನಿರ್ಮಿಸಲಾಗಿದೆ.

ಜಿಲ್ಲಾಧಿಕಾರಿ ಕಚೇರಿಯ ರೆಕಾರ್ಡ್ ರೂಂ ಅನ್ನು ಮಿನಿ ಕ್ಯಾಬಿನೆಟ್ ಹಾಲ್ ಆಗಿ ಪರಿವರ್ತಿಸಲಾಗಿದೆ. ಜಿಲ್ಲಾ ಕೇಂದ್ರದಲ್ಲೇ ಕ್ಯಾಬಿನೆಟ್‌ ಸಭೆ ನಡೆಯಬೇಕಾಗಿರುವುದರಿಂದ ಜಿಲ್ಲಾಧಿಕಾರಿಗಳ ಸಂಕೀರ್ಣವನ್ನೇ ಅಂತಿಮಗೊಳಿಸಲಾಗಿದೆ.

300ಕ್ಕೂ ಅಧಿಕ ಮಂದಿ ಮಂದಿ:

ಕ್ಯಾಬಿನೆಟ್‌ ಸಭೆಯಲ್ಲಿ 34 ಮಂದಿ ಸಚಿವರು ಭಾಗವಹಿಸುವುದರಿಂದ ಸಚಿವರಲ್ಲದೆ, ಅವರ ಆಪ್ತ ಕಾರ್ಯದರ್ಶಿ, ಆಯಾ ಇಲಾಖೆಯ ಉನ್ನತ ಅಧಿಕಾರಿಗಳು ಸೇರಿದಂತೆ ಒಟ್ಟು 300ಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ಈ ಪೈಕಿ ಕ್ಯಾಬಿನೆಟ್‌ ನಡೆಸುವ ಹಾಲ್‌ನಲ್ಲಿ ಸಚಿವರು, ಅವರ ಕಾರ್ಯದರ್ಶಿ, ಉನ್ನತಾಧಿಕಾರಿಗಳಿಗೆ, ಬಳಿಕ ಪ್ರತ್ಯೇಕವಾಗಿ ಶಾಸಕರಿಗೆ, ಗಣ್ಯರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

50ಕ್ಕೂ ಅಧಿಕ ಅಜೆಂಡಾ?:

ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೂ ಕ್ಯಾಬಿನೆಟ್‌ ಸಭೆ ನಡೆಯುವ ಸಂಭವ ಹೇಳಲಾಗಿದೆ. ಸುಮಾರು ಮೂರು ಗಂಟೆಗೂ ಹೆಚ್ಚು ಅವಧಿ ಸಭೆ ನಡೆಯಲಿದ್ದು, ಇದರಲ್ಲಿ ಕರಾವಳಿ ಮಾತ್ರವಲ್ಲ ಇಡೀ ರಾಜ್ಯದ ಅಗತ್ಯ ಯೋಜನೆ, ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾಪವಾಗಲಿದೆ. ಲಭ್ಯ ಮಾಹಿತಿ ಪ್ರಕಾರ, ಸುಮಾರು 50ಕ್ಕೂ ಅಧಿಕ ಅಜೆಂಡಾ ಕ್ಯಾಬಿನೆಟ್‌ನಲ್ಲಿ ಮಂಡನೆಯಾಗುವ ನಿರೀಕ್ಷೆ ಹೊಂದಲಾಗಿದೆ. ನಿಗದಿತ ಅವಧಿಯಲ್ಲಿ ಸಭೆ ಶುರುವಾದರೆ ಮೂರು ಗಂಟೆಗೂ ಅಧಿಕ ಕಾಲ ಕ್ಯಾಬಿನೆಟ್‌ ಮುಂದುವರಿಯುವ ಸಾಧ್ಯತೆ ಇದೆ.

ಈ ಅಜೆಂಡಾಗಳಲ್ಲಿ ಕರಾವಳಿ ಅಭಿವೃದ್ಧಿ ಕುರಿತ ಅಜೆಂಡಾಗಳೇ ಹೆಚ್ಚಾಗಿದ್ದು, ಉಳಿದಂತೆ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳ ಅಭಿವೃದ್ಧಿ ವಿಚಾರವನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಬಿಗು ಭದ್ರತೆ:

ಸಂಪುಟ ಸಭೆ ನಡೆಯುವ ಪ್ರಜಾಸೌಧ ಮಾತ್ರವಲ್ಲ ಸುತ್ತಮುತ್ತ ಬಿಗು ಭದ್ರತೆ ಇರಲಿದೆ. ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಎಐ ತಂತ್ರಜ್ಞಾನದ ನೆರವನ್ನೂ ಪಡೆಯಲಾಗುತ್ತಿದೆ. ಸಚಿವರು, ಶಾಸಕರು, ಗಣ್ಯರು ಹಾಗೂ ಮಾಧ್ಯಮ ಮಂದಿ ಬೆಳಗ್ಗೆ 9.30ರ ಸುಮಾರಿಗೆ ಪ್ರಜಾಸೌಧ ಪ್ರವೇಶಿಸಿದರೆ, ಸಂಪುಟ ಸಭೆ ಮುಕ್ತಾಯ ಬಳಿಕವೇ ಹೊರಗೆ ಹೋಗಲು ಸಾಧ್ಯ. ಸಂಪುಟ ಸಭೆ ಮುಕ್ತಾಯ ಬಳಿಕ ಸ್ವತಃ ಮುಖ್ಯಮಂತ್ರಿಯೇ ಮಾಧ್ಯಮಗಳಿಗೆ ಮಾಹಿತಿ ನೀಡಲಿದ್ದಾರೆ. ಕರಾವ‍ಳಿಯಲ್ಲಿ ಪ್ರಥಮ:

ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾದ ಬಳಿಕ ಕರಾವಳಿಯಲ್ಲಿ ನಡೆಯುವ ಮೊಟ್ಟಮೊದಲ ಕ್ಯಾಬಿನೆಟ್‌ ಸಭೆ ಇದಾಗಿದೆ. ಡಿಕೆಶಿ ಕೂಡ ಬೆಂಗಳೂರು ಹೊರಗೆ ಜಿಲ್ಲೆಯೊಂದರಲ್ಲಿ ಮಾಡುವ ಪ್ರಥಮ ಕ್ಯಾಬಿನೆಟ್‌ ಇದು. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಈ ಮೊದಲು ಚಾಮರಾಜನಗರದ ಮಲೆಮಹದೇಶ್ವರ, ಚಿಕ್ಕಮಗಳೂರಿನ ನಂದಿ ಹಿಲ್ಸ್‌, ಕಲಬುರಗಿ ಜಿಲ್ಲೆಗಳಲ್ಲಿ ಸಚಿವ ಸಂಪುಟ ಸಭೆ ನಡೆದಿದೆ. ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿರುವ ನಾಲ್ಕನೇ ಸಚಿವ ಸಂಪುಟ ಸಭೆ ಇದು. ಹೀಗಾಗಿ ಈ ಸಚಿವ ಸಂಪುಟ ಸಭೆ ಕರಾವಳಿ ಅಭಿವೃದ್ಧಿ ವಿಚಾರದಲ್ಲಿ ಮಹತ್ವಾಕಾಂಕ್ಷೆಯನ್ನು ಇರಿಸಿಕೊಂಡಿದೆ.

ಏಕಮುಖ ಸಂಚಾರ:

ಕ್ಯಾಬಿನೆಟ್‌ ಸಭೆಗೆ ಆಗಮಿಸುವ ಸಚಿವರು ಹಾಗೂ ಉನ್ನತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕಚೇರಿ ಆವರದಲ್ಲೇ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸಲಾಗಿದೆ. ಉಳಿದಂತೆ ಶಾಸಕರು, ಇತರೆ ಅಧಿಕಾರಿಗಳು, ಗಣ್ಯರಿಗೆ ಪ್ರಜಾಸೌಧದ ಹೊರಗೆ ಪಾರ್ಕಿಂಗ್‌ ಇರಲಿದೆ.

ಸಂಪುಟ ಸಭೆ ಹಿನ್ನೆಲೆಯಲ್ಲಿ ಪಡೀಲ್‌ ರಸ್ತೆ ಹಾಗೂ ಬಜಾಲ್‌ ರಸ್ತೆಗಳಲ್ಲಿ ಇಡೀ ದಿನ ಏಕಮುಖ ಸಂಚಾರ ಇರಲಿದೆ. ಈ ರಸ್ತೆಗಳ ಇಕ್ಕೆಲಗಳಲ್ಲಿ ಶಾಸಕರು, ಅಧಿಕಾರಿಗಳಿಗೆ ಪಾರ್ಕಿಂಗ್‌ ವ್ಯವಸ್ಥೆಗೊಳಿಸಲಾಗಿದೆ.

ಮುಖ್ಯಮಂತ್ರಿ ಅವರನ್ನು ಸ್ವಾಗತಿಸುವ ಹಿನ್ನೆಲೆಯಲ್ಲಿ ಯಕ್ಷಗಾನದ ಕಲಾಕೃತಿಯೊಂದಿಗೆ ವಿಶೇಷ ರಂಗೋಲಿ ರಚಿಸಲಾಗಿದೆ.

ಜಿಲ್ಲಾಧಿಕಾರಿ ಕಚೇರಿ ಹಾಗೂ ಸುತ್ತಮುತ್ತಲಿನ ವಠಾರವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಿ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗುತ್ತಿದೆ. ಸಂಕೀರ್ಣದ ಸುತ್ತ ನೆಲಹಾಸು, ಪಾರ್ಕಿಂಗ್‌ ವ್ಯವಸ್ಥೆಗೊಳಿಸಲಾಗುತ್ತಿದೆ. ......................................

ಕರಾವಳಿ ಅಭಿವೃದ್ಧಿ ಪ್ರಮುಖ ಚರ್ಚೆ: ಖಾದರ್‌

ಈ ಕುರಿತು ಬುಧವಾರ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಸಚಿವ ಸಂಪುಟ ಸಭೆ ನಡೆಯುತ್ತಿರುವುದು ಸಂತೋಷದ ಸಂಗತಿ ಎಂದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನುಡಿದಂತೆ ನಡೆದಿದ್ದಾರೆ. ಸಭೆಗೆ ಆಗಮಿಸುವ ಎಲ್ಲ ಸಚಿವರು ಮತ್ತು ಅಧಿಕಾರಿಗಳನ್ನು ಕರಾವಳಿಯ ಸಂಸ್ಕೃತಿ ಹಾಗೂ ಸಂಪ್ರದಾಯದಂತೆ ಸ್ವಾಗತಿಸಲಾಗುವುದು. ಡಿಸಿ ಕಚೇರಿಯಲ್ಲಿ ಬಹುತೇಕ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಹೇಳಿದರು.

ಸಭೆಯಲ್ಲಿ ಕರಾವಳಿಯ ಪ್ರಮುಖ ಸಮಸ್ಯೆಗಳು ಹಾಗೂ ಅಭಿವೃದ್ಧಿ ವಿಚಾರಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ. ಪ್ರವಾಸೋದ್ಯಮ, ಕೌಶಲ್ಯ ತರಬೇತಿ, ಐಟಿ-ಬಿಟಿ, ರಸ್ತೆ ಮತ್ತು ಸೇತುವೆ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳಿಗೆ ಒಪ್ಪಿಗೆ ದೊರೆಯುವ ವಿಶ್ವಾಸವಿದೆ ಎಂದು ಖಾದರ್ ತಿಳಿಸಿದರು.ನಮ್ಮ ಅಜೆಂಡಾ ಶಾಂತಿ, ಸೌಹಾರ್ದತೆ, ಅಭಿವೃದ್ಧಿ:

ಕರಾವಳಿ ಅಭಿವೃದ್ಧಿಯ ವಿಚಾರದಲ್ಲಿ ಸರ್ಕಾರದ ಉದ್ದೇಶ ರಾಜಕೀಯವಲ್ಲ. ಭವಿಷ್ಯದಲ್ಲಿ ಜನರಿಗೆ ಪ್ರಯೋಜನವಾಗುವ ಕೆಲಸಗಳನ್ನು ಕೈಗೊಳ್ಳುವುದು ಸರ್ಕಾರದ ಅಜೆಂಡಾ. ನಮ್ಮ ಸಂಕಲ್ಪ ಸದೃಢ ಕರ್ನಾಟಕ ನಿರ್ಮಾಣ ಎಂದು ಖಾದರ್ ಹೇಳಿದರು.ಬೇರೆ ಪಕ್ಷಗಳಿಗೆ ಬೇರೆ ಅಜೆಂಡಾ ಇರಬಹುದು. ನಮ್ಮದು ಶಾಂತಿ, ಸೌಹಾರ್ದತೆ ಮತ್ತು ಅಭಿವೃದ್ಧಿ. ಜಿಲ್ಲೆಗೆ ಯಾರು ಏನು ಅಭಿವೃದ್ಧಿ ಮಾಡಿದ್ದಾರೆ, ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳುತ್ತಾರೆ ಎಂದರು.

ಜನರು ಕೇವಲ ಭಾವನಾತ್ಮಕ ವಿಚಾರಗಳ ಆಧಾರದಲ್ಲಿ ತೀರ್ಮಾನ ಕೈಗೊಳ್ಳಬಾರದು. ಹಿಂದೆ ನಡೆದ ಬೆಳವಣಿಗೆಗಳ ಅನುಭವ ಜನರಿಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಜನರು ಯೋಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ. ಅಭಿವೃದ್ಧಿ ಮತ್ತು ಸೌಹಾರ್ದತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವನ್ನು ಆಯ್ಕೆ ಮಾಡಲಿದ್ದಾರೆ ಎಂದು ಹೇಳಿದರು.

------------------ಇಂದು ಸಂಜೆ ತಣ್ಣೀರುಬಾವಿಯಲ್ಲಿ ಡಿನ್ನರ್‌!

ಸೆ.18ರ ಸಚಿವ ಸಂಪುಟ ಸಭೆಗೆ ಆಗಮಿಸುವ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರು ಮತ್ತು ಅಧಿಕಾರಿಗಳಿಗೆ ಕರಾವಳಿಯ ವಿಶೇಷ ಆತಿಥ್ಯವನ್ನು ನಗರದ ಹೊರವಲಯದ ತಣ್ಣೀರುಬಾವಿ ಬೀಚ್‌ನಲ್ಲಿ ಆಯೋಜಿಸಲಾಗಿದೆ. ಅಲ್ಲಿ ಜರ್ಮನ್‌ ನಿರ್ಮಿತ ವಿಶಾಲ ಟೆಂಟ್‌ ಅಳವಡಿಸಲಾಗಿದ್ದು, ಕರಾವಳಿಯ ವಿಶೇಷ ಖಾದ್ಯ, ಮನೋರಂಜನೆ, ಕ್ರೀಡೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಗುರುವಾರ ಸಂಜೆಯ ಡಿನ್ನರ್‌ಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಜಿಲ್ಲಾಡಳಿತ ನಡೆಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌ ಅವರು ಅಂತಿಮ ಸಿದ್ಧತೆಗಳ ಪರಿಶೀಲನೆ ನಡೆಸಿದ್ದಾರೆ.